More

    ಕುಸ್ತಿಯಲ್ಲಿ ಪೊಲೀಸ್ ಪೈಲ್ವಾನರು ಸಕ್ರಿಯ

    ಮಂಜುನಾಥ ಅಂಗಡಿ ಧಾರವಾಡ

    ನಗರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕುಸ್ತಿ ಹಬ್ಬದ ಯಶಸ್ಸಿಗೆ ಜಿಲ್ಲಾಡಳಿತದ ವಿವಿಧ ಹಂತದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಸೇವಾನಿರತ ಪೊಲೀಸ್ ಪೈಲ್ವಾನರೂ ಇದ್ದು, ವಿವಿಧ ಜವಾಬ್ದಾರಿ ನಿರ್ವಹಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

    ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಎಎಸ್​ಐ ಆಗಿರುವ ಆರ್.ಎಚ್. ನದಾಫ್ ಮಾಜಿ ಪೈಲ್ವಾನರು. ಕುಸ್ತಿ ಕೋಟಾದಲ್ಲಿ ಪೊಲೀಸ್ ವೃತ್ತಿ ಸೇರಿದವರು. ತಾಲೂಕಿನ ಲೋಕೂರ ಗ್ರಾಮದ ನದಾಫ್ ಕುಸ್ತಿಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಖಾಡಕ್ಕಿಳಿದು ಸ್ಪರ್ಧಿಸಿದವರು. ಈಗಲೂ ಕುಸ್ತಿಯ ಬಗೆಗಿನ ಒಲವು ಕಡಿಮೆಯಾಗಿಲ್ಲ. ಎಲ್ಲೇ ಕುಸ್ತಿ ನಡೆದರೂ ರೆಫ್ರಿಯಾಗಿ, ಸಂಯೋಜಕರಾಗಿ ಹೆಚ್ಚುವರಿ ಸೇವೆಗೆ ಹಾಜರಾಗುತ್ತಾರೆ. ಅವರ ಆಸಕ್ತಿಯನ್ನು ಖುದ್ದು ಪೊಲೀಸ್ ಆಯುಕ್ತ ಆರ್. ದಿಲೀಪ್ ಪ್ರೋತ್ಸಾಹಿಸಿ, ಕುಸ್ತಿ ಹಬ್ಬದಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

    1991ನೇ ಬ್ಯಾಚ್​ನ ಪೊಲೀಸ್ ಪೇದೆಯಾಗಿ ವೃತ್ತಿ ಸೇರಿದ ನದಾಫ್, ಯುನಿವರ್ಸಿಟಿ ಬ್ಲೂ ಪಟ್ಟ ಅಲಂಕರಿಸಿದ್ದವರು. ಪೊಲೀಸ್ ವೃತ್ತಿ ಹಾಗೂ ಅದಕ್ಕೂ ಮೊದಲು ಕುಸ್ತಿಯಲ್ಲಿ 10 ಬಾರಿ ರಾಜ್ಯವನ್ನು ಪ್ರತಿನಿಧಿದ್ದಾರೆ. ಮೈಸೂರು ದಸರಾ ಕುಸ್ತಿ, ಪೊಲೀಸ್ ಮೀಟ್, ಅಖಿಲ ಭಾರತ ದಕ್ಷಿಣ ವಲಯದಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರೀಯ ಕುಸ್ತಿಯಲ್ಲೂ ಅವರು ಸೆಣಸಿರುವುದು ವಿಶೇಷ. ಎಆರ್​ಎಸ್​ಐ ಎಂ.ಎಂ. ನದಾಫ್, ಡಿಎಆರ್ ಹೆಡ್ ಕಾನಸ್ಟೇಬಲ್ ಬಿ.ವೈ. ಬಸನಗೌಡರ, ಕಲಘಟಗಿ ಠಾಣೆ ಎಎಸ್​ಐ ಜಿ.ಎಂ. ಉಡಚಮ್ಮನವರ, ಡಿಎಆರ್ ಎಎಚ್​ಸಿ ಆರ್.ಜಿ. ಬಾಗಲಕೋಟ, ಡಿಎಆರ್ ಎಎಚ್​ಸಿ ಸುರೇಶ ಕಾಮಣ್ಣವರ, ಎಆರ್​ಎಸ್​ಐ ಶಿವರುದ್ರಪ್ಪ ಗಂಡ್ಲಾಟಿ, ಡಿಎಆರ್ ಹೆಡ್ ಕಾನಸ್ಟೇಬಲ್ ಏಗಪ್ಪ ಚಿಕಣಿ, ಹುಬ್ಬಳ್ಳಿ ಉತ್ತರ ಸಂಚಾರ ಠಾಣೆ ಕಾನ್​ಸ್ಟೇಬಲ್ ಎಚ್.ಎಂ. ನದಾಫ್ ಸಹ ಕರ್ನಾಟಕ ಕುಸ್ತಿ ಹಬ್ಬದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

    ಪೊಲೀಸ್ ವೃತ್ತಿಯ ಬಂದೋಬಸ್ತ್, ಡ್ಯೂಟಿಯ ಮಧ್ಯೆ ಪೊಲೀಸ್ ಪೈಲ್ವಾನರಿಗೆ ಕುಸ್ತಿ ಹಬ್ಬದ ಜವಾಬ್ದಾರಿ ವಹಿಸಿರುವುದನ್ನು ಸಂತೋಷದಿಂದ ನಿರ್ವಹಿಸುತ್ತಿದ್ದಾರೆ. ನಿತ್ಯ ಖಾಕಿ ಸಮವಸ್ತ್ರ ತೊಟ್ಟು ಶಿಫ್ಟ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೈಲ್ವಾನರು, ರುಮಾಲು ಸುತ್ತಿಕೊಂಡು ಉತ್ಸುಕತೆಯಿಂದ ಓಡಾಡಿ ಕೆಲಸ ಮಾಡುತ್ತಿದ್ದಾರೆ. ವೃತ್ತಿಗೆ ಸೇರಿದ ನಂತರವೂ ಕುಸ್ತಿಯ ಪಟ್ಟುಗಳನ್ನು ಮರೆಯದ ಪೈಲ್ವಾನರು ತಮ್ಮ ಆ ದಿನಗಳನ್ನು ಮೆಲುಕು ಹಾಕುವ ಮೂಲಕ ಧಾರವಾಡ ಕುಸ್ತಿ ಹಬ್ಬದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

    ಪೊಲೀಸ್ ವೃತ್ತಿಗೆ ದಾರಿ ಮಾಡಿಕೊಟ್ಟಿದ್ದ ಕುಸ್ತಿ ಅಖಾಡ. ವಯಸ್ಸಾದರೂ ಕುಸ್ತಿಯ ಪಟ್ಟುಗಳನ್ನು ಮರೆಯಲಾಗದು. ನಮ್ಮನ್ನೆಲ್ಲ ಗುರುತಿಸಿ ಜವಾಬ್ದಾರಿ ವಹಿಸಿರುವುದು ಸಂತೋಷದ ಸಂಗತಿ. ಪೊಲೀಸ್ ಪೈಲ್ವಾನರನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಇಲಾಖೆಯ ಅಧಿಕಾರಿಗಳೂ ಖುಷಿಯಾಗಿದೆ.

    | ಆರ್.ಎಚ್. ನದಾಫ್ ಪೊಲೀಸ್ ಪೈಲ್ವಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts