More

    ಬೆಳಗಾವಿ ಹೆದ್ದಾರಿಯಲ್ಲಿ ಕನ್ನಡ ಕಹಳೆ ಮಹಾಗೆ ಠಕ್ಕರ್; ಕಾರ್ಯಕರ್ತರ ತಡೆದ ಖಾಕಿ ಪಡೆ | ಮಹಾರಾಷ್ಟ್ರ ವಾಹನಗಳಿಗೆ ಕಲ್ಲು ತೂರಿ, ಮಸಿ ಬಳಿದು ಆಕ್ರೋಶ

    ಬೆಳಗಾವಿ: ಕುಂದಾನಗರಿಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿ ಮೇಲೆ ಹಲ್ಲೆ, ಪೊಲೀಸರಿಂದ ನಡೆದ ದೌರ್ಜನ್ಯ ಖಂಡಿಸಿ ಹಾಗೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಮಂಗಳವಾರ ಧಾರವಾಡದಿಂದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ‘ನೂರು ವಾಹನ ಸಾವಿರ ಕನ್ನಡ ಧ್ವಜ’ ಘೊಷವಾಕ್ಯದೊಂದಿಗೆ ಬೆಳಗಾವಿಗೆ ಹೊರಟಿದ್ದ ಕಾರ್ಯಕರ್ತರನ್ನು ತಾಲೂಕಿನ ಹಿರೇಬಾಗೇವಾಡಿ ಟೋಲ್​ನಲ್ಲಿ ಪೊಲೀಸರು ತಡೆದರು.

    ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಕಾರ್ಯಕರ್ತರು ಲಾರಿ, ಬಸ್ಸುಗಳ ಮೇಲೇರಿ ಬೃಹತ್ ಕನ್ನಡ ಭಾವುಟ ಪ್ರದರ್ಶಿಸಿದರು. ಮಹಾರಾಷ್ಟ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿ ಮಹಾರಾಷ್ಟ್ರದ 6 ವಾಹನ ತಡೆದು ಮಸಿ ಬಳಿದು, ಕಲ್ಲು ತೂರಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದರು.

    ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಡುರಸ್ತೆಯಲ್ಲೇ ವಾಹನಗಳ ಕೆಳಗೆ ಮಲಗಿ ರಸ್ತೆ ತಡೆ ನಡೆಸಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು 7 ಏಳು ಬಸ್ಸುಗಳಲ್ಲಿ ಮತ್ತೊಂದು ಸ್ಥಳಕ್ಕೆ ಕರೆದೊಯ್ದರು. ಪ್ರತಿಭಟನೆಯಿಂದಾಗಿ ಎರಡು ಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

    ಬೆಳಗಾವಿ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಡಿಸಿಪಿಗಳಾದ ಡಿಸಿಪಿ ರವೀಂದ್ರ ಗಡಾದೆ, ಪಿ.ವಿ.ಸ್ನೇಹಾ ನೇತೃತ್ವದಲ್ಲಿ 11 ಕೆಎಸ್​ಆರ್​ಪಿ ತುಕಡಿ ಸೇರಿ 300 ಅಧಿಕ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

    ರಾಜ್ಯ ಬಸ್​ಗೆ ಕಪ್ಪು-ಕೇಸರಿ ಬಣ್ಣ

    ಪುಣೆ/ಬೆಳಗಾವಿ: ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಭಾಷಾ ವೈಷಮ್ಯ ತಾರಕಕ್ಕೇರಿದ್ದು, ಪುಣೆ ನಗರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಕಾರ್ಯಕರ್ತರು ಮಂಗಳವಾರ ಪುಣೆ ನಗರದ ಸ್ವರ್ಗೆಟ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಸಾರಿಗೆಯ 3 ಬಸ್​ಗಳಿಗೆ ಕಪ್ಪು ಮತ್ತು ಕೇಸರಿ ಬಣ್ಣ ಹಚ್ಚಿ ಉದ್ಧಟತನ ಪ್ರದರ್ಶಿಸಿದ್ದಾರೆ. ಈ ಬಸ್​ಗಳಲ್ಲಿ ‘ಜೈ ಮಹಾರಾಷ್ಟ್ರ ’ಎಂದು ಬರೆದಿದ್ದಾರೆ. ಕರ್ನಾಟಕ ಬಸ್​ಗಳಿಗೆ ಬಣ್ಣಬಳಿದ ಐವರನ್ನು ಬಂಧಿಸಿದ್ದೇವೆ ಎಂದು ಮಹಾರಾಷ್ಟ್ರ ಪೊಲೀಸ್ ಮೂಲಗಳು ತಿಳಿಸಿವೆ.

    ಶಾಂತಿ ಕಾಪಾಡಲು ಆಗ್ರಹ: ಕರ್ನಾಟಕ-ಮಹಾರಾಷ್ಟ್ರದ ಉಭಯ ರಾಜ್ಯಗಳಲ್ಲಿ ಗಡಿ ಗಲಾಟೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿ, ಶಾಂತಿ ಸುವ್ಯವಸ್ಥೆ ಹದಗೆಡದಂತೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲಿ, ಬೆಂಗಳೂರಿಗೂ ಬರಲಿ. ನಾವೂ ಮುಂಬೈಗೆ ಹೋಗುತ್ತೇವೆ. ಕಾನೂನಿಗೆ ವಿರುದ್ಧವಾಗಿ ಹೋದರೆ, ಶಾಂತಿ ಹಾಳು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ.

    | ಆರಗ ಜ್ಞಾನೇಂದ್ರ ಗೃಹ ಸಚಿವ

    ಎಂಇಎಸ್ ಹಾರಾಟಕ್ಕೆ ಬ್ರೇಕ್

    ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಭೇಟಿಗೆ ನಿರ್ಧರಿಸಿದ್ದ ಮಹಾ ಸಚಿವರ ಪ್ರವೇಶ ನಿರ್ಬಂಧಿಸಿದ್ದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಿಟ್ಟು ಕಳುಹಿಸಿದ್ದಾರೆ.

    ಭೇಟಿ ಕೈಬಿಟ್ಟ ಮಹಾ ಮುಖಂಡರು

    ಮಹಾರಾಷ್ಟ್ರದಲ್ಲಿ ಸಚಿವ ಶಂಭುರಾಜೆ ದೇಸಾಯಿ ಮಾತನಾಡಿ, ತಮ್ಮ ಮಹಾರಾಷ್ಟ್ರ ನಾಯಕರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೂಚನೆ ನೀಡಿದರೆ ಮಾತ್ರ ಬೆಳಗಾವಿಗೆ ಹೋಗುತ್ತೇವೆ. ಮಂಗಳವಾರ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಇದೆ. ಹೀಗಾಗಿ ನಾವು ಬೆಳಗಾವಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಚುನಾವಣೆಗೋಸ್ಕರ ನಾವು ಗಡಿ ವಿವಾದ ಕೆದಕುತ್ತಿಲ್ಲ. ಮಹಾರಾಷ್ಟ್ರವೇ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್​ಗೆ ಹೋಗಿದೆ. ನಾವು ಯಾವ ರೀತಿ ಕಾನೂನು ಹೋರಾಟ ನಡೆಸಬೇಕು ಎಂಬುದಕ್ಕೆ ಸಿದ್ಧವಾಗಿ ದ್ದೇವೆ. ಖಂಡಿತವಾಗಿಯೂ ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕೇ ಸಿಗುತ್ತದೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಕರವೇ ಕಾರ್ಯಕರ್ತರನ್ನು ಬೆಳಗಾವಿ ಪ್ರವೇಶಿಸಲು ಬಿಡುವುದಿಲ್ಲ ಎನ್ನುವುದು ಖಂಡನೀಯ. ಇದೇನು ಪೊಲೀಸ್ ರಾಜ್ಯವೇ? ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್​ಗೆ ಮಹಾಮೇಳಾವ್ ನಡೆಸಲು ಅವಕಾಶ ಕೊಡುವ ಸರ್ಕಾರವು, ನಾಡು-ನುಡಿ ಬಗ್ಗೆ ಹೋರಾಟ ಮಾಡುವ ಕರವೇ ಕಾರ್ಯಕರ್ತರಿಗೆ ಅವಕಾಶ ಬೆಳಗಾವಿಗೆ ಹೋಗಲು ಅವಕಾಶ ನೀಡದಿರುವುದು ದುರಂತದ ಸಂಗತಿ.

    | ಟಿ.ನಾರಾಯಣಗೌಡ ಕರವೇ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts