More

    ಸೋಂಕಿತರ ಕೇರ್ ಸೆಂಟರ್ ಸೇರ್ಪಡೆ: ಸಚಿವ ಶ್ರೀನಿವಾಸ ಪೂಜಾರಿ ಸೂಚನೆ

    ಉಡುಪಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟವರನ್ನು ಮನವೊಲಿಸಿ ಕೋವಿಡ್ ಕೇರ್ ಸೆಂಟರ್‌ಗೆ ವರ್ಗಾಯಿಸಿ, ಚಿಕಿತ್ಸೆ ನೀಡಲು ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಮುಂದಾಗಬೇಕು ಎಂದು ಧಾರ್ಮಿಕ ದತ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಹಾಲ್‌ನಲ್ಲಿ ಕೋವಿಡ್ ನಿಯಂತ್ರಣ ಕುರಿತು ಉಡುಪಿ ಹಾಗೂ ಕಾಪು ತಾಲೂಕಿನ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರೊಂದಿಗೆ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.
    ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಜನರ ಮನೆಗಳಲ್ಲಿ ಪ್ರತ್ಯೇಕವಾಗಿರಲು ಕೊಠಡಿ ಸೇರಿದಂತೆ ಶೌಚಗೃಹದ ವ್ಯವಸ್ಥೆ ಇರುವುದಿಲ್ಲ. ಸೋಂಕು ದೃಢಪಟ್ಟಾಗ ರೋಗ ಲಕ್ಷಣ ಮಾಹಿತಿ ಪಡೆದು ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ವರ್ಗಾಯಿಸಬೇಕು. ಕೇರ್ ಸೆಂಟರ್‌ಗೆ ರೋಗ ಪೀಡಿತರು ಹೋಗಲು ಇಚ್ಛಿಸದೇ ಇದ್ದಲ್ಲಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬಾರದು. ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಕೇರ್ ಸೆಂಟರ್‌ಗಳಿಗೆ ವರ್ಗಾಯಿಸುವ ಕೆಲಸ ಮಾಡಬೇಕು ಎಂದರು.
    ಗ್ರಾಮ ಕಾರ್ಯಪಡೆಯ ಸಮಿತಿಯ ಸದಸ್ಯರು ಸೋಂಕಿತರ ಮನೆ ಸೀಲ್‌ಡೌನ್ ಮಾಡಿ, ಅಗತ್ಯವಿದ್ದಲ್ಲಿ ಪಡಿತರ ಒದಗಿಸಬೇಕು. ಆಶಾ ಕಾರ್ಯಕರ್ತೆಯರು ಪ್ರತಿದಿನ ತೆರಳಿ ಆರೋಗ್ಯ ವಿಚಾರಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸೆಗೆ ತೆರಳುವವರು ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಸದುಪಯೋಗ ಪಡಿಸಿಕೊಳ್ಳುವ ಮಾಹಿತಿ ನೀಡುವುದು ಟಾಸ್ಕ್‌ಫೋರ್ಸ್ ಸಮಿತಿ ಜವಾಬ್ದಾರಿ ಎಂದರು.
    ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಿವೃತ್ತಿ ಹೊಂದಿದ ವೈದ್ಯರು ಅಥವಾ ಹೊಸದಾಗಿ ವೈದ್ಯಕೀಯ ಪದವಿ ಹೊಂದಿದವರು ಇದ್ದಲ್ಲಿ ಗುರುತಿಸಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮಾಡಿಕೊಳ್ಳಲು ಮನವೊಲಿಸಬೇಕು. ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯ ಆದ್ಯತೆಯ ಮೇರೆ ಕೈಗೊಳ್ಳಲಾಗುವುದು ಎಂದರು.
    ಶಾಸಕ ರಘುಪತಿ ಭಟ್ ಮಾತನಾಡಿ, ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಕೋವಿಡ್ ನಿಯಂತ್ರಣದ ತಮ್ಮ ದೈನಂದಿನ ಕಾರ್ಯದೊಂದಿಗೆ ಖಾಸಗಿ ವೈದ್ಯರಿಂದ ಕೆಮ್ಮು, ಶೀತ, ಜ್ವರ ಸೇರಿದಂತೆ ಮತ್ತಿತರ ಕೋವಿಡ್ ಲಕ್ಷಣ ಹೊಂದಿರುವ ಸಾಮಾನ್ಯ ರೋಗಿಗಳು ಚಿಕಿತ್ಸೆ ಪಡೆದರೆ ಅವರನ್ನು ಗುರುತಿಸಿ, ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಮಣಿಪಾಲದ ಎಂ.ಐ.ಟಿ. ವಿದ್ಯಾರ್ಥಿನಿಲಯದಲ್ಲಿ ವ್ಯವಸ್ಥಿತ ಅಗತ್ಯ ಮೂಲಸೌಕರ್ಯಗಳನ್ನೊಳಗೊಂಡ ಕೇರ್ ಸೆಂಟರ್ ಬಗ್ಗೆ ಗ್ರಾಮೀಣ ಭಾಗದಲ್ಲಿ ಪ್ರಚಾರ ಮಾಡಿ, ಸೋಂಕಿತರು ಬರುವ ಹಾಗೆ ಮಾಡಬೇಕು ಎಂದರು.
    ಶಾಸಕ ಲಾಲಾಜಿ ಆರ್. ಮೆಂಡನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಮಾತನಾಡಿದರು. ಸಭೆಯಲ್ಲಿ ಜಿಪಂ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.

    ಕ್ರಿಮಿನಲ್ ಪ್ರಕರಣ ದಾಖಲು: ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡುವುದು ಅತ್ಯವಶ್ಯಕವೆಂದು ಕಂಡುಬಂದಲ್ಲಿ ಅವರನ್ನು ಕೂಡಲೇ ವರ್ಗಾಯಿಸುವ ಕಾರ್ಯವನ್ನು ಪಿಡಿಒಗಳು ಕೈಗೊಳ್ಳಬೇಕು. ಒಂದೊಮ್ಮೆ ಅವರು ನಿರಾಕರಿಸಿದರೆ ಅಂತಹ ರೋಗಿಗಳ ಮೇಲೆ ಎಪಿಡೆಮಿಕ್ ಕಾಯ್ದೆಯನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts