More

    ಮಳೆಗಾಲಕ್ಕೆ ಭರದ ಸಿದ್ಧತೆ

    ಮಡಿಕೇರಿ:

    ಒಂದೆಡೆ ಅಬ್ಬರದಿಂದ ಚುನಾವಣಾ ಪ್ರಚಾರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕೊಡಗಿನಲ್ಲಿ ಮಳೆಗಾಲದ ಸಿದ್ಧತೆ ಭರದಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರ ಮಳೆಗಾಲ ಶುರುವಾಗುತ್ತದೆ. ಜಿಲ್ಲೆಯಲ್ಲಿ ಒಮ್ಮೆ ಮಳೆ ಹಿಡಿದುಕೊಂಡರೆ ಅಕ್ಟೋಬರ್ ತನಕವೂ ಬಿಡುವುದಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ೫ ತಿಂಗಳ ಕಾಲ ಮಳೆಯನ್ನು ಎದುರಿಸಲು ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಲಾಗುತ್ತದೆ.

    ಕೊಡಗು ಕೂಡ ವಿಧಾನಸಭಾ ಚುನಾವಣಾ ಗುಂಗಿನಲ್ಲಿ ಮುಳುಗಿ ಹೋಗಿದೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದಲ್ಲಿ ರಾಜಕೀಯ ಹಣಾಹಣಿ ನಡೆಯುತ್ತಿದ್ದು ಜನಸಾಮಾನ್ಯರೂ ದೈನಂದಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತಾಗಿದೆ. ಆರೋಪ, ಪ್ರತ್ಯಾರೋಪ, ಪಕ್ಷ ಸೇರ್ಪಡೆ, ಪಕ್ಷಕ್ಕೆ ಗುಡ್ ಬೈ, ಸೋಲು, ಗೆಲುವಿನ ಚರ್ಚೆಯಂತಹ ವಿಷಯಗಳ ಮಧ್ಯೆಯೂ ಗ್ರಾಮೀಣರು ತಮ್ಮ ಬದುಕಿನ ಕರ್ತವ್ಯ ಮರೆಯುವಂತಿಲ್ಲ. ಚುನಾವಣೆ ಕಾವು ಮೇ ೧೩ಕ್ಕೆ ಆರಿ ಹೋಗುತ್ತದೆ. ಆದರೆ ನಂತರ ಬರುವ ಮಳೆಗಾಲವನ್ನು ಎದುರಿಸಬೇಕಾದರೆ ಈಗಿನಿಂದಲೇ ಪೂರ್ವ ಸಿದ್ಧತೆ ಅಗತ್ಯ. ಈ ಹಿನ್ನೆಲೆಯಲ್ಲಿ ಹೊರಲೋಕದಲ್ಲಿ ಚುನಾವಣೆ ಎಷ್ಟೇ ಅಬ್ಬರಿಸುತ್ತಿದ್ದರೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

    ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗಿನ ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿ ವ್ಯಾಪ್ತಿಯ ಪ್ರದೇಶಗಳು, ನಾಪೋಕ್ಲು ಹೋಬಳಿಯ ಕಕ್ಕಬ್ಬೆ ಸುತ್ತಮುತ್ತಲಿನ ಗ್ರಾಮಗಳು, ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಸೋಮವಾರಪೇಟೆ ತಾಲೂಕಿನ ಗರ್ವಾಲೆ, ಸೂರ್ಲಬ್ಬಿ, ಶಾಂತಳ್ಳಿ ಆಸುಪಾಸಿನ ಹಳ್ಳಿಗಳು, ವಿರಾಜಪೇಟೆ ತಾಲೂಕಿನಲ್ಲಿ ಕೇರಳ ಗಡಿಯಂಚಿನಲ್ಲಿ ಇರುವ ಗ್ರಾಮಗಳು ಮಳೆಗಾಲದ ಅವಧಿಯಲ್ಲಿ ಸಾಕಷ್ಟು ತೊಂದರೆಗೆ ಒಳಗಾಗುತ್ತದೆ.
    ಕೆಲವು ಪ್ರದೇಶಗಳಂತೂ ಹೊರಜಗತ್ತಿನೊಂದಿಗೆ ತಿಂಗಳುಗಟ್ಟಲೆ ಸಂಪರ್ಕ ಕಡಿದುಕೊಂಡು ಬಿಡುತ್ತವೆ. ವಿದ್ಯುತ್, ದೂರವಾಣಿಯೂ ಇರುವುದಿಲ್ಲ. ದಿನಸಿ ಸಾಮಗ್ರಿ ಸೇರಿದಂತೆ ದೈನಂದಿನ ಅಗತ್ಯಗಳಿಗೆ ಬೇಕಾದ ವಸ್ತುಗಳು ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣ ಆಗಿಬಿಡುತ್ತದೆ. ಹಾಗಾಗಿ ಮಳೆಗಾಲವನ್ನು ಎದುರಿಸಲು ಬೇಸಿಗೆಯ ಏಪ್ರಿಲ್, ಮೇ ತಿಂಗಳಿನಲ್ಲಿ ಇಂತಹ ದುರ್ಗಮ ಪ್ರದೇಶಗಳಲ್ಲಿ ಸಿದ್ಧತೆ ನಡೆಸಲಾಗುತ್ತದೆ. ಈ ಬಾರಿ ಚುನಾವಣೆ ಇದ್ದರೂ ಗ್ರಾಮೀಣ ಪ್ರದೇಶದ ಜನತೆ ತಮ್ಮ ವಾರ್ಷಿಕ ಕರ್ತವ್ಯ ಮರೆತಿಲ್ಲ.

    ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನವರು ಅಡುಗೆಗೆ ಈಗಲೂ ಕಟ್ಟಿಗೆ ಬಳಸುತ್ತಾರೆ. ಕಟ್ಟಿಗೆಯ ಒಲೆ ಉರಿಯುವುದರಿಂದ ಮನೆಯೂ ಬೆಚ್ಚಗೆ ಇರುತ್ತದೆ ಎನ್ನುವ ಕಾರಣಕ್ಕೆ ಕಟ್ಟಿಗೆ ಬಳಕೆ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಕ್ಕೆ ಈ ಸಮಯದಲ್ಲಿ ಆದ್ಯತೆ ಕೊಡಲಾಗುತ್ತದೆ. ತೋಟದಲ್ಲಿನ ಒಣ ಮರಗಳನ್ನು ಗುರುತಿಸಿ, ಅವುಗಳನ್ನು ತುಂಡರಿಸಿ, ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಮನೆಯ ಬಳಿ ಸಂಗ್ರಹಿಸಿ ಇಡಲಾಗುತ್ತದೆ. ತೋಟ ಇಲ್ಲದವರು ಬೇರೆಯವರ ಬಳಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಚೆನ್ನಾಗಿ ಒಣಗಿದ, ಹೊಗೆ ಬಾರದ ಮರದ ಕಟ್ಟಿಗೆಗಳಿಗೆ ಬೇಡಿಕೆ ಹೆಚ್ಚು.
    ದುರ್ಗಮ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಮಳೆಗಾಲದ ಅವಧಿಯಲ್ಲಿ ಪೇಟೆ, ಪಟ್ಟಣಗಳಿಗೆ ಹೋಗಿ ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಿ ತರಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ರಸ್ತೆ ಮೇಲೆ ಪ್ರವಾಹದ ನೀರು ಬರುವುದು, ಸೇತುವೆ ಮುಳುಗಡೆ, ಬರೆ ಕುಸಿತ.. ಹೀಗೆ ಅನೇಕ ಕಾರಣಗಳಿಂದ ಸಂಚಾರ ದುಸ್ಥರವಾಗಿರುವುದರಿಂದ ೪-೫ ತಿಂಗಳಿಗೆ ಅಗತ್ಯವಾದ ದಿನಸಿ ಮತ್ತು ದಿನ ಬಳಕೆ ವಸ್ತುಗಳನ್ನು ಖರೀದಿಸಿ ಶೇಖರಿಸಿ ಇಟ್ಟುಕೊಳ್ಳಲಾಗುತ್ತದೆ.

    ಮನೆ ಮತ್ತು ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ, ಕಾಫಿ ತೋಟದ ನಿರ್ವಹಣಾ ಕೆಲಸಗಳು, ತೋಟದ ಬೇಲಿ ದುರಸ್ತಿ, ಭತ್ತದ ಗದ್ದೆಗಳಿಗೆ ನೀರಿನ ವ್ಯವಸ್ಥೆ, ಉಳುಮೆಯ ಸಿದ್ಧತೆ, ನೈಸರ್ಗಿಕ ಮೂಲಗಳಿಂದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು, ತೋಟ, ಭತ್ತದ ಗದ್ದೆಗಳಿಗೆ ಅಗತ್ಯವಿರುವ ರಸಗೊಬ್ಬರ ಸಂಗ್ರಹ, ಮನೆಗಳ ಛಾವಣಿ ದುರಸ್ತಿ ಇಂತಹ ಮಳೆಗಾಲಕ್ಕೆ ಅಗತ್ಯ ವಿರುವ ಅನೇಕ ಸಿದ್ಧತೆಗಳನ್ನು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳುಗಳಲ್ಲಿ ಮಾಡಿ ಮುಗಿಸದಿದ್ದರೆ ಮಳೆಗಾಲದಲ್ಲಿ ಪರದಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡು ತಿಂಗಳು ಎಂಥಹದ್ದೇ ಕಾರ್ಯಕ್ರಮವಿದ್ದರೂ ಕೊಡಗಿನ ಗ್ರಾಮೀಣರು ಮಳೆಗಾಲದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಮೈ ಮರೆಯುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts