More

    ಬಡ ರೋಗಿಗಳಿಗೆ ಸಹಾಯ ಶ್ಲಾಘನೀಯ

    ಬೈಲಹೊಂಗಲ: ಇಡೀ ಜಗತ್ತಿಗೆ ಕಂಟಕವಾಗಿರುವ ಕರೊನಾ ಮಹಾಮಾರಿ ಸಂಕಷ್ಟದಲ್ಲಿಯೂ ಸಹ ಪಟ್ಟಣದ ಮುಸ್ಲಿಂ ಸಮುದಾಯ ಬಡ ರೋಗಿಗಳಿಗೆ ಸಹಾಯ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

    ಪಟ್ಟಣದ ಮರ್ಕಜ್ ಮಸ್ಜಿದ್ ಹತ್ತಿರದ ಉರ್ದು ಶಾಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಸ್ಥಾಪಿತವಾದ ಬಡ ರೋಗಿಗಳಿಗೆ ನೆರವಾಗುವ ಶಿಫಾ ಹೆಲ್ಪಿಂಗ್ ಸೆಂಟರ್ ಕೋವಿಡ್-19 ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೊನಾ ಮಹಾಮಾರಿ ಬಂದಾಗಿನಿಂದ ಬಡ ರೋಗಿಗಳು ಜೀವ ಅಂಗೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಯಾವುದೇ ರೋಗ ಲಕ್ಷಣ ಕಂಡರೆ ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿಯೂ ಶಿಫಾ ಹೆಲ್ಪಿಂಗ್ ಸೆಂಟರ್‌ನವರು ಕರೊನಾ ಲಕ್ಷಣವಿದ್ದ ಬಡ ರೋಗಿಗಳಿಗೆ ಥರ್ಮಾಮೀಟರ್, ಆಂಟಿ ಬಯೋಟಿಕ್ ಮೆಡಿಸಿನ್, ಆಕ್ಸಿಜನ್ ಸಿಲಿಂಡರ್, ಆಂಬುಲೆನ್ಸ್ ಈ ಎಲ್ಲ ಸೇವೆಗಳನ್ನು ಉಚಿತವಾಗಿ ಒದಗಿಸಿ ಮಾನವೀಯತೆ ಮರೆದಿದ್ದಾರೆ ಎಂದರು.

    ಸಿಪಿಐ ಉಳವಪ್ಪ ಸಾತೇನಹಳ್ಳಿ ಮಾತನಾಡಿ, ಜಾತಿಮತಗಳನ್ನು ಮೀರಿ ಮಾನವೀಯ ದೃಷ್ಟಿಯಿಂದ ಉಚಿತವಾಗಿ ನಡೆಸುತ್ತಿರುವ ಶಿಫಾ ಹೆಲ್ಪಿಂಗ್ ಸೆಂಟರ್ ಲಾಭ ಎಲ್ಲ ಬಡರೋಗಿಗಳು ಪಡೆದುಕೊಂಡು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದಣ್ಣವರ ಮಾತನಾಡಿ, ಶಿಫಾ ಸಮಿತಿಯ ಸುಮಾರು 50 ಕ್ಕಿಂತ ಹೆಚ್ಚು ಯುವಕರು ಕರೊನಾದಿಂದ ಮೃತರಾದವರ ಅಂತ್ಯ ಸಂಸ್ಕಾರ ಮಾಡಲು ತರಬೇತಿ ಪಡೆದಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ದಿನದ 24 ಗಂಟೆಯಲ್ಲೂ ಸಹಾಯಕ್ಕೆ ಸನ್ನದ್ಧರಾಗಿದ್ದಾರೆ. ಜಾತಿ, ಮತ ಎಂಬ ತಾರತಮ್ಯವಿಲ್ಲದೆ ಯುವಕರು ಈ ಕೆಲಸ ಮಾಡುತ್ತಿದ್ದಾರೆ.

    ಮೃತರ ಧರ್ಮದ ಪ್ರಕಾರ ಅಂತಿಮ ವಿಧಿ ವಿಧಾನಗಳನ್ನು ನಡೆಸಲು ಸಹಕರಿಸುತ್ತಿದ್ದಾರೆ. ಇಲ್ಲಿಯವರೆಗೂ ಕರೊನಾ ಸೋಂಕಿನಿಂದ ಮೃತಪಟ್ಟ ಇಬ್ಬರು ಹಿಂದುಗಳ ಸಂಸ್ಕಾರ ನಡೆಸಿದ್ದಾರೆ ಎಂದರು.

    ಆರ್.ಎ. ಅರಭಾಂವಿ, ಫಯಾಜ ಚಾಂದಶೇವಾಲೆ, ಫಜಲಹ್ಮದ್ ಪಾಟೀಲ, ರಫೀಕ್ ಸವದತ್ತಿ, ಲತೀಫ್ ಮಿರ್ಜಿ, ಅಲ್ತಾಫ್ ನೇಸರಗಿ, ಸಾಜಿದ ಬಾಬಣ್ಣವರ, ತೌಸೀಫ್ ಮುಜಾವರ, ಇಮಾಮ್ ಫನಿಬಂದ, ಶರೀಫ್ ತಿಗಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts