More

    ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತ

    ಉಡುಪಿ: ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿದೆ. ನಗರಸಭೆ ದುಬಾರಿ ದಂಡ ವಿಧಿಸುವ ಕಾರ್ಯಾಚರಣೆ ಮುಂದುವರಿಯುತ್ತಿದ್ದರೂ, ಬಳಕೆಗೆ ಕಡಿವಾಣ ಬಿದ್ದಿಲ್ಲ.

    ಸರ್ಕಾರ ತೆಳುವಿನ ಪ್ಲಾಸ್ಟಿಕ್ ಬಳಕೆಯನ್ನು 2019ರ ಅಕ್ಟೋಬರ್ 2ರಿಂದ ನಿಷೇಧಿಸಿದೆ. ಅಂದಿನಿಂದ ನಗರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 179 ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 1.73 ಲಕ್ಷ ರೂ.ದಂಡ ವಿಧಿಸಿದೆ. ನಗರದ ಅಂಗಡಿ, ಮುಂಗಟ್ಟು, ಹೊಟೇಲ್, ಕ್ಯಾಂಟಿನ್, ಗೂಡಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ನಗರಸಭೆ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದೆ. ದಂಡ, ದಾಳಿ ನಡೆಯುತ್ತಿದ್ದರೂ ಕೆಲವು ವ್ಯಪಾರಿಗಳು, ಸಾರ್ವಜನಿಕರು ಎಚ್ಚೆತ್ತುಕೊಂಡಿಲ್ಲ. ಅಂಗಡಿ ಮುಂಗಟ್ಟುಗಳಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್ ಕೈಗೆ ಸಿಗುತ್ತಿದೆ. ಕೆಲವು ವ್ಯಪಾರಿಗಳು, ಗೂಡಂಗಡಿ, ಕ್ಯಾಂಟೀನ್, ಹೋಟೆಲ್ ಮಾಲೀಕರು ಪರಿಸರ ಸಂರಕ್ಷಣೆ ಕಾಳಜಿಯಿಂದ ಪ್ಲಾಸ್ಟಿಕ್ ನಿಷೇಧಕ್ಕೆ ಸಹಕಾರ ವ್ಯಕ್ತಪಡಿಸಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿಕೊಂಡಿದ್ದಾರೆ. ಆದರೆ, ಹೆಚ್ಚಿನವರಲ್ಲಿ ಈ ಜಾಗೃತಿ ಕಂಡುಬಂದಿಲ್ಲ. ದಾಳಿಗೆ ಬಂದ ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿ, ಜಗಳವಾಡುವ ನಿದರ್ಶನವೂ ಇದೆ.

    ಕವರ್ ಕೊಡಿ ಎನ್ನುವ ಗ್ರಾಹಕರು: ಗ್ರಾಹಕ ಜಾಗೃತಿಯಾದಲ್ಲಿ ಈ ಸಮಸ್ಯೆ ಇರುವುದಿಲ್ಲ. ಆದರೆ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿದರೂ ಕವರ್ ಇಲ್ವ? ಎಂದು ಕೇಳುತ್ತಾರೆ, ಕವರ್ ಇಲ್ಲದಿದ್ದರೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಎಂದು ಅಸಾಹಾಯಕತೆ ವ್ಯಕ್ತಪಡಿಸುತ್ತಾರೆ ಅಂಗಡಿ, ಹೋಟಲ್ ಮಾಲೀಕರು. ಮೀನಿನ ನೀರು, ಕೋಳಿ, ಕುರಿ ಮಾಂಸ ವ್ಯಾಪಾರಕ್ಕೆ ಸಂಬಂಧಿಸಿ ರಕ್ತ ಹೊರಗೆ ಚೆಲ್ಲುವುದರಿಂದ ಪ್ಲಾಸ್ಟಿಕ್ ಬಳಕೆ ಮಾಡಲೇ ಬೇಕಾಗುತ್ತದೆ. ಜಿಲ್ಲಾಡಳಿತಕ್ಕೂ ಇದು ಸವಾಲಾಗಿದೆ.

    ಪ್ಲಾಸ್ಟಿಕ್ ಸಾಗಾಟ ವಾಹನದ ಮೇಲೆ ದಾಳಿ: ಇತ್ತೀಚೆಗೆ ನಿಷೇಧಿತ ಪ್ಲಾಸ್ಟಿಕ್ ಸಾಗಾಟ ಮಾಡುತ್ತಿದ್ದ 3 ವಾಹನಗಳ ಮೇಲೆ ದಾಳಿ ನಡೆಸಿದ ನಗರಸಭೆ 15 ಸಾವಿರ ರೂ.ದಂಡ ವಿಧಿಸಿದೆ. ನಗರಸಭೆ ವ್ಯಾಪ್ತಿ 35 ವಾರ್ಡ್‌ಗಳಲ್ಲಿ ಕಳೆದ ಮೂರುವರೆ ತಿಂಗಳಲ್ಲಿ ಕೆಲವು ಅಂಗಡಿಗಳ ಮೇಲೆ ದಾಳಿ ನಡೆದಿದ್ದು, ಚಿಟ್ಪಾಡಿ ಅಂಗಡಿಯೊಂದರಲ್ಲೇ 44 ಕೆ.ಜಿ.ಪ್ಲಾಸ್ಟಿಕ್ ಸಿಕ್ಕಿದೆ. ಈ ಪ್ಲಾಸ್ಟಿಕ್‌ಗಳನ್ನು ಅಲೆವೂರಿನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಿ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿಷೇಧಿತ ಪ್ಲಾಸ್ಟಿಕ್ ಬಳಕೆ ಪತ್ತೆಗೆ ನಗರಸಭೆ ಅಧಿಕಾರಿಗಳ ತಂಡ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಸಾರ್ವಜನಿಕರ ದೂರಿನ ಮೇರೆಗೂ ಕಾರ್ಯಚರಣೆ ನಡೆಸಲಾಗುತ್ತಿದೆ. ಪರಿಸರ ಸಂರಕ್ಷಣೆ ಉದ್ದೇಶದಿಂದ ಇಂತಹ ತೆಳು ಪ್ಲಾಸ್ಟಿಕ್ ಬಳಕೆ ಕೈಬಿಡುವ ಬಗ್ಗೆ ಸಾರ್ವಜನಿಕರು, ವ್ಯಾಪಾರಿಗಳು ಸಹಕರಿಸಬೇಕು.
    -ಆನಂದ ಚಿ.ಕಲ್ಲೋಳಿಕರ್, ಪೌರಾಯುಕ್ತ, ಉಡುಪಿ ನಗರಸಭೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts