More

    ಕಾಂಗ್ರೆಸ್ ಮಡಿಲಿಗೆ ಹಾನಗಲ್ಲ ಪುರಸಭೆ

    ಹಾನಗಲ್ಲ: ಸ್ಥಳೀಯ ಪುರಸಭೆಗೆ ಅಧ್ಯಕ್ಷರಾಗಿ ಕಾಂಗ್ರೆಸ್​ನ ಖುರ್ಷಿದ್​ಅಹ್ಮದ್ ಹುಲ್ಲತ್ತಿ, ಉಪಾಧ್ಯಕ್ಷರಾಗಿ ಮಹೇಶ ಪವಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತನ್ಮೂಲಕ ಸ್ಥಳೀಯ ಪುರಸಭೆ ಕಾಂಗ್ರೆಸ್ ಮಡಿಲು ಸೇರಿದೆ.

    ಸೋಮವಾರ ನಿಗದಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಖುರ್ಷಿದ್​ಅಹ್ಮದ್ ಹುಲ್ಲತ್ತಿ ಹಾಗೂ ಮಹೇಶ ಪವಾಡಿ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಘೊಷಿಸಿದರು.

    ಒಟ್ಟು 23 ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ 19 ಕಾಂಗ್ರೆಸ್ ಹಾಗೂ 4 ಬಿಜೆಪಿ ಸದಸ್ಯರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವುದು ಸ್ಪಷ್ಟವಾಗಿತ್ತು. ಆದರೆ, ಹಲವು ಬಾರಿ ಮೀಸಲಾತಿ ಬದಲಾಗಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರಾಗುವವರು ಯಾರೆಂಬ ಜಿಜ್ಞಾಸೆ ಮೂಡಿತ್ತು. ಇದರ ಮಧ್ಯೆ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದುದರಿಂದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಸೀಲ್ದಾರ್ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು.

    ಸ್ವಚ್ಛತೆ, ಕುಡಿಯುವ ನೀರು ಸರಬರಾಜಿಗೆ ಆದ್ಯತೆ

    ಚುನಾವಣೆ ಪ್ರಕ್ರಿಯೆ ನಂತರ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಭಿನಂದಿಸಿದರು.

    ಅಧ್ಯಕ್ಷ ಖುರ್ಷಿದ್​ಅಹ್ಮದ್ ಹುಲ್ಲತ್ತಿ ಮಾತನಾಡಿ, ಸ್ವಚ್ಛತೆ, ಬೀದಿದೀಪ ಹಾಗೂ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಲಾಗುವುದು. ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಪುರಸಭೆಯನ್ನು ಸುಸ್ಥಿತಿಗೆ ತರಲು ಆದಾಯ ಮೂಲ ಹುಡುಕಿ, ಸಾರ್ವಜನಿಕರಿಗೂ ಹೊರೆಯಾಗದಂತೆ ಪಟ್ಟಣ ಅಭಿವೃದ್ಧಿಗೊಳಿಸಲು ಪ್ರಯತ್ನ ಕೈಗೊಳ್ಳಲಾಗುವುದು ಎಂದರು.

    ಉಪಾಧ್ಯಕ್ಷ ಮಹೇಶ ಪವಾಡಿ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ್ದ ಭರವಸೆಗಳಾದ ಸ್ವಚ್ಛತೆ, ವಿದ್ಯುದ್ದೀಪ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಮುಂದಾಗುತ್ತೇವೆ. ಎಲ್ಲ ಸದಸ್ಯರ ಅಭಿಪ್ರಾಯ ಪಡೆದು, ಒಗ್ಗೂಡಿ ಪಟ್ಟಣದ ಜನರಿಗೆ ಸರ್ಕಾರದ ಯೋಜನೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಎಸ್. ಪಾಟೀಲ, ಪುಟ್ಟಪ್ಪ ನರೇಗಲ್, ಪುರಸಭೆ ಸದಸ್ಯರಾದ ಎಸ್.ಕೆ. ಪೀರಜಾದೆ, ನಜೀರಅಹ್ಮದ ಸವಣೂರ, ನಾಗಪ್ಪ ಸವದತ್ತಿ, ಅನಂತವಿಕಾಸ ನಿಂಗೋಜಿ, ರಾಧಿಕಾ ದೇಶಪಾಂಡೆ, ವೀಣಾ ಗುಡಿ, ಮಮತಾ ಆರೇಗೊಪ್ಪ, ಸುನಿತಾ ಭದ್ರಾವತಿ, ಪ್ರಕಾಶ ತಳವಾರ, ರಶೀದಾಬಿ ನಾಯ್ಕನವರ, ವಿರುಪಾಕ್ಷಪ್ಪ ಕಡಬಗೇರಿ, ಗಂಗೂಬಾಯಿ ನಿಂಗೋಜಿ, ಶೋಭಾ ಹೊಂಬಳಿ, ನಾಸಿರಾ ಬಡಗಿ, ರವಿ ಹನುಮನಕೊಪ್ಪ, ಪರಶುರಾಮ ಖಂಡೂನವರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts