More

    ಬಿಜೆಪಿಗೆ ಇಕ್ಕಟ್ಟು ತಂದ ಸಭಾಪತಿ ನಿರ್ಧಾರ

    ಬೆಂಗಳೂರು: ರಾಜ್ಯ ವಿಧಾನಮಂಡಲ ಇತಿಹಾಸದಲ್ಲೇ ಅಪರೂಪ ಎಂಬಂತೆ ಮಂಗಳವಾರ (ಡಿ.15) ಒಂದು ದಿನದ ಮಟ್ಟಿಗೆ ವಿಧಾನಪರಿಷತ್ ಕಲಾಪ ನಡೆಯುತ್ತಿದೆ. ಅದರಲ್ಲೂ ವಾರದ ಹಿಂದಷ್ಟೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಕಲಾಪವನ್ನು ವಿಧಾನಪರಿಷತ್​ಗೆ ಮಾತ್ರ ಸೀಮಿತವಾಗಿ ಮತ್ತೆ ಕರೆಯುತ್ತಿರುವುದು ವಿಶೇಷ.

    ಇದೇ ವೇಳೆ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ವಿಚಾರ ಮುನ್ನೆಲೆಗೆ ಬರಲಿದೆ. ಆದರೆ, ತಾವು ಅವಿಶ್ವಾಸ ಮಂಡನೆ ತಿರಸ್ಕರಿಸಿರುವುದಾಗಿ ಸಭಾಪತಿ ನಿರ್ಧರಿಸಿರುವುದು ಆಡಳಿತ ಪಕ್ಷಕ್ಕೆ ಹೊಸ ಇಕ್ಕಟ್ಟು ಸೃಷ್ಟಿಸಿದೆ. ಜತೆಗೆ ಆ ಹುದ್ದೆ ಮೇಲೆ ಕಣ್ಣಿಟ್ಟವರಿಗೆ ನಿರಾಸೆ ಆವರಿಸಿದೆ. ಕೆ.ಪ್ರತಾಪ್​ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಬೇಕೆಂಬ ಒಂದಂಶದ ಹಠ ಬಿಜೆಪಿ ಸದಸ್ಯರಲ್ಲಿತ್ತು. ಈ ಹಠವೇ ಒಂದು ದಿನದ ಕಲಾಪ ನಡೆಯಲು ಕಾರಣವಾಗಿದೆ. ಅಷ್ಟೇ ಅಲ್ಲದೆ ‘ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡುವ’ ಸಭಾಪತಿ ನಿರ್ಧಾರವನ್ನು ಹಿಮ್ಮೆಟ್ಟಿಸುವಲ್ಲೂ ಸಫಲವಾದರು. ಆದರೆ, ಅವರ ಉದ್ದೇಶಕ್ಕೆ ಸಭಾಪತಿ ತಣ್ಣೀರೆರಚಿದ್ದಾರೆ.

    ಅವಿಶ್ವಾಸ ಮಂಡನೆ ಚರ್ಚೆಗೆ ಬಂದಿದ್ದರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವಿನ ‘ಹೊಸ ಸ್ನೇಹ’ದ ಪಕ್ವತೆ ಎಷ್ಟೆಂಬುದೂ ಬಹಿರಂಗವಾಗುತ್ತಿತ್ತು. ಆದರೀಗ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟ ವಿಧೇಯಕ ಮಂಡನೆ ಮತ್ತು ಪರ್ಯಾಲೋಚನೆಗೆ ಸರ್ಕಾರ ಬಯಸಿದರೆ ಅದಕ್ಕೆ ಸಭಾಪತಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಒಂದೊಮ್ಮೆ ಪ್ರತಿಪಕ್ಷ ಪಟ್ಟು ಹಿಡಿದು ಜಂಟಿ ಪರಿಶೀಲನಾ ಸಮಿತಿಗೆ ನೀಡಬೇಕೆಂದು ಒತ್ತಾಯಿಸಿದರೆ ಮತ್ತು ಅದನ್ನು ಸಭಾಪತಿ ಮಾನ್ಯ ಮಾಡಿದರೆ ಈ ವಿಧೇಯಕಕ್ಕೆ ಕನಿಷ್ಠ ಆರು ತಿಂಗಳವರೆಗೂ ಮಾನ್ಯತೆ ಬರುವುದಿಲ್ಲ. ಆಡಳಿತ ಪಕ್ಷ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂದೇನು ಮಾಡಬೇಕೆಂದು ಸೋಮವಾರ ನಿರ್ಧರಿಸಲಿದೆ.

    ವಿಜಯವಾಣಿಗೆ ಲಭ್ಯ ಮಾಹಿತಿ ಪ್ರಕಾರ, ಸಂವಿಧಾನ ಬದ್ಧವಾಗಿ ನೀಡಿದ ಅವಿಶ್ವಾಸ ನಿರ್ಣಯದ ಅರ್ಜಿ ತಿರಸ್ಕರಿಸಲು ಕಾರಣ ಹೇಳುವಂತೆ ಸಭಾಪತಿಯವರಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿಯಲಿದ್ದಾರೆ. ಒಂದೊಮ್ಮೆ ಸಭಾಪತಿ ರಾಜೀನಾಮೆ ಕೊಡದೆ ಖುರ್ಚಿಗಂಟಿಕುಳಿತರೆ, ಸಾಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ತಿಳಿಸಿಕೊಡುವ ಜತೆಗೆ ರಾಜಭವನದ ಮಧ್ಯ ಪ್ರವೇಶಕ್ಕೆ ಮನವಿ ಮಾಡಲಿದ್ದಾರೆ. ಜತೆಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು, ಸಭಾಪತಿ ಪದಚ್ಯುತಿಗೆ ಪ್ರಯತ್ನ ನಡೆಸಲಿದ್ದಾರೆಂದು ತಿಳಿದುಬಂದಿದೆ.

    ಸಂವಿಧಾನ ಬದ್ಧವಾಗಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ಸಭಾಪತಿಯವರು ನಮ್ಮ ಅರ್ಜಿ ತಿರಸ್ಕಾರಕ್ಕೆ ಸರಿಯಾದ ಕಾರಣ ಹೇಳಲಿ. ಇದನ್ನು ಇಷ್ಟಕ್ಕೆ ಬಿಡುವ ಪ್ರಶ್ನೆಯೇ ಇಲ್ಲ.
    | ಎನ್.ರವಿಕುಮಾರ್ ವಿಧಾನಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts