More

    ಸದಾ ಲೋಕಹಿತನಿರತ ಗುರು ಗ್ರಹ ಇಂದು ಕುಂಭಕ್ಕೆ ಪ್ರವೇಶ

    ಸದಾ ಲೋಕಹಿತನಿರತ ಗುರು ಗ್ರಹ ಇಂದು ಕುಂಭಕ್ಕೆ ಪ್ರವೇಶ| ಮಹಾಬಲಮೂರ್ತಿ ಕೊಡ್ಲೆಕೆರೆ

    ಭಾರತೀಯ ಜ್ಯೋತಿಷ್ಯ ವಿಜ್ಞಾನ ನಿಖರವಾಗಿ ಆಕಾಶ ಕಾಯ ಗಳಾದ ರವಿ, ಚಂದ್ರ, ಗುರು, ಶುಕ್ರ ಗ್ರಹಗಳೆಲ್ಲ ಚಲನವಲನ ನಡೆಸುವ ಲೆಕ್ಕಾಚಾರವನ್ನು ಸಾವಿರಾರು ವರ್ಷಗಳಿಂದಲೂ ತಿಳಿದುಕೊಂಡಿದೆ. ಗ್ರಹಗಳ ಚಲನವಲನಗಳು ಒಂದು ನಿರ್ದಿಷ್ಟ ಪಥದಲ್ಲಿಯೇ ಸಾಗುತ್ತದೆ ಎಂಬುದನ್ನೂ ತಿಳಿದಿದೆ. ಇಂತಿಂಥ ಗ್ರಹ ಇಂತಿಂಥ ಜಾಗೆಗಳಿಗೆ ಬಂದಾಗ ಭೂಮಿಯ ಜೀವ ಜಾಲದ ಮೇಲೆ ಇದೇ ರೀತಿಯ ಪರಿಣಾಮಗಳನ್ನು ಕೊಡುತ್ತವೆ ಎಂಬ ವಿಚಾರವನ್ನೂ ಭಾರತೀಯ ಜ್ಯೋತಿಷ್ಯ ವಿಜ್ಞಾನ ಲಾಗಾಯ್ತಿನಿಂದ ಅರಿತಿದೆ. ಗ್ರಹಗಳ ಈ ಚಲನವಲನಗಳ ಪರಿಣಾಮ ಒಂದೊಂದು ಗ್ರಹಕ್ಕೂ ಬೇರೆಯದೇ ಆಗಿದೆ. ಅದರಲ್ಲೂ ಲೋಕಕ್ಕೆ ಅಂದರೆ ನಮ್ಮ ಮಾನವ ಪ್ರಪಂಚಕ್ಕೆ ಗುರು ಗ್ರಹದ ಚಲನಚಲನಗಳು ಅಪಾರವಾದ ಒಳಿತುಗಳನ್ನು ಒದಗಿಸುವ ಪರಿಣಾಮ ಪಡೆದಿರುತ್ತವೆ. ಗ್ರಹಗಳು ತಂತಮ್ಮ ಗುಣ ಧರ್ಮಗಳಿಂದಾಗಿ ಶುಭ ಗ್ರಹಗಳು, ಅಶುಭ ಗ್ರಹಗಳು ಎಂದು ಸ್ವಾಭಾವಿಕವಾಗಿಯೇ ವಿಂಗಡಿಸಲ್ಪಟ್ಟಿವೆ. ಹೀಗೆ ವಿಂಗಡಣೆಯ ಕಾರಣದಿಂದಾಗಿ ಗುರು ಗ್ರಹ ಶುಭ ಗ್ರಹಗಳ ಗುಂಪಿನಲ್ಲಿ ಸೇರಿದೆ. ಇಷ್ಟೇ ಅಲ್ಲ. ದೊಡ್ಡ ಪ್ರಮಾಣದ ಶುಭ ಕಾರಣಗಳಿಗೆ ಗುರು ಗ್ರಹ ಅಮೃತ ಧಾರೆಯಂತೆ ಸಹಕರಿಸುತ್ತಲೇ ಇರುತ್ತದೆ.

    ಇಂಥ ಗುರು ಗ್ರಹ ಇಂದು (ಬರುವ ಸೆ.14ರವರೆಗೆ) ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಬದುಕಿನ ವಹಿವಾಟುಗಳಲ್ಲಿ ಓರ್ವ ವ್ಯಕ್ತಿಗೆ ಜ್ಞಾನ, ಶುಭ ಚಿಂತನೆ, ತಾತ್ವಿಕತೆ, ಸಾತ್ವಿಕತೆ ಒದಗಿಸಿಕೊಡುವ ಗುರು ಗ್ರಹ ತಾನು ಪ್ರವೇಶಿಸಿದ ರಾಶಿಯಿಂದ ತಾನು ನೀಡುವ ಶುಭ ಫಲದ ಸಲುವಾಗಿನ ಅಮೃತತ್ವವನ್ನು ಸಂಚಯಿಸಿಕೊಳ್ಳುತ್ತದೆ. ಯಾವ ರಾಶಿಯವರಿಗೆ ತಾನು ಎಷ್ಟು ಅಂತರದಲ್ಲಿ ಇದ್ದೇನೆ ಎಂಬುದನ್ನು ಅವಲಂಬಿಸಿಕೊಂಡು ತನ್ನಿಂದಾದ ಒಳಿತುಗಳನ್ನು ವ್ಯಕ್ತಿಯು ಕೈಗೊಳ್ಳುವ ಕೆಲಸ, ಸಾಧನೆ, ವರ ಬೇಕಾದ ವ್ಯಕ್ತಿಯ ಎತ್ತರ, ಸ್ಥಾನಮಾನಗಳಿಗೆ ಯಶಸ್ಸಿನ ಏಣಿಯನ್ನು ಒದಗಿಸಿಕೊಡುತ್ತದೆ. ಅಧಿಕಾರ ಪ್ರಾಪ್ತಿ ಇರಲಿ, ಕೈಗೊಂಡ ಕೆಲಸದಲ್ಲಿ ಸಾರ್ಥಕ ಯಶಸ್ಸು ನೀಡುವುದಿರಲಿ, ಕೋರ್ಟು ಕಚೇರಿಗಳಲ್ಲಿ ಇದ್ದಿರುವ ವಿಚಾರಗಳಲ್ಲಿ ಸಕಾರಾತ್ಮಕ ಇತ್ಯರ್ಥಗಳು ಒದಗಿಬರುವಂತೆ ಮಾಡುವಲ್ಲಾಗಲೀ, ಇರುವ ಬಿಜಿನೆಸ್ ಯಶಸ್ಸಿನ ಹಾದಿ ಹಿಡಿಯಲು ಸಹಕರಿಸುವುದಕ್ಕೇ ಇರಲಿ, ಯಶಸ್ಸಿಗೆ ಮುಮ್ಮುಖವಾಗುವಂತೆ ಹೊಸ ಬಿಜಿನೆಸ್ ಶುರುಗೊಳಿಸುವುದರಲ್ಲೇ ಇರಲಿ, ಕ್ಲಿಷ್ಟವಾಗಿದ್ದ ಆಸ್ತಿ ಪಾಸ್ತಿ ಇತ್ಯಾದಿ ಸಂಬಂಧವಾದ ಪ್ರಾಪ್ತಿ ಯುಕ್ತವಾಗಿ ಆಗುವಂಥ ವಿಷಯದಲ್ಲಿರಲಿ, ಬಗೆಹರಿಯದ ಬಿಕ್ಕಟ್ಟುಗಳೇ ಆಗಿ ಹೋಗಿವೆ ಎಂಬ ಸಂಗತಿಗಳು ಏಕಾಏಕಿ ಸರಳವಾಗಿ ಪರಿವರ್ತನೆಗೊಳ್ಳುವಲ್ಲಿ ಗುರುತಿಸಲು ಕೂಡಲಾರದ ವಿಷಯ ಕೊಂಡಿಗಳನ್ನು ಸರಾಗವಾಗಿ ಕೂಡಿಸಿಕೊಡುತ್ತದೆ. ಅದೃಷ್ಟ ಖುಲಾಯಿಸುವಂತೆ ಮಾಡುತ್ತದೆ. ಮದುವೆ, ಮುಂಜಿ, ಮಕ್ಕಳಾಗುವ ದಾರಿಯಲ್ಲಿ ಬೆಳಕು ಒದಗಿಸುತ್ತದೆ. ಹೀಗಾಗಿಯೇ ನಮ್ಮಲ್ಲಿ ಮದುವೆಯ ಅಥವಾ ಉಪನಯನ, ಚೌಲಗಳಂಥ ಶುಭ ಕೆಲಸಗಳಿಗೆ ಗುರುಬಲ ಗಮನಿಸುತ್ತಾರೆ. ಒಟ್ಟಿನಲ್ಲಿ ಯಾವುದೇ ರೀತಿಯ ಅದೃಷ್ಟಕ್ಕೆ ಬೇಕಾದ ಬಲವನ್ನು ಗುರುಬಲ ಒದಗಿಸಿ ಸಂತೋಷಕ್ಕೆ ದಾರಿ ಮಾಡುತ್ತದೆ.

    ಪರಿಹಾರಗಳೇನು?: ಬದುಕು ಕೊನೆಗೂ ತಿಳಿದೆವೆಂದರೂ ತಿಳಿಯಲಾಗದ ದೊಡ್ಡ ಒಗಟು. ಶಾಂತಿ, ಸಮಾಧಾನ, ಮನುಷ್ಯತ್ವಗಳು ಎಂಥಾ ಒಗಟನ್ನೂ ಸರಾಗವಾಗಿ ಒಡೆದು ಮೈಮನವನ್ನು ಹಗುರಗೊಳಿಸಬಹುದು. ಹೀಗಾಗಿ ಇಷ್ಟ ದೇವರಿಗೆ ಶರಣಾಗಿ. ನಂಬಿಕೆಯ ಶಾಂತ ಮನಸ್ಸಿನ ಪ್ರಾರ್ಥನೆ ಸಂಕಷ್ಟಗಳನ್ನು ಕಳೆಯುತ್ತವೆ. ಕಾಣದ ದೇವರು ನಮ್ಮ ಬಳಿ ಇದ್ದಾನೆ ಎಂಬ ನಂಬಿಗೆ ಇರಲಿ.

    ಈ ಕೆಳಗಿನ ಗುರು ಮಂತ್ರವನ್ನು 7 ಬಾರಿ ಓದಿ (ಪ್ರತಿದಿನ)

    ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ

    ಅನೇಕ ಶಿಷ್ಯ ಸಂಪೂರ್ಣಃ ಪೀಡಾಂ ಹರತು ಮೇ ಗುರುಃ ||

    ಗುರುಬಲ ಪಡೆಯುತ್ತಿರುವ ನಾಮಾಂಕಿತರು: ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್, ಟಿಬೆಟನ್ನರ ಮಹಾಗುರು ದಲೈಲಾಮಾ, ಉದ್ಯಮಿ ರತನ್ ಟಾಟಾ, ನಟರಾದ ಅಮಿತಾಭ್ ಬಚ್ಚನ್, ರಜನಿಕಾಂತ್ ಮುಂತಾದವರು.

    ಗುರುಬಲ ಕಳೆದುಕೊಳ್ಳುವ ನಾಯಕರು, ಪ್ರಸಿದ್ಧರು: ರಷ್ಯಾ ಅಧ್ಯಕ್ಷ ಪುತಿನ್, ರಾಣಿ ಎಲಿಝುಬೆತ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಭಾರತದ ಮಾಜಿ ಕ್ರಿಕೆಟ್ ನಾಯಕರಾದ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ದಂತಕಥೆ ತೆಂಡೂಲ್ಕರ್, ಉದ್ಯಮಿಗಳಾದ ಅನಿಲ್ ಮತ್ತು ಮುಖೇಶ್ ಅಂಬಾನಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂತಾದವರು.

    ಯಾರಿಗೆ ಗುರುಬಲ ಪ್ರಾಪ್ತಿ?

    • ಮೇಷ ರಾಶಿಯವರಿಗೆ ಸಕಲ ಲಾಭಕ್ಕಾಗಿನ ಬಲವನ್ನು ಒದಗಿಸುವ ಕಾಮಧೇನುವಾಗುತ್ತಾನೆ.
    • ಮಿಥುನ ರಾಶಿಯವರಿಗೆ ಭಾಗ್ಯಕ್ಕಾಗಿ ಸಕಲ ನಿಕ್ಷೇಪ ಒದಗಿಸಲು ರಾಯಭಾರಿಯಾಗುತ್ತಾನೆ.
    • ಸಿಂಹ ರಾಶಿಯವರಿಗೆ ಬಾಳ ಸಂಗಾತಿಯ ಪ್ರಾಪ್ತಿ, ದಾಂಪತ್ಯದ ಸಂಘರ್ಷಗಳೆಲ್ಲ ಮುಕ್ತಾಯವಾಗುವ ದಾರಿಗೆ ದೀಪ ಬೆಳಗುತ್ತಾನೆ.
    • ತುಲಾ ರಾಶಿಯವರಿಗೆ ಮಕ್ಕಳ ಸಂಬಂಧ ಸಾರ್ಥಕತೆಯತ್ತ ಸಾಗಲು ಹರಿಗೋಲಾಗುತ್ತಾನೆ.
    • ಮಕರ ರಾಶಿಯವರಿಗೆ ಧನಕನಕಗಳ ಭಂಡಾರಗಳು ಎಲ್ಲಿವೆ ಎಂಬುದನ್ನು ಶ್ರುತಪಡಿಸುತ್ತಾನೆ. ಮಾತಿನ ಶಕ್ತಿಯಲ್ಲಿ ಬಲ ತುಂಬಿ ಬಂಧು, ಬಾಂಧವರು, ಗೆಳೆಯರು, ಯಾವುದೇ ವ್ಯಕ್ತಿಗಳು ಆತ್ಮೀಯರಾಗುವ ವಿಚಾರಕ್ಕೆ ಹೆಗಲು ಕೊಡುತ್ತಾನೆ.

    ಯಾರಿಗೆ ಈಗ ಗುರುಬಲ ಇರುವುದಿಲ್ಲ

    • ವೃಷಭ, ಕರ್ಕಾಟಕ, ಕನ್ಯಾ, ವೃಶ್ಚಿಕ, ಧನಸ್ಸು, ಕುಂಭ ಮತ್ತು ಮೀನ ರಾಶಿಯ ವ್ಯಕ್ತಿಗಳಿಗೆ ಗುರು ಬಲ ಇರುವುದಿಲ್ಲ.
    • ವೃಷಭ ರಾಶಿಯವರಿಗೆ ಕೆಲಸದ ಸ್ಥಳಗಳಲ್ಲಿ, ಪದೋನ್ನತಿ ಹೊಂದುವಲ್ಲಿ, ಚುನಾವಣೆ ಗೆಲ್ಲುವಲ್ಲಿ, ಅಧಿಕಾರ ಪ್ರಾಪ್ತಿಯ ಸಂದರ್ಭಗಳಲ್ಲಿ ಗುರು ಬಲದ ಕೊರತೆಯಿಂದಾಗಿ ಹಿನ್ನಡೆ ಆಗಬಹುದು. ಎಚ್ಚರ ಇರಲಿ.
    • ಕರ್ಕಾಟಕ ರಾಶಿಯವರಿಗೆ ಮುಖ್ಯವಾಗಿ ಆರೋಗ್ಯ, ಉತ್ಸಾಹ, ಶಾಂತಿಗಳು ಕೈಕೊಡಬಹುದು. ಎಚ್ಚರ.
    • ಕನ್ಯಾರಾಶಿಯವರಿಗೆ ಕಾಯ್ದೆ ಕಾನೂನುಗಳ ವಿಚಾರ, ಅಪರಾಧ ಕೃತ್ಯ, ಆತ್ಮೀಯರೇ ವೈರಿಗಳಾಗುವ ಸಂದರ್ಭ. ಬರಲಾರದು ಎಂದು ಅಂದುಕೊಂಡ ಅನಿಷ್ಟ ಬಂದೆರಗುವ ದಾರುಣತೆಗಳು ಸಾಧ್ಯತೆ. ಎಚ್ಚರ.
    • ವೃಶ್ಚಿಕ ರಾಶಿಯವರಿಗೆ ಹಾಯಾಗಿದ್ದ, ನಿರಾಳವಾಗಿದ್ದ ಸಂಗತಿಗಳೇ ಕ್ಲಿಷ್ಟಕರ ಫಜೀತಿ ತರಬಲ್ಲವು.
    • ಧನಸ್ಸು ರಾಶಿಯವರಿಗೆ ಧೈರ್ಯ ಕಳಕೊಳ್ಳುವ ಘಟನೆಗಳು, ಸಂದರ್ಭಗಳು ಹರಳುಗಟ್ಟಬಹುದು.
    • ಕುಂಭ ರಾಶಿಯವರಿಗೆ ವರ್ಚಸ್ಸು, ಅಂತಸ್ತು, ಅಧಿಕಾರ, ಮೇಲುಗೈ, ತೇಜಸ್ಸು, ಕಾಂತಿ ಕುಂದಬಹುದು.
    • ಮೀನ ರಾಶಿಯವರಿಗೆ ಏಕಾಏಕಿ ನಷ್ಟಕ್ಕೆ ದಾರಿಗಳು ಹೊರಳಿಕೊಳ್ಳುವ ಕಿರಿಕಿರಿ ಎದುರಾಗುವ ಸ್ಥಿತಿ ಸಾಧ್ಯ.

    (ಲೇಖಕರು ಜ್ಯೋತಿಷ್ಯ ವಿಜ್ಞಾನ ಸಂಶೋಧಕರು, ಕಥೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts