More

    ಪೊಲೀಸ್ ಹುತಾತ್ಮ ದಿನ ಅರ್ಥಪೂರ್ಣ ಆಚರಣೆ

    ವಿಜಯಪುರ: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಾ ಸಮಾಜದ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರಾಣ ಮುಡಿಪಾಗಿಟ್ಟ ಪೊಲೀಸ್‌ರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.

    ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

    ನಮ್ಮ ರಕ್ಷಣೆ ಮಾಡುವ ಸಂದರ್ಭ ಹೋರಾಡಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸರಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ದಿನ ಗೌರವ ನಮನ ಸಲ್ಲಿಸಲಾಗುತ್ತಿದೆ. 1959ರಲ್ಲಿ ಚೀನಿ ಪಡೆಗಳೊಂದಿಗೆ ನಡೆದ ಹೋರಾಟದಲ್ಲಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸ್‌ರನ್ನು ಸ್ಮರಿಸುವ ಈ ದಿನ ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದೆ. ಸೈನಿಕರು ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಾರೆ. ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆಗಾಗಿ ತಮ್ಮ ಜೀವನ ತ್ಯಾಗ ಮಾಡಿರುವ ಹಾಗೂ ನೆಮ್ಮದಿಯಾಗಿ ಶಾಂತಿಯಿಂದ ಜೀವನ ನಡೆಸಲು ಒಳನಾಡಿನಲ್ಲಿ ಪೊಲೀಸ್ ಕಾರ್ಯ ಅನನ್ಯವಾಗಿದೆ. ಪೊಲೀಸ್‌ರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

    ಜಿಲ್ಲೆಯ ಸಿಪಿಐ ರವಿ ಉಕ್ಕುಂದ ಅವರ ಕಾರ್ಯವನ್ನು ಸ್ಮರಿಸಿದ ಅವರು, ಯಶಸ್ವಿ ಪೊಲೀಸ್ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ನೆಲೆಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಕೈಜೋಡಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತ, ಜನರ ಸಂದಿಗ್ಧ ಹಾಗೂ ಕಷ್ಟಕಾಲದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರ ಸ್ಮರಣೆ ಮಾಡಿದರು.

    ತಮ್ಮ ಜೀವದ ಹಂಗು ಲೆಕ್ಕಿಸದೇ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಿದಂತಹ ಪೊಲೀಸ್‌ರ ತ್ಯಾಗ ಮತ್ತು ಬಲಿದಾನ ಮಾಡಿದ ಪೊಲೀಸ್ ಹುತಾತ್ಮರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

    ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ದೇಶದ ರಕ್ಷಣೆ ಜನರ ನೆಮ್ಮದಿಗಾಗಿ ಹಾಗೂ ಉತ್ತಮ ಆಡಳಿತ ಕಟ್ಟಿಕೊಡುವಲ್ಲಿ ಪೊಲೀಸ್ ಕರ್ತವ್ಯ ಬಹು ಮುಖ್ಯವಾಗಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, 1959ರ ಚೀನಾ ಯುದ್ಧದಲ್ಲಿ ವೀರಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಪ್ರತಿ ವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಪೊಲೀಸರು ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಕ್ಷಣೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆಯಲ್ಲಿ ಹೋರಾಡಿ ಜೀವನ ತ್ಯಾಗ ಮಾಡಿದ ಪೊಲೀಸ್‌ರಿಗೆ ಗೌರವ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

    ತಮ್ಮ ಕಾರ್ಯದಲ್ಲಿ ಶೂರತನದಿಂದ ಹೋರಾಡಿ, ಸಮರ್ಪಿತ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತಿದೆ. ಈ ವರ್ಷ ದೇಶಾದ್ಯಂತ 189 ಜನ ಪೊಲೀಸ್‌ರು ತಮ್ಮ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ. ಹುತಾತ್ಮರ ಪೊಲೀಸ್‌ರ ಹೆಸರು ಹೇಳುವ ಮೂಲಕ ಸ್ಮರಿಸಿದರು.

    ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರ ಅಧಿಕಾರಿಗಳು, ಪತ್ರಕರ್ತರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
    ಅರ್ಜುನ ಭಜಂತ್ರಿ ತಂಡ ಪೋಲಿಸ್ ಬ್ಯಾಂಡ್ ಮೂಲಕ ಗೀತೆ ಹಾಗೂ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
    ಡಿವೈಎಸ್‌ಪಿ ಬಸವರಾಜ್ ಎಲಿಗಾರ ಮತ್ತಿತರರಿದ್ದರು. ಪರೇಡ್ ಕಮಾಂಡರ್ ಎಸ್.ಆರ್. ವನಂಜಕರ್ ಶಿಸ್ತು ಬದ್ಧವಾಗಿ ಪೊಲೀಸ್ ಪರೇಡ್ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಹುಮಾಯೂನ್ ಮಮದಾಪೂರ, ದಶರತ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts