More

    ಅಕಾಲಿಕ ಮಳೆಗೆ ರೈತರು ಕಂಗಾಲು: ನದಿ ಪಾತ್ರಕ್ಕೆ ತೆರಳದಂತೆ ಟಿಬಿ ಬೋರ್ಡ್ ಎಚ್ಚರಿಕೆ

    ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕೆ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ರೈತರ ಪರಿಸ್ಥಿತಿ.

    ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಸುರಿದ ಧಾರಾಕಾರ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ತಾಲೂಕಿನ ಕೊಳಗಲ್ಲು, ಕೊರ‌್ಲಗುಂದಿ, ಮೋಕಾ, ಯರ‌್ರಗುಡಿ, ಕಪ್ಪಗಲ್ಲು, ಸೋಮಸಮುದ್ರ, ಹಂದಿಹಾಳು, ಜಾಲಿಬೆಂಚೆ, ಸಂಜೀವರಾಯನಕೋಟೆ, ಮಿಂಚೇರಿ, ಶ್ರೀಧರಗಡ್ಡೆ, ತಾಳೂರು, ಹಡ್ಲಿಗಿ, ಬಸರಕೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೆಣಸಿನಕಾಯಿ, ಭತ್ತ, ಜೋಳ ಸೇರಿದಂತೆ ಅಪಾರ ಬೆಳೆ ನಾಶವಾಗಿದೆ.

    ನಗರ ಜನರ ಜೀವನ ಅಸ್ತವ್ಯಸ್ತ: ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಗುರುವಾರ ದಿನವಿಡೀ ಮೋಡ ಕವಿದ ವಾತಾವಣದಿಂದಲೇ ಕೂಡಿತ್ತು. ಸಂಜೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿತು. ನಗರದ ದುರ್ಗಮ್ಮ ದೇವಸ್ಥಾನ ರಸ್ತೆಯ ರೈಲ್ವೆ ಕೆಳ ಸೇತುವೆಯಲ್ಲಿ ಮೊಣಕಾಲು ತನಕ ನೀರುನಿಂತು ಕೆಲಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಎಸ್.ಎನ್.ಪೇಟೆ ಫ್ಲೈಓವರ್ ಕೆಳಸೆತುವೆ ಶುಕ್ರವಾರ ಮಧ್ಯಾಹನದವರೆಗೆ ಮಳೆ ನೀರು ನಿಂತು ಬ್ಲಾಕ್ ಆಗಿತ್ತು. ಇಲ್ಲಿನ ತಾಲೂಕು ಕಚೇರಿ ಹಾಗೂ ಡಿಸಿ ಕಚೇರಿ ಆವರಣದಲ್ಲಿನ ಆನೇಕ ಕಚೇರಿಗಳ ಮುಂದೆ ನೀರು ನಿಂತಿದೆ. ಎಪಿಎಂಸಿ ಮಾರುಕಟ್ಟೆ ಕೆಸರುಗದ್ದೆಯಂತಾಗಿದ್ದು, ರೈತರು ಹಾಕಿದ ಧಾನ್ಯಗಳು ತೊಯ್ದಿವೆ. ನಗರದ ನಲ್ಲಚೆರುವು, ದುರ್ಗಮ್ಮ ದೇವಸ್ಥಾನ, ಮೋಕಾ ರಸ್ತೆ, ತಾಳೂರು ರಸ್ತೆ, ಹವಂಬಾವಿ, ಕುವೆಂಪುನಗರ ಹಾಗೂ ಗುಗ್ಗರಹಟ್ಟಿ ಪ್ರದೇಶಗಳಲ್ಲಿನ ಬಡವಾಣೆಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

    ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆ
    ನಿರಂತರ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಶುಕ್ರವಾರ ಬೆಳಗ್ಗೆ 36408 ಕ್ಯೂಸೆಕ್ ನೀರು ನದಿಗೆ ಬಿಡಲಾಯಿತು. ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಒಳಹರಿವು 47965 ಕ್ಯೂಸೆಕ್ ಇದ್ದು, ಬೆಳಗ್ಗೆ 7 ಗಂಟೆಗೆ 12 ಕ್ರಸ್ಟ್ ಗೇಟ್‌ಗಳನ್ನು 2 ಅಡಿ ಎತ್ತರಿಸಿ 36408 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಯಾವುದೇ ಕ್ಷಣದಲ್ಲಿಯಾದರೂ ನದಿಗೆ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ. ಹಾಗಾಗಿ ನದಿ ಪಾತ್ರಕ್ಕೆ ಹೋಗದಂತೆ ಜನರು ಎಚ್ಚರಿಕೆ ವಹಿಸುವಂತೆ ಟಿಬಿ ಬೋರ್ಡ್ ಸೂಚಿಸಿದೆ. ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ತುಂಗಭದ್ರಾ ಆಡಳಿತ ಮಂಡಳಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts