More

    ಕೃಷ್ಣರಾಜ ದಲ್ಲಿ ಅಭ್ಯರ್ಥಿಗಳ ಎದೆಬಡಿತ ಹೆಚ್ಚಿಸಿದ ವರಿಷ್ಠರು

    ಸದೇಶ್ ಕಾರ್ಮಾಡ್ ಮೈಸೂರು
    ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಅಭ್ಯರ್ಥಿ ಯಾರು? ಪ್ರತಿಯೊಬ್ಬರ ಹಾಗೂ ಪ್ರತಿಯೊಂದು ಪಕ್ಷಗಳ ಕುತೂಹಲದ ಪ್ರಶ್ನೆ ಇದೇ ಆಗಿದೆ. ಬಿಜೆಪಿ ವರಿಷ್ಠರು ಬಿಡುಗಡೆ ಮಾಡಿದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗದೆ ಇರುವುದು ಅಭ್ಯರ್ಥಿಗಳ ಎದೆಬಡಿತ ಹೆಚ್ಚು ಮಾಡುವಂತೆ ಮಾಡಿದೆ.

    ಯಾವ ಕಾರಣಕ್ಕೆ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ? ಈ ಬಾರಿ ಯಾರಿಗೆ ಟಿಕೆಟ್ ಸಿಗಬಹುದು? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಬಿಜೆಪಿಯ ಜತೆಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಸಹ ಮೊದಲ ಪಟ್ಟಿಯಲ್ಲಿ ಅಂತಿಮ ಗೊಳ್ಳದೆ ಇರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ ಇದ್ದು, ಹಾಲಿ ಶಾಸಕ ಎಸ್.ಎ. ರಾಮದಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಈ ಮೂವರ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಅದರಿಂದ ಪಕ್ಷದ ಮೇಲೆ ಸಕಾರಾತ್ಮಕ ಹಾಗೂ ನಕರಾತ್ಮಕ ಪರಿಣಾಮ ಬೀರುವುದು ನಿಶ್ಚಿತ. ಇದರ ಲಾಭವನ್ನು ಪಡೆಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಒಂದುವೇಳೆ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡರೆ ಅದರ ಪೂರ್ಣ ಪ್ರಮಾಣದ ಲಾಭವನ್ನು 2013ರಲ್ಲಿ ಪಡೆದ ರೀತಿಯಲ್ಲಿಯೇ ಪಡೆಯಬೇಕು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದ್ದು, ಈ ಕಾರಣಕ್ಕೆ ಕಾಂಗ್ರೆಸ್ ಈ ಬಾರಿ ಅಳೆದುತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

    ಈ ಬಾರಿ ಕೃಷ್ಣರಾಜ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಬಿಜೆಪಿ ವರಿಷ್ಠರಿಗೆ ಜೇನುಗೂಡಿಗೆ ಕೈ ಹಾಕಿದ ರೀತಿಯಲ್ಲಿ ಇದ್ದು, ಇಲ್ಲಿ ಯಾವುದೇ ವ್ಯಕ್ತಿಗೂ ಟಿಕೆಟ್ ನೀಡಿದರೂ ಟಿಕೆಟ್ ವಂಚಿತರನ್ನು ಸಮಾಧಾನ ಪಡಿಸುವುದೇ ದೊಡ್ಡ ಸವಾಲಿನ ವಿಚಾರವಾಗಿದೆ. ಹಾಗಾಗಿ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆ? ಟಿಕೆಟ್ ವಂಚಿತರನ್ನು ಹೇಗೆ ಮನವೊಲಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಮತ್ತೊಂದೆಡೆ ಜೆಡಿಎಸ್ ಕೆ.ವಿ.ಮಲ್ಲೇಶ್ ಅವರನ್ನು ಎರಡನೇ ಬಾರಿಗೆ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಕೆ.ವಿ.ಮಲ್ಲೇಶ್ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.

    ಅಬ್ಬರದ ಪ್ರಚಾರ

    ಈ ಬಾರಿಯೂ ಟಿಕೆಟ್ ದೊರೆಯುವ ನಿರೀಕ್ಷೆಯೊಂದಿಗೆ ಶಾಸಕ ಎಸ್.ಎ. ರಾಮದಾಸ್ ಅಬ್ಬರದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲೂ ಯೋಗಕ್ಷೇಮ ಯಾತ್ರೆ ನಡೆಸುವ ಮೂಲಕ ಜನರ ಸಂಕಷ್ಟಗಳನ್ನು ಆಲಿಸುವ ಜತೆಗೆ ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ರಾಮದಾಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಗೆ ತಯಾರಿಸಿ ಮತದಾರರಿಗೆ ಹಂಚಿಕೆ ಮಾಡುತ್ತಿದ್ದಾರೆ.

    ಟಿ.ಎಸ್. ಶ್ರೀವತ್ಸ ಟಿಕೆಟ್ ಪಡೆಯುವ ಆತ್ಮವಿಶ್ವಾಸದಲ್ಲಿ ಇದ್ದು, ಪಕ್ಷದ ನಗರಾಧ್ಯಕ್ಷರಾಗಿ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಟಿಕೆಟ್ ಆಕಾಂಕ್ಷಿಯಾದ ಎಚ್.ವಿ. ರಾಜೀವ್ ಮೊದಲಿನಿಂದಲೂ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದು, ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗಮನ ಸೆಳೆದಿದ್ದಾರೆ. ಹೀಗಾಗಿ ಈ ಬಾರಿ ಟಿಕೆಟ್ ನನಗೆ ದೊರೆಯಲಿದೆ ಎಂಬ ಆತ್ಮವಿಶ್ವಾಸವನ್ನು ರಾಜೀವ್ ಹೊಂದಿದ್ದು, ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.

    ಬ್ರಾಹ್ಮಣರ ಮನವೊಲಿಕೆ ಪ್ರಯತ್ನ

    ಈ ಬಾರಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬ್ರಾಹ್ಮಣ ಸಮುದಾಯದ ಸಮಸ್ಯೆಗಳಿಗೆ ರಾಮದಾಸ್ ಸ್ಪಂದಿಸುತ್ತಿಲ್ಲ, ಹಾಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ಕೆಲವು ಬ್ರಾಹ್ಮಣ ಸಂಘಟನೆಗಳು ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಅತೃಪ್ತಿ ಹೊರಹಾಕಿವೆ. ಇದು ರಾಮದಾಸ್ ಹಾಗೂ ಬಿಜೆಪಿ ವರಿಷ್ಠರ ತಲೆನೋವಿಗೆ ಕಾರಣವಾಗಿದೆ. ಕೆಲವು ಬ್ರಾಹ್ಮಣ ಸಂಘಟನೆಗಳು ಅತೃಪ್ತಿ ಹೊರ ಹಾಕಿದ ನಂತರ ರಾಮದಾಸ್ ಇದರಿಂದ ಆಗುವ ಪರಿಣಾಮ ತಡೆಗಟ್ಟುವ ಪ್ರಯತ್ನ ನಡೆಸಿದ್ದರು. ಇತ್ತೀಚೆಗೆ ನಗರದ ವಿದ್ಯಾಶಂಕರ ಕಲ್ಯಾಣಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪುರೋಹಿತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಮದಾಸ್ ‘ಸಮುದಾಯದ ಪರವಾಗಿ ಎಂತಹ ಸಂದರ್ಭದಲ್ಲೂ ನೆರವಿಗೆ ನಿಂತಿದ್ದೇನೆ, ಅದು ಮುಂದೆಯೂ ಕೂಡ ಇರಲಿದೆ. ಅದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ಸದಾಕಾಲವೂ ನನ್ನ ಮೇಲಿರಲಿ’ ಎಂದು ಬ್ರಾಹ್ಮಣ ಸಮುದಾಯದ ವಿಶ್ವಾಸ ಗಳಿಸುವ ಕಾರ್ಯ ಮಾಡಿದ್ದಾರೆ.

    ಕಾಂಗ್ರೆಸ್ ನಡೆ ಏನು?

    ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಈ ಬಾರಿಯೂ ಟಿಕೆಟ್ ಪಡೆಯುವುದು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ, ಬಿಜೆಪಿ ಟಿಕೆಟ್ ಹಂಚಿಕೆಯ ನಂತರ ಉಂಟಾಗುವ ರಾಜಕೀಯ ಬೆಳವಣಿಗೆಯನ್ನು ಗಮನಿಸಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಬಿಜೆಪಿ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಮುಂದೆ ಯಾವ ನಡೆ ಅನುಸರಿಸಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ಬಂಡಾಯ ಉಂಟಾದರೆ ಅದರ ಲಾಭ ಪಡೆಯುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದ್ದು, ಅಂತಿಮ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ನವೀನ್ ಕುಮಾರ್, ಪ್ರದೀಪ್ ಕುಮಾರ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವರಿಷ್ಠರು ಯಾರ ಪರ ಒಲವು ತೋರುತ್ತಾರೆ ಎಂಬುದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts