More

    ಕಷ್ಟಪಟ್ಟು ದುಡಿಯುವ ರೈತನ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧ: ಪ್ರಧಾನಿ ಮೋದಿ

    ನವದೆಹಲಿ: 71ನೇ ಆವೃತ್ತಿಯ ಮನ್​ ಕಿ ಬಾತ್​ (ಮನದ ಮಾತು) ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಷ್ಟಪಟ್ಟು ದುಡಿಯುವ ರೈತನ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಪ್ರಸ್ತುತ ಭೂಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿ ಚೆಲೋ ಚಳುವಳಿಯನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮಾತು ಮಹತ್ವ ಪಡೆದುಕೊಂಡಿದೆ.

    ಅನ್ನಪೂರ್ಣೇಶ್ವರಿ ಪ್ರತಿಮೆ ಕೆನಾಡದಿಂದ ಭಾರತಕ್ಕೆ ವಾಪಸ್ ಆಗುತ್ತಿದೆ ಎಂದು ಮಾತು ಆರಂಭಿಸಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ಭಾರತೀಯರಿಗೂ ಇದು ಶುಭ ಸುದ್ದಿ. 1913 ಸುಮಾರು 100 ವರ್ಷಗಳ ಹಿಂದೆ ಪ್ರತಿಮೆಯನ್ನು ವಾರಣಾಸಿಯ ದೇವಸ್ಥಾನದಿಂದ ಕದ್ದು ದೇಶದಿಂದ ಆಚೆಗೆ ತೆಗೆದುಕೊಂಡು ಹೋಗಲಾಗಿತ್ತು. ಅದೇ ಪ್ರತಿಮೆ ಇಂದು ಭಾರತಕ್ಕೆ ವಾಪಾಸ್​ ಆಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಕೆನಾಡಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

    ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿ ಮತ್ತು ಧರ್ಮಗ್ರಂಥಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಅವುಗಳನ್ನು ಹುಡುಕಲು ಕೆಲವು ಮಂದಿ ವಿದೇಶಗಳಿಂದ ಭಾರತಕ್ಕೆ ಬರುತ್ತಾರೆ ಮತ್ತು ಇಲ್ಲಿಯೇ ಜೀವನ ಪೂರ್ತಿ ಉಳಿಯುತ್ತಾರೆ. ಇನ್ನು ಕೆಲವರು ಭಾರತದ ರಾಯಭಾರಿಗಳಾಗಿ ತಮ್ಮ ದೇಶಕ್ಕೆ ಹಿಂದಿರುಗುತ್ತಾರೆ ಎಂದರು.

    ಜೋನಾಸ್​ ಮಸೆತ್ತಿ ಬಗ್ಗೆ ನನಗೆ ತಿಳಿಯಿತು. ಅವರನ್ನು ವಿಶ್ವನಾಥ್​ ಅಂತಲೂ ಕರೆಯುತ್ತಾರೆ. ಜೋನಾಸ್​ ಅವರು ಬ್ರೆಜಿಲ್​ನಲ್ಲಿ ವೇದಾಂತ ಮತ್ತು ಗೀತಾದಲ್ಲಿ ಪ್ರವಚನ ನೀಡುತ್ತಾರೆ. ವಿಶ್ವವಿದ್ಯಾ ಹೆಸರಿನಲ್ಲಿ ಒಂದು ಸಂಘಟನೆಯನ್ನು ನಡೆಸುತ್ತಿದ್ದಾರೆ. ವಿಶ್ವವಿದ್ಯಾವು ರಿಯಾಡಿ ಜನೈರೋದಿಂದ ಒಂದು ಗಂಟೆ ಪ್ರಯಾಣದಷ್ಟು ದೂರವಿರುವ ಪೆಟ್ರೊಪೊಲಿಸ್ ಬೆಟ್ಟಗಳ ಬಳಿ ಇದೆ ಎಂದು ಜೋನಾಸ್​ ಅವರ ಕಾರ್ಯವನ್ನು ಸ್ಮರಿಸಿದರು.

    ಜೋನಾಸ್​ ಅವರು ಮೆಕಾನಿಕಲ್​ ಇಂಜಿನಿಯರಿಂಗ್​ ಮುಗಿಸಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಭಾರತದ ಸಂಸ್ಕೃತಿಯೆಡೆಗೆ ಅದರಲ್ಲೂ ವೇದಾಂತದೆಡೆಗೆ ಆಕರ್ಷಿತರಾದರು. ಬಳಿಕ ಭಾರತಕ್ಕೆ ಆಗಮಿಸಿದ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅರ್ಷ ವಿದ್ಯಾ ಗುರುಕುಲದಲ್ಲಿ ಸುಮಾರು 4 ವರ್ಷ ಉಳಿದು ವೇದಾಂತವನ್ನು ಕಲಿತರು. ನಾನು ಅವರಿಗೆ ಅಭಿನಂದಿಸುತ್ತೇನೆಂದರು.

    ನಾಳೆ ನಾವು ಗುರುನಾನಕ್​ ದೇವ್​ ಜೀ ಜಯಂತಿ ಆಚರಿಸಲಿದ್ದೇವೆ. ಅವರ ಪ್ರಭಾವ ಇಡೀ ವಿಶ್ವಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತದೆ. ವ್ಯಾಂಕೋವರ್​ನಿಂದ ವೆಲ್ಲಿಂಗ್ಟನ್, ಸಿಂಗಾಪೂರ್​ನಿಂದ ದಕ್ಷಿಣ ಆಫ್ರಿಕಾವರೆಗೂ ಅವರ ಸಂದೇಶವು ಎಲ್ಲೆಡೆ ಪ್ರತಿಧ್ವನಿಸುತ್ತದೆ. ಲಂಗಾರ್​ ಸಂಪ್ರದಾಯ ಶುರು ಮಾಡಿದವರು ಗುರುನಾನಕ್​ ಜೀ. ಕರೊನಾ ಸಂಕಷ್ಟ ಕಾಲದಲ್ಲಿ ಸಿಖ್​ ಸಮುದಾಯ ನಾನಕ್​ ಅವರ ಸಂಪ್ರದಾಯ ಮುಂದುವರಿಸಿಕೊಂಡು ಅನೇಕ ಜನರಿಗೆ ಆಹಾರ ಒದಗಿದ್ದಾರೆ ಎಂದು ತಿಳಿಸಿದರು.

    ಹಂತ ಹಂತವಾಗಿ ಕರೊನಾ ಲಾಕ್​ಡೌನ್​ನಿಂದ ಹೊರಬಂದ ಬಳಿಕ ಲಸಿಕೆ ಕುರಿತ ಚರ್ಚೆ ಆರಂಭವಾಗಿದೆ. ಆದರೆ, ಕರೊನಾ ವೈರಸ್​ನೊಂದಿಗಿನ ಯಾವುದೇ ರೀತಿಯ ಸಡಿಲಿಕೆ ತುಂಬಾ ಅಪಾಯಕಾರಿ. ವೈರಸ್​ ವಿರುದ್ಧ ನಿರಂತವಾಗಿ ನಾವು ಹೋರಾಡಬೇಕು ಎಂದು ಜನರಿಗೆ ಕರೆ ನೀಡಿದರು.

    ಸಂಸತ್ತಿನಲ್ಲಿ ಇತ್ತೀಚೆಗೆ ಭೂಸುಧಾರಣಾ ಕಾನೂನು ಜಾರಿಗೆ ತರಲಾಗಿದೆ. ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದಿರುವುದಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ. ಹೊಸ ಕಾನೂನಿನ ಅಡಿಯಲ್ಲಿ ರೈತ ಮೂರು ದಿನಗಳ ಒಳಗೆ ತನ್ನ ಹಣವನ್ನು ಪಡೆಯಬಹುದಾಗಿದೆ. ಒಂದು ವೇಳೆ ಹಣ ದೊರೆಯದಿದ್ದರೆ, ಆತ ದೂರು ಸಹ ದಾಖಲಿಸಿ, ತನ್ನ ಬಾಕಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆ ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts