ನೈಋತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರನಾಗಿ ಸ್ಪರ್ಧೆಗೆ ನಿರ್ಧಾರ

2 Min Read
K.Raghupati Bhat
ಉಡುಪಿಯ ಕರಂಬಳ್ಳಿಯಲ್ಲಿರುವ ಸ್ವಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿದರು.

ಮಾಜಿ ಶಾಸಕ ಕೆ.ರಘುಪತಿ ಭಟ್​ ಮಾಹಿತಿ | ಬಿಜೆಪಿಗೆ ಬಂಡಾಯವಲ್ಲ- ಸ್ಪಷ್ಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ವಿಧಾನ ಪರಿಷತ್​ ಚುನಾವಣೆಯ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಇದು ಬಿಜೆಪಿ ವಿರುದ್ಧ ಬಂಡಾಯ ಸ್ಪರ್ಧೆಯಲ್ಲ, ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್​ ಮಾಹಿತಿ ನೀಡಿದರು.

ಉಡುಪಿಯ ಕರಂಬಳ್ಳಿಯಲ್ಲಿರುವ ಸ್ವಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಪಕ್ಷದ ಚಿಹ್ನೆಯಡಿ ನಡೆಯುವ ಚುನಾವಣೆ ಅಲ್ಲ. ಹೀಗಾಗಿ ಗೆದ್ದರೂ, ಸೋತರೂ ಬಿಜೆಪಿಯ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ ಎಂದರು.

ನಾನು ನಿಷ್ಠಾವಂತ ಕಾರ್ಯಕರ್ತ

ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲೂ ಸಹ ನನಗೆ ಟಿಕೆಟ್​ ಕೊಡಲಿಲ್ಲ. ಯಾಕೆ ನನಗೆ ಕೊಡುತ್ತಿಲ್ಲ ಎಂದು ತಿಳಿಸದೇ ಮೀನುಗಾರ ಸಮಾಜದವರಿಗೆ ಆದ್ಯತೆ ಕೊಡಲು ಯಶ್​ಪಾಲ್​ ಸುವರ್ಣ ಅವರಿಗೆ ಟಿಕೆಟ್​ ಕೊಟ್ಟರು. ಅವರು ಮೊದಲೇ ಬಿಜೆಪಿಯ ಕಾರ್ಯಕರ್ತ ಆಗಿದ್ದರಿಂದ ನಾನು ಅವರ ಗೆಲುವಿಗಾಗಿ ಶ್ರಮಿಸಿದೆ. ಈ ಕ್ಷಣದವರೆಗೂ ಸಹ ನಾನು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಎಂದರು.

ತುಂಬ ನೋವಾಗಿದೆ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಕಳೆದ ವರ್ಷ 18 ಸಾವಿರ ಪದವೀಧರ ಮತದಾರರಿದ್ದರು. ಈ ಬಾರಿ 38 ಸಾವಿರದಷ್ಟು ಮತದಾರರ ನೋಂದಣಿ ಮಾಡಿಸಿದ್ದೇನೆ. ಹೀಗಾಗಿ ವಿಧಾನ ಪರಿಷತ್​ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್​ ನೀಡುವಂತೆ ಕೇಳಿದ್ದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು, ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷರಾಗಿದ್ದ ನಳಿನ್​ಕುಮಾರ್​ ಕಟೀಲ್​, ಹಿರಿಯರಾದ ಆರ್​. ಅಶೋಕ್​ ಅವರೆಲ್ಲ ಟಿಕೆಟ್​ ಕೊಡುವುದಾಗಿ ಹೇಳಿದ್ದರು. ಯಡಿಯೂರಪ್ಪ, ವಿಜಯೇಂದ್ರ ಅವರೂ ಭರವಸೆ ನೀಡಿದ್ದರು. ಆದರೆ, ಇತ್ತೀಚೆಗೆ ಕಾಂಗ್ರೆಸ್​ನಿಂದ ಸೇರ್ಪಡೆಯಾದ ಹಾಗೂ ಶಿವಮೊಗ್ಗದಲ್ಲಿ ಈ ಹಿಂದೆ ಬಿಜೆಪಿಯ ವಿರುದ್ಧ ‘ಶಾಂತಿಗಾಗಿ ಪಾದಯಾತ್ರೆ’ ನಡೆಸಿದ್ದ ಡಾ. ಧನಂಜಯ ಸರ್ಜಿ ಅವರಿಗೆ ಟಿಕೆಟ್​ ಕೊಟ್ಟಿದ್ದು ತುಂಬ ನೋವಾಗಿದೆ ಎಂದರು.

See also  ಬಿಜೆಪಿಯಲ್ಲಿ ಅಜೆಂಡಾ ಮತ್ತು ಹಿಡನ್ ಅಜೆಂಡಾ ಎರಡೂ ಇದೆ: ಎಚ್.ಕೆ. ಪಾಟೀಲ್

ಉಚ್ಚಾಟಿಸಿದರೂ ಬಿಜೆಪಿಯಲ್ಲೇ ಇರ್ತೇನೆ

ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಉಡುಪಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಕೆಲಸ ಮಾಡಿದ್ದೇನೆ. ನನಗೆ ಸದಾ ಕೆಲಸ ಮಾಡುವ ತವಕ. ಹೀಗಾಗಿ ಪದವೀಧರರ ಕ್ಷೇತ್ರದಲ್ಲಿ ಆಯ್ಕೆಯಾದರೆ ಕೆಲಸ ಮಾಡಲು ಅನುಕೂಲ ಆಗುತ್ತದೆ. ಇದು ಸರ್ಕಾರ ರಚಿಸುವ ಚುನಾವಣೆ ಅಲ್ಲ. ನಾನು ಪಕ್ಷೇತರನಾಗಿ ಸ್ಪರ್ಧಿಸಿದರೂ ಬಿಜೆಪಿಗೆ ಇದರಿಂದ ಯಾವುದೇ ತೊಡಕಾಗದು. ಗೆಲ್ಲುವ ವಿಶ್ವಾಸದಿಂದಲೇ ಸ್ಪರ್ಧೆ ಮಾಡುತ್ತಿದ್ದು, ಮೇ 16ರಂದು ನಾಮಪತ್ರ ಸಲ್ಲಿಸುತ್ತೇನೆ. ಪಕ್ಷ ನನ್ನನ್ನು ಉಚ್ಚಾಟಿಸಿದರೂ ಸಹ ಬಿಜೆಪಿ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ ಎಂದು ರಘುಪತಿ ಭಟ್​ ತಿಳಿಸಿದರು.

ಜಾತಿ ಬಲ, ಹಣಬಲದಿಂದ ಬಿಜೆಪಿಗೆ ಬರುವವರಿಗೆ ಮಣೆ ಹಾಕುತ್ತಿರುವ ವರಿಷ್ಠರ ನಡೆ ಬೇಸರ ತಂದಿದೆ. ನನ್ನ ಸ್ಪರ್ಧೆ ಬಂಡಾಯವೂ ಅಲ್ಲ, ಪಕ್ಷದ ವಿರುದ್ಧದ ನಿಲುವೂ ಅಲ್ಲ. ವಿಧಾನ ಪರಿಷತ್​ ಚುನಾವಣೆಯ ಟಿಕೆಟ್​ ವಿಚಾರದಲ್ಲಿ ಉಡುಪಿ-ಮಂಗಳೂರು ಭಾಗಕ್ಕೆ ಅನ್ಯಾಯ ಆಗಿದೆ. ಕರಾವಳಿ ಭಾಗದ ಧ್ವನಿಯಾಗಿ ಕೆಲಸ ಮಾಡುವ ಉತ್ಸುಕತೆ ಇರುವುದರಿಂದ ಸ್ಪರ್ಧೆ ಮಾಡುತ್ತಿರುವೆ.

ಕೆ.ರಘುಪತಿ ಭಟ್​. ಬಿಜೆಪಿ ಮಾಜಿ ಶಾಸಕ, ಉಡುಪಿ

Share This Article