More

    ಮೇಲಧಿಕಾರಿಗೆ ಆರೋಗ್ಯ ಜವಾಬ್ದಾರಿ ಆಸ್ಪತ್ರೆಗೆ ಖುದ್ದು ಭೇಟಿ ನೀಡಲು ಪೊಲೀಸ್ ಇಲಾಖೆ ಸೂಚನೆ

    ಬೆಂಗಳೂರು: ಇಲಾಖೆಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೆ ಅವರ ಮೇಲಧಿಕಾರಿ ಖುದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸುವುದು ಕಡ್ಡಾಯ ಎಂದು ಪೊಲೀಸ್ ಇಲಾಖೆ ಲಿಖಿತ ಆದೇಶ ಹೊರಡಿಸಿದೆ.

    ಮೇಲಧಿಕಾರಿ ಖುದ್ದಾಗಿ ಭೇಟಿ ನೀಡಿ ವಿಚಾರಿಸುವುದರಿಂದ ಇಲಾಖೆ ಹಾಗೂ ಅಧಿಕಾರಿಗಳ ಮೇಲೆ ಸಂತೃಪ್ತಿ ಭಾವನೆ ಮೂಡುತ್ತದೆ. ಜತೆಗೆ ಸಂಕಷ್ಟದಲ್ಲಿದ್ದಾಗ ಇಲಾಖೆ ಮುತುವರ್ಜಿ ವಹಿಸುತ್ತದೆ ಎಂಬ ಭರವಸೆ ಮೂಡುತ್ತದೆ. ಇದರಿಂದ ಇಲಾಖೆಯ ಕಾರ್ಯ ವೈಖರಿ ಚುರುಕಾಗಲಿದೆ. ಬಂದೋಬಸ್ತ್, ಗಸ್ತು ತಿರುಗುವುದು, ಸಂಚಾರ ನಿರ್ವಹಣೆ ಹಾಗೂ ಪ್ರಕರಣಗಳ ತನಿಖೆಯಲ್ಲಿ ಕಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಪರಿಶ್ರಮ ಹೆಚ್ಚಾಗಿರುತ್ತದೆ. ಕೆಳಹಂತದ ಸಿಬ್ಬಂದಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೂ ಆ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ಈ ಉದಾಸೀನ ಧೋರಣೆ ತಡೆಯುವ ಉದ್ದೇಶದಿಂದ ಇಲಾಖೆ ಹೊಸ ಕ್ರಮ ಕೈಗೊಂಡಿದೆ.

    ಅಕ್ರಮ ತಡೆಗೂ ಸಹಕಾರಿ: ಬಿಕ್ಕಟ್ಟಿನ ಸಂದರ್ಭದಲ್ಲಿ ರಜೆ ಪಡೆಯಲು ಸಿಬ್ಬಂದಿ ಅನಾರೋಗ್ಯದ ಸಬೂಬು ಹೇಳುತ್ತಿದ್ದಾರೆ. ಆಸ್ಪತ್ರೆಗಳಿಂದ ನಕಲಿ ದಾಖಲೆಗಳನ್ನು ಪಡೆದು ಇಲಾಖೆಗೆ ಒಪ್ಪಿಸುತ್ತಿರುವುದೂ ಕೂಡ ಇಲಾಖೆ ಗಮನಕ್ಕೆ ಬಂದಿದೆ. ಅಲ್ಲದೆ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳುವರಿಗೆ ಖಾಸಗಿ ಆಸ್ಪತ್ರೆಗಳು ದಾಖಲೆಗಳನ್ನು ಕೊಟ್ಟು ಹಣ ಬಿಡುಗಡೆ ಮಾಡಿಕೊಳ್ಳುತ್ತಿವೆ. ಅಧಿಕಾರಿಗಳ ಭೇಟಿ ಮಾಡುವುದರಿಂದ ಸೌಲಭ್ಯದ ದುರುಪಯೋಗ ಆಗದಂತೆ ಮೂಗುದಾರ ಬೀಳಲಿದೆ.

    ಆಸ್ಪತ್ರೆಯಿಂದ ಸ್ಪಂದನೆ ನಿರೀಕ್ಷೆ: ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ನೀಡಲು ಕೆಲವೊಂದು ಆಸ್ಪತ್ರೆಗಳು ಉದಾಸೀನ ತೋರುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ಮಾಡಿ ವಿಚಾರಿಸುವುದರಿಂದ ವೈದ್ಯರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಾರೆ. ಸಿಬ್ಬಂದಿಯ ಹಾರೈಕೆಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ತಿಳಿಯಬಹುದು. ಇಂತಹ ಸಂದರ್ಭದಲ್ಲಿ ಸಮಸ್ಯೆಗಳಾದರೆ ಘಟಕಾಧಿಕಾರಿಗಳ ಮೂಲಕ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts