More

    2ನೇ ಹಂತದ ಲಸಿಕಾ ಅಭಿಯಾನ ಸಿದ್ಧತೆ, ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ದಿ, ಪೌರಾಡಳಿತ ವಿಭಾಗದವರಿಗೆ ವ್ಯಾಕ್ಸಿನ್

    ಮಂಗಳೂರು/ಉಡುಪಿ: ಒಂದನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಪ್ರಗತಿಯಲ್ಲಿರುವಂತೆ ಎರಡನೇ ಹಂತದ ಲಸಿಕಾ ಕಾರ್ಯಕ್ರಮಕ್ಕೆ ಫೆ.8ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಾಲನೆ ದೊರೆಯಲಿದೆ.

    ಗೃಹ ಇಲಾಖೆ ವ್ಯಾಪ್ತಿಯ ಪೊಲೀಸ್ ಹಾಗೂ ವಿಭಾಗ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ.

    ಈಗಾಗಲೇ ದ.ಕ. ಜಿಲ್ಲೆಯಲ್ಲಿ 8,568 ಮಂದಿ ನೋಂದಾಯಿಸಿ ಕೊಂಡಿದ್ದಾರೆ. ಮೊದಲ ಹಂತದ ಲಸಿಕಾ ಅಭಿಯಾನದಲ್ಲಿ ಗುರುವಾರದವರೆಗೆ ಒಟ್ಟು 310 ಸೆಷನ್ ಮುಗಿದಿದೆ. ಜಿಲ್ಲೆಯಲ್ಲಿ 52,381 ಮಂದಿ ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದರು. ಗುರುವಾರದವರೆಗೆ 27,901 ಮಂದಿ ಲಸಿಕೆ ಪಡೆಯಬೇಕಾಗಿತ್ತು. ಇದರಲ್ಲಿ 16,582 ಮಂದಿ ಲಸಿಕೆ ಸ್ವೀಕರಿಸಿದ್ದು, ಅದರಂತೆ ಶೇ.59.4 ಗುರಿ ಸಾಧಿಸಲಾಗಿದೆ. ಶನಿವಾರದ ವೇಳೆಗೆ ಶೇ.100ರಷ್ಟು ಸರ್ಕಾರಿ ಸಿಬ್ಬಂದಿ ಲಸಿಕೆ ಪಡೆಯಲಿದ್ದು, ಉಳಿದವರು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಸಿಬ್ಬಂದಿ. ಫೆ.14ರೊಳಗೆ ಈ ಎಲ್ಲರೂ ಲಸಿಕೆ ಪಡೆಯುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

    14ರಿಂದ ಎರಡನೇ ಡೋಸ್: ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮೊದಲ ಹಂತದ ಲಸಿಕ ಅಭಿಯಾನ ಜ.16ರಂದು ಆರಂಭವಾಗಿತ್ತು. ಮೊದಲ ಹಂತದಲ್ಲಿ ಲಸಿಕೆ ಪಡೆದವರು 28 ದಿನಗಳ ಬಳಿಕೆ ಎರಡನೇ ಡೋಸ್ ಪಡೆಯಬೇಕಾಗಿದೆ. ಅದರಂತೆ ಫೆ.14ರಂದು ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಲಸಿಕೆ ಪಡೆದ 4ರಿಂದ 12 ವಾರದ ಒಳಗೆ ಎರಡನೇ ಲಸಿಕೆ ಪಡೆಯುವ ಅವಕಾಶವಿದೆ. ಪ್ರತಿಯೊಬ್ಬರಿಗೂ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ.

    ಉಡುಪಿಯಲ್ಲಿ 4012 ಮಂದಿ ಆಯ್ಕೆ: ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಎರಡನೇ ಹಂತದ ಲಸಿಕೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಹಿತ ಮುಂಚೂಣಿ ಕೋವಿಡ್ ವಾರಿಯರ್ಸ್‌ಗಳನ್ನು ಆಯ್ಕೆ ಮಾಡಲಾಗಿದ್ದು, 4012 ಮಂದಿಗೆ ಲಸಿಕೆ ನೀಡಲಾಗುತ್ತದೆ. ಇದರಲ್ಲಿ 1,882 ಪೊಲೀಸ್ ಇಲಾಖೆ, 357 ಸ್ಥಳೀಯಾಡಳಿತ ಸಂಸ್ಥೆ, 555 ಕಂದಾಯ ಇಲಾಖೆ, 1202 ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, 16 ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

    ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಎರಡು ಲಸಿಕಾ ಕೇಂದ್ರ ತೆರೆಯಲಾಗುವುದು. ಜಿಲ್ಲಾಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ ಒಂದೊಂದು ಲಸಿಕೆ ಕೇಂದ್ರ ತೆರೆಯಲಾಗುವುದು. ಮೊದಲ ಹಂತದಲ್ಲಿ 23,350 ಮಂದಿಯಲ್ಲಿ ಇದೂವರೆಗೆ 13,699 ಮಂದಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದು, ಶೇ.54 ಗುರಿ ಸಾಧಿಸಲಾಗಿದೆ. ಎರಡನೇ ಹಂತದ ಜತೆಗೆ ಮೊದಲ ಹಂತದ ಪ್ರಕ್ರಿಯೆಯೂ ನಡೆಯುತ್ತಿರುತ್ತದೆ. ಫೆ.8ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಎಡಿಸಿ ಕೋವಿಶೀಲ್ಡ್ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಡಿಎಚ್‌ಒ ವಿಜಯವಾಣಿಗೆ ತಿಳಿಸಿದರು.

    ದ.ಕ. 17, ಉಡುಪಿ 21 ಪಾಸಿಟಿವ್: ದ.ಕ ಜಿಲ್ಲೆಯಲ್ಲಿ ಶುಕ್ರವಾರ 17 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಗುಣವಾಗಿ 16 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 33,947. ಇದರಲ್ಲಿ 32,903 ಮಂದಿ ಗುಣವಾಗಿ ಬಿಡುಗಡೆಯಾಗಿದ್ದು, 740 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 304 ಸಕ್ರಿಯ ಪ್ರಕರಣಗಳಿವೆ.

    ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 21 ಮಂದಿಗೆ ಕೋವಿಡ್ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 23378ಕ್ಕೆೆ ಏರಿಕೆಯಾಗಿದೆ. 1406 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದ್ದು, 10 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. 48 ಸಕ್ರಿಯ ಪ್ರಕರಣಗಳಿವೆ.

    ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಈ ನಡುವೆ ಎರಡನೇ ಹಂತದ ಲಸಿಕಾ ಅಭಿಯಾನಕ್ಕೆ ಸಿದ್ಧತೆ ಆರಂಭವಾಗಿದ್ದು, ಸೋಮವಾರದಿಂದ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಎರಡು ದಿನದಲ್ಲಿ ಜಿಲ್ಲೆಗೆ ವ್ಯಾಕ್ಸಿನ್ ಪೂರೈಕೆಯಾಗಲಿದೆ.

    ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts