More

    ರಾಜಕೀಯ ಚಟುವಟಿಕೆ ಚುರುಕು

    ಕಾರವಾರ: ಜು. 1ರಂದು ಚುನಾವಣಾ ಆಯೋಗ ಪ್ರಕಟಿಸಿದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿಯು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಯನ್ನು ಚುರುಕು ಮಾಡಿದೆ. ಮೀಸಲಾತಿ ಹಲವು ಹಾಲಿಗಳಿಗೆ ಸ್ವ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿಸಿದೆ. ಇನ್ನು ಕೆಲ ಹೊಸ ಆಕಾಂಕ್ಷಿಗಳ ಆಸೆ ಚಿಗುರುವಂತೆ ಮಾಡಿದೆ.
    ನಿಕಟಪೂರ್ವ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್, ಜಯಮ್ಮ ಹಿರಳ್ಳಿ, ಎಲ್.ಟಿ. ಪಾಟೀಲ, ಬಸವರಾಜ ದೊಡ್ಮನಿ ಅವರು ಹಾಲಿ ಆಯ್ಕೆಯಾಗಿದ್ದ ಕ್ಷೇತ್ರದಲ್ಲಿ ಮರು ಸ್ಪರ್ಧೆಯ ಅವಕಾಶ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಅಧ್ಯಕ್ಷೆ ಗಾಯತ್ರಿ ಗೌಡ, ಜಿ.ಎನ್. ಹೆಗಡೆ ಮುರೇಗಾರ್, ಅಲ್ಬರ್ಟ್ ಡಿಕೋಸ್ಟಾ, ಉಷಾ ಹೆಗಡೆ ಸೇರಿ ಹಲವು ಘಟಾನುಘಟಿ ಸದಸ್ಯರಿಗೂ ಮೀಸಲಾತಿ ತಲೆಬಿಸಿ ಉಂಟುಮಾಡಿದೆ. ತಾಪಂಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
    ಜಿಪಂನ 40 ಕ್ಷೇತ್ರಗಳ ಪೈಕಿ 18 ಕ್ಷೇತ್ರ ಮಹಿಳೆಯರಿಗೆ ಮೀಸಲಾಗಿವೆ. ಸ್ಪರ್ಧೆಯ ಅವಕಾಶ ವಂಚಿತರಾದ ಕೆಲ ಹಾಲಿ ಸದಸ್ಯರು ತಮ್ಮ ಪತ್ನಿಯನ್ನು ಸ್ಪರ್ಧೆಗಿಳಿಸುವ ಯೋಚನೆ ಮಾಡುತ್ತಿದ್ದಾರೆ. ಕಳೆದ ಬಾರಿ ಮೀಸಲಾತಿಯಿಂದ ಸ್ಪರ್ಧೆಯ ಅವಕಾಶ ಕಳೆದುಕೊಂಡು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಉದಯ ನಾಯ್ಕ, ಸೂರಜ್ ನಾಯ್ಕ ಸೋನಿ ಮುಂತಾದವರಿಗೆ ಈ ಬಾರಿಯ ಮೀಸಲಾತಿ ಮತ್ತೆ ಸ್ಪರ್ಧೆಯ ಅವಕಾಶ ನೀಡಿದೆ.
    ಪಕ್ಷಗಳಿನ್ನೂ ಸಿದ್ಧತೆ ನಡೆಸಿಲ್ಲ: ಕ್ಷೇತ್ರ ವಾರು ಮೀಸಲಾತಿ ಪ್ರಕಟವಾಗಿದ್ದರೂ ಚುನಾವಣೆ ಶೀಘ್ರದಲ್ಲಿ ಘೊಷಣೆಯಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ನವೆಂಬರ್ ಅಥವಾ ಡಿಸೆಂಬರ್ ಹೊತ್ತಿಗೆ ತಾಪಂ, ಜಿಪಂ ಚುನಾವಣೆ ನಡೆಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಆಕಾಂಕ್ಷಿಗಳ ದಂಡು ದೊಡ್ಡದೇ ಇದ್ದರೂ ಪಕ್ಷಗಳು ಇನ್ನೂ ಅಧಿಕೃತವಾಗಿ ಚುನಾವಣೆಯ ತಯಾರಿ ನಡೆಸಿಲ್ಲ. ಟಿಕೆಟ್ ಕೇಳುವವರಿಗೆ ಪಕ್ಷದಲ್ಲಿ ಒಳ್ಳೆ ಕೆಲಸ ಮಾಡಿ ಆಗ ಕೊಡಿಸೋಣ ಎಂದು ಮುಖಂಡರು ಹೇಳುತ್ತಿದ್ದಾರೆ.

    ಡಿಕೆಶಿ ಶಿರಸಿಗೆ 7ರಂದು: ಕಾರವಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜು. 7ರಂದು ಜಿಲ್ಲೆಯ ಪ್ರವಾಸ ಕೈಗೊಳ್ಳುವರು. ಅಂದು ಬೆಳಗ್ಗೆ 10.30ಕ್ಕೆ ಆಗಮಿಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. 11 ಗಂಟೆಗೆ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30ಕ್ಕೆ ಕೋವಿಡ್ ಸಹಾಯ ಹಸ್ತದ ಬಗ್ಗೆ ಕಾರ್ಯಕರ್ತರ ಸಭೆ ನಡೆಸುವರು.

    ಜಿಪಂ ಚುನಾವಣೆ ಸಂಬಂಧ ಯಾವುದೇ ಪ್ರತ್ಯೇಕ ತಯಾರಿ ನಡೆದಿಲ್ಲ. ಆದರೆ, ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ. ಕೋವಿಡ್ ಸಂಬಂಧ ನಿರಂತರ ಸೇವಾ ಕಾರ್ಯ ಕೈಗೊಳ್ಳುವಂತೆ ಕೆಪಿಸಿಸಿ ಸೂಚನೆ ನೀಡಿದೆ. ಸದ್ಯ ಮನೆ, ಮನೆಗೆ ತೆರಳಿ ಕೋವಿಡ್ ಹಾಗೂ ಲಾಕ್​ಡೌನ್​ನಿಂದ ಬಾಧಿತರಾದವರ ವಿವರ ಪಡೆದು ಜುಲೈ 30ರೊಳಗೆ ಸಲ್ಲಿಸುವಂತೆ ಕೆಪಿಸಿಸಿ ಸೂಚಿಸಿದೆ. ಅದರಂತೆ ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ.
    | ಶಂಭು ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ


    ಬಿಜೆಪಿ ಸದಾ ಕ್ರಿಯಾಶೀಲ, ಸೇವಾ ಮನೋಭಾವದ ಪಕ್ಷ. ನಿರಂತರ ಕಾರ್ಯಕ್ರಮಗಳು ನಡೆಯುತ್ತಿವೆ. ಈಗ ಜಿಪಂ, ತಾಪಂ ಮೀಸಲಾತಿ ಪ್ರಕಟವಾದ ನಿಟ್ಟಿನಲ್ಲಿ ತಾಂತ್ರಿಕವಾಗಿ ಕೈಗೊಳ್ಳಬೇಕಾದ ಸಿದ್ಧತೆಗೂ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.
    | ನಾಗರಾಜ ನಾಯಕ, ಜಿಲ್ಲಾ ಬಿಜೆಪಿ ವಕ್ತಾರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts