More

    ಸಂಘ-ಪಕ್ಷ ನಿಷ್ಠ ನಾಯಕ ಮೇಲ್ಮನೆಯತ್ತ

    ಮಂಗಳೂರು/ಬೆಳ್ತಂಗಡಿ: ಪಕ್ಷ ನಿಷ್ಠೆ ಹಾಗೂ ವಿವಾದ ರಹಿತ ವ್ಯಕ್ತಿತ್ವ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಗುಣಗಳೇ ಪ್ರತಾಪ್‌ಸಿಂಹ ನಾಯಕ್ ಅವರಿಗೆ ರಾಜ್ಯ ವಿಧಾನಮಂಡಲದ ಮೇಲ್ಮನೆಗೆ ಅಭ್ಯರ್ಥಿಯಾಗುವ ಅವಕಾಶ ಕಲ್ಪಿಸಿದೆ.
    ಪ್ರತಾಪ್‌ಸಿಂಹ ನಾಯಕರ ತಂದೆ ವೀರಸಿಂಹ ನಾಯಕರು ಜನಸಂಘದ ಕಟ್ಟಾಳು. ಒಂದು ಬಾರಿ ಬೆಳ್ತಂಗಡಿಯಿಂದ ಜನಸಂಘದಲ್ಲಿ ಸ್ಪರ್ಧಿಸಿದವರೂ ಹೌದು. ಅದೇ ಸಿದ್ಧಾಂತದ ಗರಡಿಯಲ್ಲಿ ಬೆಳೆದವರು ಪ್ರತಾಪ್.

    ಎರಡು ಬಾರಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾಗಿ, ಎರಡು ಬಾರಿ ದ.ಕ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಒಂದು ಬಾರಿ ವಿಭಾಗ ಸಹ ಪ್ರಭಾರಿಯಾಗಿ ಪಕ್ಷದ ಏಳಿಗೆಗೆ ಶ್ರಮಿಸಿದವರು. ಸುಮಾರು 40 ವರ್ಷಗಳ ರಾಜಕೀಯ ಅನುಭವಿ. ವಿಪಕ್ಷದ ಕಾರ್ಯಕರ್ತರಲ್ಲಿ, ನಾಯಕರಲ್ಲಿಯೂ ಉತ್ತಮ ಸಂಬಂಧ ಹೊಂದಿರುವವರು. ಪ್ರಬುದ್ಧ ನಡವಳಿಕೆಯವರನ್ನು ನಿರೀಕ್ಷಿಸುವ ಮೇಲ್ಮನೆಗೆ ಸೂಕ್ತ ಆಯ್ಕೆ.
    ಪಕ್ಷದ ಕಟ್ಟಾ ಕಾರ್ಯಕರ್ತರಿಗೆ ಮನ್ನಣೆ ಒದಗಿಸಬೇಕು ಎನ್ನುವ ಹೈಕಮಾಂಡ್ ನಿರ್ಧಾರದಿಂದ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯೇ ಅಚ್ಚರಿ ಮೂಡಿಸಿದ್ದು, ಅದೇ ನಿಲುವನ್ನು ಮತ್ತೆ ಪ್ರಕಟಿಸಿದ್ದರಿಂದ ಪ್ರತಾಪರಿಗೆ ಈ ಅವಕಾಶ ಒಲಿದಿದೆ. ಮೊದಲ ಅವಧಿಯ ಅಧ್ಯಕ್ಷರಾಗಿದ್ದಾಗ ಜಿಲ್ಲೆಯ 7 ಅಸೆಂಬ್ಲಿ ಕ್ಷೇತ್ರಗಳನ್ನು ಗೆಲ್ಲಿಸಿದ್ದರಲ್ಲಿ ಪ್ರತಾಪರ ಚುನಾವಣಾ ತಂತ್ರಗಾರಿಕೆಯೂ ಕೆಲಸ ಮಾಡಿತ್ತು ಎನ್ನುವುದು ಗಮನಾರ್ಹ.
    ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ನಾಯಕ್ ವೃತ್ತಿಯಲ್ಲಿ ವಕೀಲರು. ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ, ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿದ್ದವರು. ಬೆಳ್ತಂಗಡಿಯಲ್ಲಿ ವಕೀಲರು ಹಾಗೂ ನೋಟರಿಯಾಗಿದ್ದಾರೆ.

    ಅವಕಾಶಕ್ಕಾಗಿ ಕಾದವರು
    ಈ ಹಿಂದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಸಂದರ್ಭ ಅಭ್ಯರ್ಥಿ ಸ್ಥಾನಕ್ಕೆ ಅವರ ಹೆಸರು ಪ್ರಸ್ತಾವನೆಯಾಗಿದ್ದರೂ, ಅವಕಾಶ ದೊರೆತಿರಲಿಲ್ಲ. ಪ್ರಸ್ತುತ ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನಾಯಕ್ ಹೆಸರು ಪ್ರಾರಂಭದಲ್ಲಿ ಕೇಳಿಬಂದಿದ್ದರೂ ಈಗಿನ ಸನ್ನಿವೇಶದಲ್ಲಿ ಅವರಿಗೆ ಸಿಗುವ ಅವಕಾಶ ಕ್ಷೀಣ ಎಂದೇ ಹೇಳಲಾಗಿತ್ತು. ಆದರೆ ಸಂಘದ ಹಿನ್ನೆಲೆ, ವಿವಾದಗಳಿಲ್ಲದ ನಾಯಕತ್ವದ ಗುಣ ಇವುಗಳಿಂದಾಗಿ ನಾಯಕ್ ಕೊನೆಗೂ 60ರ ಹರೆಯದಲ್ಲಿ ಮೇಲ್ಮನೆ ಪ್ರವೇಶದ ಹಾದಿಯಲ್ಲಿದ್ದಾರೆ. ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯಲ್ಲಿದ್ದು ಮಾದಕ ವಸ್ತು, ಕುಡಿತದ ಚಟ ವಿರುದ್ಧ ಜನಜಾಗೃತಿ ಮೂಡಿಸಿದವರೂ ಹೌದು.

    ಜಿಲ್ಲೆಗೆ ಸಿಗಲೇಬೇಕಿತ್ತು
    ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದ್ದು, 8ಕ್ಕೆ ಏಳು ಸ್ಥಾನ ಗೆದ್ದುಕೊಂಡಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬರುವಾಗ ವಲಸೆ ಬಂದವರನ್ನು ಹಾಗೂ ಮೂಲ ಬಿಜೆಪಿಗರನ್ನು ಬ್ಯಾಲೆನ್ಸ್ ಮಾಡುವ ಕಾರಣದಿಂದಾಗಿ ಜಿಲ್ಲೆಗೆ ಒಂದೂ ಸಚಿವ ಸ್ಥಾನ ಒಲಿದಿರಲಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡದಂತೆ ಮಾಡುವುದಕ್ಕೆ ಪಕ್ಷಕ್ಕೆ ಇದ್ದ ಅವಕಾಶಗಳಲ್ಲಿ ಪರಿಷತ್ ಸ್ಥಾನವೂ ಒಂದಾಗಿದ್ದು, ಅದನ್ನು ಬಳಸಿಕೊಂಡಿದೆ.

    ಬೆಳ್ತಂಗಡಿಯ ಇಬ್ಬರು!
    ಪ್ರಸ್ತುತ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹರೀಶ್ ಕುಮಾರ್ ಮತ್ತು ಐವನ್ ಡಿಸೋಜ (ಅವಧಿಯ ಕೊನೆಯಲ್ಲಿದ್ದಾರೆ) ಪರಿಷತ್ ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯಲ್ಲಿ ಈ ಮೊದಲು ಪರಿಷತ್‌ನಿಂದ ಇದ್ದವರು ಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ಮೋನಪ್ಪ ಭಂಡಾರಿ. ಅವರ ನಂತರ ಈಗ ಬಿಜೆಪಿಯಿಂದ ನಾಯಕ್ ಬಂದಂತಾಗಲಿದೆ. ನಾಯಕ್ ಹಾಗೂ ಹರೀಶ್ ಕುಮಾರ್ ಇಬ್ಬರೂ ಬೆಳ್ತಂಗಡಿ ತಾಲೂಕಿನವರು ಎನ್ನುವುದು ಗಮನಾರ್ಹ.

    ಪಕ್ಷಕ್ಕಾಗಿ ದುಡಿದ ನನ್ನಂತಹ ಸಹಸ್ರಾರು ಮಂದಿ ಇದ್ದಾರೆ, ದುಡಿಯುವವರನ್ನು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಮುಂದೆ ಹೋಗಲು ಅವಕಾಶ ನೀಡುವಂತಹ ಪಕ್ಷ ಯಾವುದಾದರೂ ಇದ್ದಲ್ಲಿ ಅದು ಬಿಜೆಪಿ ಮಾತ್ರ.
    -ಪ್ರತಾಪ್‌ಸಿಂಹ ನಾಯಕ್, ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts