More

    ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ 20ರಂದು ಮೋದಿ ಕ್ಯಾಂಪೇನ್

    ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಪರ ಮತಶಿಕಾರಿಗೆ ಪ್ರಧಾನಿ ನರೇಂದ್ರ ಮೋದಿ ಏ.20ರಂದು ರಾಜ್ಯ ಪ್ರವಾಸ ಬಹುತೇಕ ಅಂತಿಮವಾಗಿದೆ. ಈ ಬಾರಿ ಎರಡು ಕಡೆ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಧ್ಯಾಹ್ನ 3, ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 5.30ಕ್ಕೆ ಸಾರ್ವಜನಿಕ ಸಮಾವೇಶ ನಡೆಯಲಿವೆ.

    ಚಿಕ್ಕಬಳ್ಳಾಪುರ ಸಮಾವೇಶವು ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳನ್ನು ಒಳಗೊಳ್ಳಲಿದ್ದರೆ, ಬೆಂಗಳೂರು ಉತ್ತರ, ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಬೆಂಗಳೂರಿನಲ್ಲಿ ಬಹಿರಂಗ ಸಭೆ ನಡೆಸಲು ಪಕ್ಷ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಮೊದಲ ಎರಡು ಸುತ್ತಿನ ಪ್ರವಾಸದಲ್ಲಿ ಕಲಬುರಗಿ, ಶಿವಮೊಗ್ಗ, ಮೈಸೂರು ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದರೆ, ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು.

    ಈ ಮೊದಲು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರೋಡ್ ಶೋ ತಾತ್ಕಾಲಿಕವಾಗಿ ನಿಗದಿಯಾಗಿತ್ತು. ಆದರೆ ಪ್ರಧಾನಿ ಕಚೇರಿ ತಂಡದ ಸೂಚನೆಯಂತೆ ಪ್ರಚಾರ ಪ್ರವಾಸ ಮಾರ್ಪಾಟಾಯಿತು.

    ಮೋದಿ ಕಾರ್ಯಕ್ರಮವನ್ನು ಕೊನೆ ಘಳಿಗೆಯಲ್ಲಿ ಕೈಬಿಟ್ಟಿದ್ದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹರಡಿದ ತಪ್ಪು ಸಂದೇಶ, ಮುಜುಗರ ನಿವಾರಣೆಗೆ ಆಂತರಿಕವಾಗಿ ಒತ್ತಡ ಹೇರಲಾಗಿತ್ತು. ಇದೇ ಕಾರಣಕ್ಕೆ ಮೋದಿ ಕಾರ್ಯಕ್ರಮ ಮತ್ತೆ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ.

    ರಾಹುಲ್ ಗಾಂಧಿಗೆ 10 ಪ್ರಶ್ನೆಗಳು

    ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 10 ಪ್ರಶ್ನೆಗಳನ್ನು ಅವರ ಮುಂದಿಡಲು ರಾಜ್ಯ ಬಿಜೆಪಿ ತಯಾರಿ ಮಾಡಿಕೊಂಡಿದೆ.

    ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗಲೆಲ್ಲ ಸಿಎಂ ಸಿದ್ದರಾಮಯ್ಯ ಪ್ರಶ್ನಿಸುವ ಜತೆಗೆ ಜನರನ್ನೂ ಕೇಳಿರಿ ಎಂದು ಜಾಲತಾಣದಲ್ಲಿ ಸಂದೇಶ ಹಂಚಿಕೊಳ್ಳುತ್ತಾರೆ. ಇದಕ್ಕೆ ತಿರುಗೇಟು ನೀಡಲೆಂದು ರಾಹುಲ್ ಗಾಂಧಿ ಮುಂದೆ ಪ್ರಶ್ನೆಗಳ ಗುಚ್ಛವನ್ನಿಡಲು ಬಿಜೆಪಿ ಉತ್ಸುಕವಾಗಿದೆ.

    ಭಾನುವಾರದ ಅಭಿಯಾನ, ಬಿವೈವಿ ಮಾಹಿತಿ

    ‘ನಾನು ಮೋದಿಯ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ. ಮತ್ತೊಮ್ಮೆ ಮೋದಿ ಸರ್ಕಾರ’ ೋಷವಾಕ್ಯದಡಿ ಅಭಿಯಾನ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಹಿತಿ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಏ.21 ಮತ್ತು 28 ಈ ಭಾನುವಾರಗಳನ್ನು ನಾವು ದೇಶದ ಅಭಿವೃದ್ಧಿದಾಗಿ ಶ್ರಮಿಸಿದ ಪ್ರಧಾನ ಸೇವಕ ಮೋದಿಗಾಗಿ ಮೀಸಲಿಡೋಣ, ಮೋದಿ ಸರ್ಕಾರದ ಯೋಜನೆಗಳನ್ನು ಮನೆ ಮನೆಗೂ ತಲುಪಿಸೋಣವೆಂದು ಕೋರಿದ್ದಾರೆ.

    ಪಕ್ಷದ ರಾಜ್ಯ ಸಮಿತಿಯು ವಿನೂತನ ಪ್ರಚಾರ ತಂತ್ರದ ಭಾಗವಾಗಿ ಈ ಅಭಿಯಾನಕ್ಕೆ ಆನ್‌ಲೈನ್ ಮುಖೇನ ಸಿದ್ಧತೆ ಮಾಡಿಕೊಂಡಿದೆ. ಮೋದಿ ಅಭಿಮಾನಿಗಳು, ಹಿತೈಷಿಗಳು, ಅನುಯಾಯಿಗಳು ಮಾತ್ರ ಭಾಗವಹಿಸಲಿದ್ದಾರೆ.

    ಉದ್ಯಮಿಗಳು, ಗಣ್ಯರು, ಕಲಾವಿದರು, ಚಿತ್ರನಟರು, ಕ್ರೀಡಾಪಟುಗಳು, ವಿವಿಧ ಕ್ಷೇತ್ರಗಳ ತಜ್ಞರು, ತಂತ್ರಜ್ಞರು ಈ ಅಭಿಯಾನಕ್ಕೆ ಕೈಜೋಡಿಸಲಿದ್ದಾರೆ. ಬಯಸಿದರೆ ಪೂರಕವಾದ ಪ್ರಚಾರ ಸಾಮಗ್ರಿ ಒದಗಿಸಲಾಗುವುದು ಪಕ್ಷ ನಿವೇದಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts