More

    50 ಕೆಜಿ ಚೀಲ 7 ಸಾವಿರ ರೂ.ವರೆಗೂ ಅಲೂಗಡ್ಡೆ ಬಿತ್ತನೆ ಬೀಜ ಮಾರಾಟ, ಭೂಮಿ ಹದ ಮಾಡಿಕೊಂಡಿದ್ದ ರೈತರಲ್ಲಿ ದುಗುಡ

    ಜಿ.ನಾಗರಾಜ್ ಬೂದಿಕೋಟೆ: ಆಲೂಗಡ್ಡೆ ಬಿತ್ತನೆಗೆ ಕೊನೆಯ ಋತು ಇದಾಗಿರುವ ಕಾರಣ ಹಲವು ದಿನಗಳಿಂದ ಭೂಮಿ ಹದ ಮಾಡಿಕೊಂಡಿರುವಾಗಲೆ ಹಠಾತ್ತನೆ ಬಿತ್ತನೆ ಆಲೂಗಡ್ಡೆ್ಡ ಬೀಜದ ದರ ಗಗನಕ್ಕೇರಿರುವುದು ರೈತರನ್ನು ಕಂಗಾಲಾಗಿಸಿದೆ.

    ಕೋಲಾರ ಜಿಲ್ಲೆಯಲ್ಲಿಯೇ ಅತಿಹೆಚ್ಚು ಆಲೂಗಡ್ಡೆ ಬಿತ್ತನೆ ಬೀಜ ಮಾರಾಟವಾಗುವ ಬಂಗಾರಪೇಟೆ ಎಪಿಎಂಸಿ ಮಂಡಿಗಳಲ್ಲಿ ದೀಢಿರ್ ಬೆಲೆ ಏರಿಕೆಯಾಗಿದ್ದು, ವಿವಿಧ ಮಾದರಿಯ 50 ಕೆಜಿಯ ಚೀಲಕ್ಕೆ 3,400ರಿಂದ 7 ಸಾವಿರ ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ.

    ಎಪಿಎಂಸಿಯಲ್ಲಿ ಬಿತ್ತನೆ ಬೀಜವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಬಿತ್ತನೆ ಬೀಜ ಮಾರಾಟಕ್ಕೆ 3,925 ರೂ. ದರ ನಿಗದಿಪಡಿಸಿದೆ. ಆದರೆ, ಮಾರಾಟಗಾರರು ಮಾತ್ರ ಸರ್ಕಾರದ ಆದೇಶ ಗಾಳಿಗೆ ತೂರಿ ರೈತರನ್ನು ವಂಚಿಸುತ್ತಿದ್ದಾರೆ.

    ಆಂಧ್ರದಿಂದಲೂ ಬೇಡಿಕೆ: ಈ ವರ್ಷ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಜಾಸ್ತಿಯಾಗಿದೆ. ಆಂಧ್ರಪ್ರದೇಶ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಬೀಜಕ್ಕೆ ಭಾರಿ ಬೇಡಿಕೆ ಬರುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

    ಹಾಸನ ಮಾದರಿ ಅನುಸರಿಸಿ: ಮಂಡಿ ಮಾಲೀಕರು ಬಿತ್ತನೆ ಬೀಜವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ರೈತ ಸಂಘಟನೆಯೊಂದು ಮಂಡಿ ಮಾಲೀಕರ ವಿರುದ್ಧ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಹಾಸನ ಮಾದರಿಯಲ್ಲಿ ದರ ನಿಗದಿ ಮಾಡುವಂತೆ ಡಿಸಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿತ್ತು. ಸ್ಪಂದಿಸಿದ್ದ ಡಿಸಿ, 50 ಕೆಜಿ ತೂಕದ (8 ಸೈಜ್) ಆಲೂಗಡ್ಡೆ ಬೀಜಕ್ಕೆ 3,925 ರೂ. ನಿಗದಿ ಮಾಡಿ ಆದೇಶ ಹೊರಡಿಸಿದರು. ಆದರೆ ಎಪಿಎಂಸಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

    ಜಿಲ್ಲಾಧಿಕಾರಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ದೂರು ಬಂದಿಲ್ಲ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದರೆ, ಮಂಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

    | ರೂಪಾ, ಬಂಗಾರಪೇಟೆ ಎಪಿಎಂಸಿ ಕಾರ್ಯದರ್ಶಿ

    ಕರೊನಾ ಲಾಕ್​ಡೌನ್ ಸಮಯದಲ್ಲಿ ಬಿತ್ತನೆ ಬೀಜ ಉತ್ಪಾದನೆ ಕಡಿಮೆಯಾಗಿ, ಪಂಜಾಬ್​ನಲ್ಲೇ ಆವಕ ಕಡಿಮೆ ಆಗಿದೆ. ರೈತರ ಅನುಕೂಲಕ್ಕಾಗಿ ಅಧಿಕ ಬೆಲೆ ನೀಡಿ ಬಿತ್ತನೆ ಬೀಜ ಖರೀದಿಸಿದ್ದೇವೆ. ಅದಕ್ಕೆ ಖರ್ಚು ವೆಚ್ಚ ಸೇರಿಸಿ ಮಾರಾಟ ಮಾಡಲಾಗುತ್ತಿದೆಯೇ ಹೊರೆತು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿಲ್ಲ.

    | ಶ್ರೀನಿವಾಸ್, ಬಂಗಾರಪೇಟೆ ಎಪಿಎಂಸಿ ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ

    ಕಳೆದ ವರ್ಷಕ್ಕಿಂತ ಈ ವರ್ಷ ಬಿತ್ತನೆ ಬೀಜ ದುಬಾರಿಯಾಗುತ್ತಿದೆ. ಕಳೆದ ವರ್ಷ 15 ಮೂಟೆ ಬಿತ್ತನೆ ಮಾಡಿದ್ದು, ಈ ಬಾರಿ ಬೆಲೆ ಜಾಸ್ತಿಯಾಗಿರುವ ಕಾರಣ ಕೇವಲ 7 ಮೂಟೆ ಮಾತ್ರ ಬಿತ್ತನೆ ಮಾಡಿದ್ದೇನೆ. ಇದೇ ರೀತಿ ಮುಂದಿನ ವರ್ಷ ಬೆಲೆ ಇದ್ದರೆ ಬಿತ್ತನೆ ಮಾಡುವುದಿಲ್ಲ.

    | ನಾರಾಯಣಸ್ವಾಮಿ ಬೂದಿಕೋಟೆ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts