More

    ಖಾಕಿ-ಕರಿಕೋಟಿನ ಮಧ್ಯೆ ಜಟಾಪಟಿ

    ಹುಬ್ಬಳ್ಳಿ: ವಕೀಲರೊಬ್ಬರ ಮೇಲೆ ಕೇಸ್ ಹಾಕಿದ್ದಾರೆಂದು ಧಾರವಾಡದಲ್ಲಿ ವಕೀಲರು ಪೊಲೀಸ್ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದರೆ, ಇತ್ತ ಹುಬ್ಬಳ್ಳಿ ಎಪಿಎಂಸಿ- ನವನಗರ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿ ವರ್ಗಾವಣೆ ಕೋರಿದ ಅರ್ಜಿ ಹಿಡಿದುಕೊಂಡು ಠಾಣೆ ಎದುರು ಜಮಾಯಿಸಿ ಅಹವಾಲು ಮಂಡಿಸಿದ ಪ್ರಸಂಗ ಶುಕ್ರವಾರ ನಡೆದಿದೆ. ಇದರಿಂದ ಅವಳಿನಗರದಲ್ಲಿ ಖಾಕಿ ವರ್ಸಸ್ ಕರಿಕೋಟು ಸ್ಥಿತಿ ನಿರ್ವಣವಾದಂತಾಗಿದೆ.

    ನವನಗರದ ಕರ್ನಾಟಕ ವೃತ್ತದಲ್ಲಿ ಬುಧವಾರ ರಾತ್ರಿ ಮೂವರ ಮಧ್ಯೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಪಿಎಂಸಿ-ನವನಗರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜಗಳ ಬಿಡಿಸಲು ಮುಂದಾದರು. ಆಗ ಆ ಮೂವರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದರು.

    ಪೊಲೀಸ್ ಹಾಗೂ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ತಾವು ಸ್ನೇಹಿತರಿದ್ದು ಪೊಲೀಸರ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಮೂವರೂ ಹೇಳಿದ್ದರು. ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದರು. ವಾಗ್ವಾದ ನಡೆದು, ಆ ಮೂವರು ಪೊಲೀಸರಿಗೇ ಧಮಕಿ ಹಾಕಿದ್ದರು. ಹಿಡಿಯಲು ಹೋದಾಗ ಕೊಸರಿಕೊಂಡು ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಿದರು ಎನ್ನಲಾಗಿದೆ.

    ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಮೂವರ ವಿರುದ್ಧ ಠಾಣಾಧಿಕಾರಿಗೆ ಸ್ವತಃ ದೂರು ನೀಡಿದ್ದರು. ಪ್ರವೀಣ ಪೂಜಾರಿ, ಮಲ್ಲಯ್ಯ ಹಿರೇಮಠ ಹಾಗೂ ವಿನೋದ ಪಾಟೀಲ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.

    ಈ ಪೈಕಿ ವಿನೋದ ಪಾಟೀಲ ವಕೀಲರಾಗಿದ್ದು, ಅವರನ್ನು ಸುಪ್ರೀಂ ಕೋರ್ಟ್ ನಿಯಮಾವಳಿ ಮೀರಿ ಬಂಧಿಸಿ ಕರೆದೊಯ್ಯಲಾಗಿದೆ. ಹಾಗಾಗಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲರು ಶುಕ್ರವಾರ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು.

    ಸೋಮವಾರದೊಳಗೆ ಎಪಿಎಂಸಿ-ನವನಗರ ಠಾಣೆ ಇನ್ಸ್​ಪೆಕ್ಟರ್ ವರ್ಗಾವಣೆ ಮಾಡಬೇಕು ಎಂದು ಗಡುವು ವಿಧಿಸಿದರು.

    ಇತ್ತ ನವನಗರ ಪೊಲೀಸ್ ಠಾಣೆ ಎದುರು ಶುಕ್ರವಾರ ಸಂಜೆ ಜಮಾಯಿಸಿದ ಸುಮಾರು 40ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ತಮ್ಮನ್ನು ವರ್ಗಾವಣೆ ಮಾಡಿ ಎಂದು ಮನವಿ ಪತ್ರ ಹಿಡಿದು ಬಂದ ಅಪರೂಪದ ಪ್ರಸಂಗ ಸಂಜೆ ನಡೆಯಿತು.

    ಇನ್ಸ್​ಪೆಕ್ಟರ್​ರಿಂದಲೇ ದೂರು: ಹುಬ್ಬಳ್ಳಿ: ರೌಡಿ ಶೀಟರ್ ಪ್ರವೀಣ ರಘುನಾಥ ಪೂಜಾರಿ, ಮಲ್ಲಯ್ಯ ಶಿವಲಿಂಗಯ್ಯ ಹಿರೇಮಠ ಹಾಗೂ ವಿನೋದ ಶಂಕರಗೌಡ ಪಾಟೀಲ ಅವರು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾಗ ಸಂಭವನೀಯ ಅವಘಡ ತಪ್ಪಿಸಲು ಹೋದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಸ್ವತಃ ಎಪಿಎಂಸಿ-ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಅದೇ ಠಾಣೆಯ ಠಾಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

    ನ. 25ರಂದು ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಈ ಮೂವರು ಯಾವುದೋ ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಜಗಳವಾಡುತ್ತಿದ್ದರು. ಈ ಬಗ್ಗೆ ಠಾಣೆಗೆ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಪೆಟ್ರೋಲಿಂಗ್ ಮೇಲಿದ್ದ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಹಾಗೂ ಸಿಬ್ಬಂದಿ ಹೋದಾಗ ಪೊಲೀಸರ ವಿರುದ್ಧವೇ ಮೂವರು ತಿರುಗಿ ಬಿದ್ದಿದ್ದರು. ಆಗ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಬಂಧಿಸಲು ಮುಂದಾದಾಗ ಗಲಾಟೆ ಉಂಟಾಗಿತ್ತು.

    ಮೂವರ ಪೈಕಿ ವಿನೋದ ಪಾಟೀಲ ಎಂಬಾತ ಕಾರ್ ಹತ್ತಿ ಮನೆಗೆ ಹೋಗಿದ್ದು, ಉಳಿದ ಇಬ್ಬರನ್ನು ಕನಿಷ್ಠ ಬಲ ಪ್ರಯೋಗ ಮಾಡಿ ವಿಚಾರಣೆಗೆಂದು ಠಾಣೆಗೆ ಕರೆದೊಯ್ದಿದ್ದೆವು. ವಿನೋದ ಪಾಟೀಲ ಅವರನ್ನೂ ವಿಚಾರಣೆಗೆ ಕರೆತರಲು ಮನೆಗೆ ಹೋದಾಗ ಅವಾಚ್ಯವಾಗಿ ಬೈದಾಡಿ ಠಾಣೆಗೆ ಬರಲು ನಿರಾಕರಿಸಿದಾಗ ಕನಿಷ್ಠ ಬಲಪ್ರಯೋಗ ಮಾಡಿ ಕರೆದುಕೊಂಡು ಬರಲಾಗಿತ್ತು. ನಂತರ ಮದ್ಯ ಸೇವನೆ ಪರೀಕ್ಷೆಗೆ ಕಿಮ್್ಸ ಗೆ ಕರೆದೊಯ್ದು ವಾಪಸ್ ಠಾಣೆಗೆ ಕರೆದುಕೊಂಡು ಬರುವಾಗ ವಿನೋದ ಪಾಟೀಲ ಬೆಂಗಾವಲು ಸಿಬ್ಬಂದಿಯನ್ನು ತಳ್ಳಿ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸಾಮೂಹಿಕ ವರ್ಗಾವಣೆಗಾಗಿ ಪೊಲೀಸರ ಮನವಿ: ವಕೀಲ ವಿನೋದ ಪಾಟೀಲ್ ಮತ್ತು ಇತರರ ಬಂಧನ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಎಪಿಎಂಸಿ-ನವನಗರ ಠಾಣೆ ಪೊಲೀಸರ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ. ಇಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ ತಮನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿ ಎಂದು ಪೊಲೀಸ್ ಸಿಬ್ಬಂದಿ ಮನವಿ ಪತ್ರ ಹಿಡಿದು ಬಂದಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡಲು ಹೋದರೆ ಒಂದಿಲ್ಲೊಂದು ಪ್ರಭಾವಿ ವ್ಯಕ್ತಿಯಿಂದ ಒತ್ತಡ ಬರುತ್ತದೆ. ಸರಿಯಾಗಿ ಕೆಲಸ ಮಾಡದಿದ್ದರೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಒಟ್ಟಾರೆ ಇಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಅನೇಕ ಸಿಬ್ಬಂದಿ ಅಸಮಾಧಾನ ಹೊರಹಾಕಿದರು. ಹಿರಿಯ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು. ಪೊಲೀಸ್ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗಲೂ ಕೆಲವರು ತಮ್ಮ ಉದ್ಯೋಗದ ಹೆಸರು ಹೇಳಿಕೊಂಡು ಹೆದರಿಸುತ್ತಾರೆ. ಅಂಥವರ ಕಾಟಕ್ಕೆ ಇಲಾಖೆ ಮಣಿಯಬಾರದು ಎಂದು ಸಿಬ್ಬಂದಿ ವರ್ಗದವರು ವಿನಂತಿಸಿಕೊಂಡರು ಎಂದು ಗೊತ್ತಾಗಿದೆ.

    ವಕೀಲರಿಂದ ಪ್ರತಿಭಟನೆ: ಹುಬ್ಬಳ್ಳಿಯ ಎಪಿಎಂಸಿ-ನವನಗರ ಠಾಣೆ ಇನ್ಸ್​ಪೆಕ್ಟರ್, ವಕೀಲ ವಿನೋದ ಪಾಟೀಲ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಸಾರ್ವಜನಿಕ ಸ್ಥಳದಲ್ಲಿ ಬೇಡಿ ಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಧಾರವಾಡ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ಸಂಘದ ಅಧ್ಯಕ್ಷ ಬಿ.ಎಸ್. ಘೋಡಸೆ ಮಾತನಾಡಿ, ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಹಾಗೂ ಸಿಬ್ಬಂದಿ ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಪ್ರಕರಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಡಿಸಿ ವಿರುದ್ಧ ಆಕ್ರೋಶ: ತಮ್ಮ ಮನವಿಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿಯೇ ಆಗಮಿಸಬೇಕು ಎಂದು ವಕೀಲರು ಪಟ್ಟು ಹಿಡಿದರು. ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿದರೂ ಮನವಿ ನೀಡದೆ, ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ವಕೀಲರ ಮನವೊಲಿಸಿದರು. ನಂತರ ಕೋರ್ಟ್ ಎದುರು ಕೆಲಕಾಲ ರಸ್ತೆ ತಡೆ ನಡೆಸಿ, ನ. 30ರೊಳಗೆ ಪೊಲೀಸ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗಡುವು ವಿಧಿಸಿ ಘೊಷಣೆ ಕೂಗಿದರು.

    ಸಂಘದ ಪದಾಧಿಕಾರಿಗಳಾದ ರಾಜು ಕೋಟಿ, ಎನ್.ಆರ್. ಮಟ್ಟಿ, ಕೆ.ಎಚ್. ಪಾಟೀಲ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts