More

    ಊಟಕ್ಕೂ ಅಲೆಮಾರಿಗಳ ಪರದಾಟ

    ತುಮಕೂರು: ಕರೊನಾ ವಿರುದ್ಧದ ಮಹಾಯುದ್ಧ ಬಡವರ ಬದುಕು ಕಿತ್ತುಕೊಂಡಿರುವುದಂತೂ ಸತ್ಯ. ವಿಳಾಸವೂ ಇಲ್ಲದೆ, ಸರ್ಕಾರದ ದಾಖಲೆಗಳಲ್ಲಿಯೂ ಇಲ್ಲದ ಅಲೆಮಾರಿ ಸಮುದಾಯಗಳು ಸಂಕಷ್ಟಕ್ಕೆ ತುತ್ತಾಗಿದ್ದು ಅನ್ನಕ್ಕೂ ಹಾಹಾಕಾರ ಎದುರಿಸುತ್ತಿವೆ.

    ಸರ್ಕಾರ ಪಡಿತರ ಚೀಟಿದಾರರಿಗೆ ಧಾನ್ಯ ನೀಡಿದೆಯಾದರೂ ಪಡಿತರ ಚೀಟಿಯನ್ನೂ ಪಡೆಯಲು ಸಾಧ್ಯವಾಗದ ನೂರಾರು ಅಲೆಮಾರಿ ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ. ಮತದಾರರ ಪಟ್ಟಿಯಲ್ಲಿಯೂ ಹೆಸರಿಲ್ಲದ ಇವರ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುವುದು ಕನಸಿನ ಮಾತು. ಹಕ್ಕಿಪಿಕ್ಕಿ ಜನಾಂಗ, ಸುಡುಗಾಡು ಸಿದ್ಧರು, ದಕ್ಕಲಿಗರು, ಕೊರಮ, ಕೊರಚ ಸೇರಿ ವಿವಿಧ ಸಮುದಾಯದ ನೂರಾರು ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುತ್ತಿವೆ. ಚಿಕ್ಕನಾಯಕನಹಳ್ಳಿ ಹೊರಭಾಗದಲ್ಲಿ ಹತ್ತಾರು ಕುಟುಂಬಗಳು ಭೂರಹಿತವಾಗಿವೆೆ.

    ನಿಂತ ವ್ಯಾಪಾರ, ಊಟಕ್ಕೂ ಕಷ್ಟ!: ತಲೆಕೂದಲು ಪಡೆದು ಹೇರ್‌ಪಿನ್, ಸೂಜಿ, ಅರಿಶಿಣ, ಕುಂಕುಮ ಮತ್ತಿತರ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಲೆಮಾರಿಗಳು ಇತ್ತೀಚೆಗೆ ಗೃಹ ಅಲಂಕಾರಿಕ ವಸ್ತುಗಳನ್ನು ಮಾರುತ್ತ ಜೀವನ ನಡೆಸುತ್ತಿರು. ಆದರೀಗ ಗೂಡುಬಿಟ್ಟು ಹೊರಬರಲು ಸಾಧ್ಯವಾಗಿಲ್ಲ. ಮಕ್ಕಳು, ವೃದ್ಧರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಊಟ, ಔಷಧದ ವ್ಯವಸ್ಥೆ ತುರ್ತಾಗಿ ಮಾಡಬೇಕಿದೆ. ಸಂಘ-ಸಂಸ್ಥೆಗಳ ನೆರವು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಸಮುದಾಯಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಇಲ್ಲಿನ ಸಂಘ, ಸಂಸ್ಥೆಗಳು ದಾನಿಗಳ ನೆರವು ಪಡೆದು ಮಾಡುತ್ತಿವೆ.

    26 ಹಳ್ಳಿಗಳಲ್ಲಿ 12 ಸಮುದಾಯಗಳು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬರೋಬ್ಬರಿ 26 ಗ್ರಾಮದಲ್ಲಿ ಪಿಂಜಾರ, ಕೊರಮ, ಕೊರಚ, ಹಂದಿಜೋಗಿ, ಸಿಳ್ಳೆಕ್ಯಾತ, ದೊಂಬಿದಾಸ, ಚನ್ನದಾಸ, ದೊಂಬರು, ಉಳುವ, ಕರಡಿಕುಂದಲ್, ಮಂಡೊರು, ಸಿಂದೊಳ್ಳಿ, ಗಂಡಿಚೌರ್ ಸೇರಿ ವಿವಿಧ 12ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳು ನೆಲೆ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿವೆ. ಹನುಮಂತಪುರ, ಡಿಂಕನಹಳ್ಳಿ, ಹುಳಿಯಾರು, ಬೋರನಕಣಿವೆ, ಸಿಂಗದಹಳ್ಳಿ, ಚಿ.ನಾ.ಹಳ್ಳಿ, ಗಾಂಧಿನಗರ, ಬೇವಿನಹಳ್ಳಿ, ಬಡಕೆಗುಡ್ಲು, ಸೋರಲಮಾವು, ಕಾತ್ರಿಕೆಹಾಳ್ ಸೇರಿ ವಿವಿಧ ಗ್ರಾಮಗಳಲ್ಲಿ ನೆಲೆನಿಂತಿದ್ದು, ಜಿಲ್ಲಾಡಳಿತ ಊಟದ ವ್ಯವಸ್ಥೆ ಕಲ್ಪಿಸಬೇಕಿದೆ.

    ರೇಷನ್‌ಕಾರ್ಡ್ ಇದ್ದರೆ ಊಟವಿಲ್ಲ!: ರೇಷನ್ ಕಾರ್ಡ್ ಇದ್ದವರಿಗೆ ಊಟದ ವ್ಯವಸ್ಥೆ ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಕೈಚೆಲ್ಲಿದೆ. 7 ಕೆಜಿ ಅಕ್ಕಿ ನೀಡಿದ ಮಾತ್ರಕ್ಕೆ ಜೀವನ ನಿರ್ವಹಣೆ ಸಾಧ್ಯವಿಲ್ಲ ಎಂಬ ಅರಿವು ಆಳುವ ವರ್ಗಕ್ಕಿಲ್ಲ. ಇತ್ತೀಚೆಗೆ ರೇಷನ್‌ಕಾರ್ಡ್ ಪಡೆದು ಖುಷಿಯಲ್ಲಿದ್ದ ಕೆಲ ಅಲೆಮಾರಿಗಳಿಗೆ ಉಳಿದ ಪದಾರ್ಥಗಳನ್ನು ಹೊಂದಿಸಿಕೊಳ್ಳುವುದು ಅಸಾಧ್ಯವಾಗಿದೆ.

    ಡಿಂಕನಹಳ್ಳಿಯಲ್ಲಿ ನೀರಿಲ್ಲ್ಲ!: ಹುಳಿಯಾರು ಹೋಬಳಿ ಡಿಂಕನಹಳ್ಳಿಯಲ್ಲಿರುವ ಸಿಳ್ಳೇಕ್ಯಾತ ಸಮುದಾಯಕ್ಕೆ ಕುಡಿಯುವ ನೀರಿಗೂ ತೊಂದರೆ ಎದುರಾಗಿದೆ. ತಾಲೂಕು ಆಡಳಿತ ಪಡಿತರ ನೀಡುವುದಾಗಿ ಹೇಳುತ್ತಲೇ ಬಂದಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಜಿಲ್ಲಾಡಳಿತ ಕೂಡಲೇ ಇವರಿಗೆ ಕನಿಷ್ಠ ಆಹಾರ ಪದಾರ್ಥವನ್ನಾದರೂ ಪೂರೈಸಬೇಕು. ಇನ್ನು ಉತ್ತರ ಭಾರತದ ರಾಜ್ಯಗಳಿಂದ ಐಸ್‌ಕ್ರೀಂ, ರಸ್ತೆ ಬದಿಯಲ್ಲಿ ಜೂಸ್ ಮಾಡುವ ನೂರಾರು ಯುವಕರಿಗೆ ಊಟದ ವ್ಯವಸ್ಥೆಯಾಗಬೇಕಿದೆ.

    15-20 ದಿನಗಳಿಂದ ಮನೆಯಿಂದ ಹೊರಹೋಗದೆ ಅಲೆಮಾರಿ ಸಮುದಾಯಗಳು ಪರದಾಡುತ್ತಿವೆ. ಜಿಲ್ಲಾಡಳಿತ ಪಡಿತರ ನೀಡುವುದು ಬೇಡ, ಊಟದ ವ್ಯವಸ್ಥೆ ಮಾಡಲಿ. ಕಷ್ಟದಲ್ಲಿ ಬದುಕುವ ಸಮುದಾಯಗಳು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದೇ ಸವಾಲಾಗಿದೆ.
    ಹುಳಿಯಾರು ರಾಜಪ್ಪ ಪ್ರಧಾನ ಕಾರ್ಯದರ್ಶಿ, ಅಲೆಮಾರಿ ಬುಡಕಟ್ಟು ಮಹಾಸಭಾ

    ಅಲೆಮಾರಿಗಳಿಗೆ ಅಡುಗೆಗೆ ಅಗತ್ಯವಾದ ದಿನಸಿ ಪೂರೈಸಲಾಗುತ್ತಿದೆ, ದಾನಿಗಳು ಕೂಡ ದಿನಸಿ ನೀಡುತ್ತಿದ್ದು ಯಾರಿಗೂ ಊಟಕ್ಕೆ ತೊಂದರೆಯಾಗದಂತೆ ತಾಲೂಕು ಆಡಳಿತ ಕ್ರಮಕೈಗೊಳ್ಳಲಿದೆ.
    ತೇಜಸ್ವಿನಿ ತಹಸೀಲ್ದಾರ್ ಚಿಕ್ಕನಾಯಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts