

ಕೋಲ್ಕತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ಭ್ರಷ್ಟತೆಯನ್ನು, ಭ್ರಷ್ಟ ನಾಯಕರನ್ನು ಎದುರಿಸೋ ತಾಕತ್ತಿಲ್ದೇ, ಅವರ ಕೈಗೊಂಬೆಗಳಂತೆ ಪೊಲೀಸರು ವರ್ತಿಸ್ತಿರೋ ಕಾರಣ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಶನಿವಾರ ಪೊಲೀಸ್ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದು, ವಿರೋಧ ಪಕ್ಷಗಳ ಬಗ್ಗೆ ಪಕ್ಷಪಾತ ನೀತಿ ಅನುಸರಿಸುತ್ತಿರುವ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿ, ತರಕಾರಿ ಮಾರೋದಕ್ಕೆ ಹೋಗಿ ಎಂದು ವಾಕ್ಪ್ರಹಾರ ನಡೆಸಿದರು.
ದಕ್ಷ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಟಿಎಂಸಿ ಆಟ ಆಡ್ತಾ ಇದೆ. ಈ ಪೊಲೀಸರಿಗೆ ಬೆನ್ನಹುರಿಯೇ ಇಲ್ಲ. ಹೀಗಾಗಿ ಭ್ರಷ್ಟರ ವಿರುದ್ಧ ಸೆಟೆದು ನಿಲ್ಲೋದಕ್ಕೂ ಅವರಿಂದಾಗುತ್ತಿಲ್ಲ. ಇಂಥವರು ರಾಜೀನಾಮೆ ನೀಡಿ, ತರಕಾರಿ ಮಾರಾಟ ಮಾಡಿ ಪ್ರಾಮಾಣಿಕವಾಗಿ ಬದುಕುವುದು ಒಳಿತು ಎಂದು ಘೋಷ್ ವಾಗ್ದಾಳಿ ನಡೆಸಿದರು.
ಅವರು ನಾರ್ತ್ 24 ಪರಗಣಾಸ್ಜಿಲ್ಲೆಯ ಬೆಲ್ಘರಿಯಾ ಪ್ರದೇಶದಲ್ಲಿ ಚಾ ಚಕ್ರ (ಚಾಯ್ ಪೇ ಚರ್ಚಾ) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಅವರು ಎಚ್ಚರಿಸಿದರು.
ಇದಕ್ಕೆ ಪ್ರತಿಯಾಗಿ ಟಿಎಂಸಿ ನಾಯಕರೂ ಪ್ರತಿ ವಾಗ್ದಾಳಿ ನಡೆಸಿದ್ದು, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಪೊಲೀಸರು ಲಂಗುಲಗಾಮಿಲ್ಲದೆ ಫೇಕ್ ಎನ್ಕೌಂಟರ್ ಮೂಲಕ ಭೀತಿ, ಆತಂಕವನ್ನು ಹುಟ್ಟುಹಾಕಿದ್ದಾರೆ. ಅದಕ್ಕಿಂತ ಪಶ್ಚಿಮ ಬಂಗಾಳ ಪೊಲೀಸರು ಎಷ್ಟೋ ವಾಸಿ. ಇಲ್ಲಿ ಪೊಲೀಸರು ಫೇಕ್ ಎನ್ಕೌಂಟರ್ ಸ್ಕ್ವಾಡ್ ಆಗಿ ಬದಲಾಗಿಲ್ಲ. ಇನ್ನೂ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್)