More

    ಕಡ್ಡಾಯ ಸೌಲಭ್ಯದಿಂದ ಪೌರಕಾರ್ಮಿಕರು ವಂಚಿತ

    ಬೆಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮಳೆ, ಚಳಿ, ಗಾಳಿ ಹಾಗೂ ಬಿಸಿಲು ಲೆಕ್ಕಿಸದೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಪೌರಕಾರ್ಮಿಕರು ತೊಡಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಹರಡಿದ ವೇಳೆ ತಮ್ಮ ಜೀವನವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರಕಾರ್ಮಿಕರು ಮುಂಚೂಣಿಯಲ್ಲಿದ್ದಾರೆಂದು ಹೆಮ್ಮೆಪಟ್ಟು ಚಪ್ಪಾಳೆ ತಟ್ಟಿ ಪ್ರಶಂಸಿಸಿ ಪುಪ್ಪುವೃಷ್ಟಿ ಮಾಡಲಾಗಿತ್ತು. ಆದರೆ, ಪೌರಕಾರ್ಮಿಕರಿಗೆ ಸಲ್ಲಬೇಕಿದ್ದ ಸವಲತ್ತುಗಳು ಸಿಗದಂತಾಗಿದೆ.

    ಐಪಿಡಿ ಸಾಲಪ್ಪ ಸಮಿತಿ ವರದಿ ಅನುಷ್ಠಾನ, ಕಾಯಂ ಮಾಡುವುದು ಸೇರಿ ಹಲವು ಬೇಡಿಕೆಗಳು ಇಂದಿಗೂ ಈಡೇರಿಲ್ಲ. ಬೇಡಿಕೆ ಈಡೇರಿಸದಂತೆ ಗುತ್ತಿಗೆದಾರರು ನಡೆಸುತ್ತಿರುವ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಸ್ವಚ್ಛತೆ ಕಾರ್ಯ ನಡೆಯದಿರುವುದು ಸೇರಿ ಕೇಂದ್ರ ಸರ್ಕಾರವು ಪ್ರತಿ ವರ್ಷ ಹೊರಡಿಸುವ ‘ಸ್ವಚ್ಛ ನಗರಿ’ ಎಂಬ ಗರಿಮೆಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ.

    ರಾಜ್ಯದಲ್ಲಿ ಪ್ರಸ್ತುತ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳಿಂದ 16,732 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,794 ಕಾಯಂ ಪೌರಕಾರ್ಮಿಕರು, 6,687 ನೇರಪಾವತಿ, ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಒಟ್ಟು 12,481 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 4.251 ಹುದ್ದೆಗಳು ಖಾಲಿಯಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಳಗಾವಿಯಲ್ಲಿ ಹೆಚ್ಚು ಹುದ್ದೆಗಳು ಖಾಲಿಯಿವೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 18 ಸಾವಿರ ಪೌರಕಾರ್ಮಿಕರಿದ್ದು, 1,500 ಮಂದಿ ಕಾಯಂ ಆಗಿ ಕೆಲಸ ಮಾಡುತ್ತಿದ್ದರೆ, ಉಳಿದವರು ಗುತ್ತಿಗೆ ಆಧಾರದಲ್ಲಿ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನಿಗದಿಗೊಳಿಸಲಾಗಿದೆ. 500 ಜನಕ್ಕೆ ಒಬ್ಬರು ಇರಬೇಕೆಂಬ ನಿಯಮವಿದೆ. ಜನಸಂಖ್ಯೆ ಅನುಗುಣವಾಗಿ ಪೌರಕಾರ್ಮಿಕರು ಇಲ್ಲ. ಕಾಯಂ ಪೌರಕಾರ್ಮಿಕರಿಗೆ ತಿಂಗಳಿಗೆ 30 ಸಾವಿರದಿಂದ 35 ಸಾವಿರ ರೂ.ವರೆಗೆ ವೇತನ ಸೇರಿ ಡಿ ದರ್ಜೆ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳು ಸಿಗುತ್ತದೆ. ಆದರೆ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಿಂಗಳಿಗೆ 16 ಸಾವಿರ ರೂ. ವೇತನ ನೀಡಲಾಗುತ್ತಿದೆ.

    ಸೌಲಭ್ಯದಿಂದ ವಂಚಿತ
    ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸುವ ವೇಳೆ ಅಸುನೀಗಿದ್ದಾರೆ. ರಾಜ್ಯದಲ್ಲಿಯೂ ಇಂಥ ಘಟನೆಗಳು ಅಗಾಗ್ಗೆ ಮರುಕಳಿಸುತ್ತಿವೆ. ಸ್ವಚ್ಛತೆಯಲ್ಲಿ ತೊಡಗುವ ಪೌರಕಾರ್ಮಿಕರ ಆಯಸ್ಸು ಕುಸಿತವಾಗುತ್ತಿದೆ. ಹೀಗಿರುವಾಗ, ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ವಿಶ್ರಾಂತಿ, ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸಾ, ಶುಚಿತ್ವ ಸೌಲಭ್ಯ, ಸಮವಸ, ಹ್ಯಾಂಡ್ ಗ್ಲೋವ್ಸ್, ಟೋಪಿ, ರಬ್ಬರ್ ಬೂಟುಗಳು, ಪಾದರಕ್ಷೆ, ಶುಚಿಗೊಳಿಸುವ ಸಾಧನ, ಕಸಬರಿಗೆ, ತರಿಮಣಿ, ಸಲಿಕೆ, ಮಾಸ್ಕ್, ಗಮೇಲ, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಾಣೆ ಬಂಡಿ, ಫಿನೈಲ್ ಹಾಗೂ ಬ್ಲಿಚಿಂಗ್ ಪೌಡರ್ ಸೇರಿ 22 ಸೌಲಭ್ಯಗಳನ್ನು ಒದಗಿಸಬೇಕು. ಕೆಲವೆಡೆ ಪೌರಕಾರ್ಮಿಕರು ಸೌಲಭ್ಯಗಳು ವಂಚಿತರಾಗಿದ್ದಾರೆ. ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ವೇತನದಲ್ಲಿ ಕಡಿತಗೊಳ್ಳುವ ಇಎಸ್‌ಐ, ಪಿಎಫ್ ಹೊರತುಪಡಿಸಿ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಕೆಲ ಗುತ್ತಿಗೆದಾರರು ಇಎಸ್‌ಐ ಹಾಗೂ ಪಿಎ್ ಪಾವತಿಸುತ್ತಿಲ್ಲ.

    ಇದನ್ನೂ ಓದಿ:ವೃದ್ದಿಗೆ ಹಣ,ಚಿನ್ನ ಹಿಂತಿರುಗಿಸಿದ ಸಾರಿಗೆ ಸಿಬ್ಬಂದಿ

    ಜಿಲ್ಲಾವಾರು ಖಾಲಿ ವಿವರ
    ಬೆಳಗಾವಿ 570, ಬಳ್ಳಾರಿ 407, ಬೆಂಗಳೂರು 291, ಉತ್ತರ ಕನ್ನಡ 262, ರಾಯಚೂರು 249, ದಕ್ಷಿಣ ಕನ್ನಡ 218, ಗದಗ 206, ಬೀದರ್ 198, ಚಿತ್ರದುರ್ಗ 166, ಕೋಲಾರ 131, ವಿಜಯಪುರ 126, ಮೈಸೂರು 124, ಚಿಕ್ಕಬಳ್ಳಾಪುರ 121, ಕಲಬುರಗಿ 120, ಶಿವಮೊಗ್ಗ 118, ಯಾದಗಿರಿ 117, ಹಾವೇರಿ 117, ಹಾಸನ 106, ಬಾಗಲಕೋಟೆ 103,ಬೆಂಗಳೂರು ಗ್ರಾಮಾಂತರ 88, ತುಮಕೂರು 80, ರಾಮನಗರ 79, ಉಡುಪಿ 73, ದಾವಣಗೆರೆ 63,ಧಾರವಾಡ 50, ಕೊಪ್ಪಳ 33, ಚಾಮರಾಜನಗರ 20, ಕೊಡಗು 15, ಮಂಡ್ಯ 08, ಚಿಕ್ಕಮಗಳೂರು 08.

    ಹಫ್ತಾ ವಸೂಲಿ
    ಕಸ ಗುಡಿಸಿ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಂದ ತಿಂಗಳಿಗೆ ಇಂತಿಷ್ಟು ಹ್ತಾ ವಸೂಲಿ ಮಾಡುತ್ತಿರುವ ದಂಧೆ ರಾಜ್ಯಾದ್ಯಂತ ರಾಜಾರೋಷವಾಗಿ ನಡೆಯುತ್ತಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರತಿ ತಿಂಗಳಿಗೆ 16 ಸಾವಿರ ರೂ. ವೇತನ ಸಿಗುತ್ತದೆ. ವೇತನ ಬಂದ ತಕ್ಷಣ 600-800 ರೂಪಾಯಿ ಅನ್ನು ಮಾಮೂಲಿ ಹಣವನ್ನು ಮೇಲಧಿಕಾರಿಗಳಿಗೆ, ಮೆಸಿಗಳಿಗೆ ನೀಡಬೇಕಿದೆ. ಒಂದು ವೇಳೆ ಹಣ ನೀಡದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಕೆಲಸ ಕಳೆದುಕೊಳ್ಳುವ ಭಯದಿಂದ ಪೌರಕಾರ್ಮಿಕರು ಮಾಮೂಲಿ ಹಣ ನೀಡುವಂತಾಗಿದೆ. ಕೆಲ ಕಾಯಂ ಪೌರಕಾರ್ಮಿಕರು ಪ್ರತಿ ನಿತ್ಯ ಬೆಳಗ್ಗೆ ಬುಕ್‌ನಲ್ಲಿ ಸಹಿ ಹಾಕಿ ಸ್ವಚ್ಛತೆ ಕಾರ್ಯದಲ್ಲಿ ತೊಡಗದೆ ಮನೆಗೆ ತೆರಳುತ್ತಿದ್ದಾರೆ. ಅಧಿಕಾರಿಗಳು ಇವರ ಜತೆ ಶಾಮೀಲಾಗಿ ತಿಂಗಳಿಗೆ 5 ಸಾವಿರ ರೂ. ಮಮೂಲಿ ಪಡೆಯುತ್ತಿರುವ ಬಗ್ಗೆ ದೂರುಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts