More

    ಯೋಜನೆಗಳಿಂದ ಭವಿಷ್ಯ ರೂಪಿಸಿಕೊಳ್ಳಿ

    ಬೆಳಗಾವಿ: ಕರೊನಾ ಆತಂಕದ ನಡುವೆಯೂ ಯುವ ಜನಾಂಗದ ಭವಿಷ್ಯಕ್ಕಾಗಿ ಸರ್ಕಾರ ಹಲವು ಯೋಜನೆ ರೂಪಿಸುತ್ತಿದೆ. ಯುವ ಸಮುದಾಯ ಅವುಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಉನ್ನತ ಶಿಕ್ಷಣ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದರು.

    ಇಲ್ಲಿನ ಉದ್ಯಮಭಾಗ ಪ್ರದೇಶದಲ್ಲಿ ನಿರ್ಮಿಸಿರುವ ಸರ್ಕಾರಿ ಉಪಕರಣಗಾರ ಮತ್ತು ಕೈಗಾರಿಕಾ ವಸಾಹತು, ತರಬೇತಿ ಕೇಂದ್ರದ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಧಿಕಾರಿಗಳು ಇಲಾಖೆ ಕೈಗೊಂಡ ನೂತನ ಕಾರ್ಯಕ್ರಮಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡಬೇಕು. ಸೂಕ್ತ ಸಮಯದಲ್ಲಿ ಯೋಜನೆ ಅನುಷ್ಠಾನವಾದರೆ ಎಲ್ಲ ವರ್ಗಗಳ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಸುವರ್ಣ ವಿಧಾನಸೌಧವನ್ನೂ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇತ್ತೀಚೆಗೆ ಗಮನಾರ್ಹ ಅಭಿವೃದ್ಧಿ ನಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನಗಳಡಿ ಗಡಿ ಜಿಲ್ಲೆ ಶೀಘ್ರವೇ ಮತ್ತಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಶಾಸಕ ಅಭಯ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೆಳಗಾವಿಯ ಕೈಗಾರಿಕಾ ವಲಯದಿಂದಲೇ ವಿವಿಧ ಬಗೆಯ ಉತ್ಪನ್ನಗಳು ಅತಿಹೆಚ್ಚು ರಪ್ತು ನಡೆಯುತ್ತದೆ. ವಿಶೇಷ ಕಾರ್ಯ ಯೋಜನೆಗಳ ಮೂಲಕ ಬರುವ ದಿನಗಳಲ್ಲಿ ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ರಾಜ್ಯ ಮತ್ತು ದೇಶದಲ್ಲಿಯೇ ಜನರ ಗಮನ ಸೆಳೆದಿದೆ. ಹೀಗಾಗಿ ಮುಂದೆ ಮತ್ತಷ್ಟು ಹೊಸ ಹೊಸ ಕೋರ್ಸ್‌ಗಳನ್ನು ಜಿಲ್ಲೆಯಲ್ಲಿ ಆರಂಭಿಸಿದರೆ, ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಟಿಟಿಸಿ ಕೇಂದ್ರದ ಪ್ರಾಚಾರ್ಯ ಬಿ.ಜಿ.ಮೊಗೇರ, ಧಾರವಾಡ ಜಿಟಿಟಿಸಿ ನೋಡಲ್ ಅಧಿಕಾರಿ ಅಶೋಕ ವಾಲಿಕರ, ಚಿಕ್ಕೋಡಿ ಜಿಟಿಟಿಸಿ ಪ್ರಾಚಾರ್ಯ ಮೆಹಬೂಬ್ ಅಲಿಖಾನ್, ಶಿವಾನಂದ ಕುಂಬಾರ, ಶೀತಲಕುಮಾರ್ ಹಾಗೂ ಉಮೇಶ ಬಡಕುಂದ್ರಿ ಸೇರಿದಂತೆ ಪ್ರಾಧ್ಯಾಪಕರು ಹಾಗೂವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ದೀರ್ಘಾವಧಿ-ಅಲ್ಪಾವಧಿ ತರಬೇತಿ: ಕೌಶಲ ಅಭಿವೃದ್ಧಿಯಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಕಾಲದ ತರಬೇತಿ ನೀಡುವ ಈ ಕೇಂದ್ರದಲ್ಲಿ 4 ವರ್ಷದ ಡಿಪ್ಲೊಮಾ ಇನ್ ಟೂಲ್ಸ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್ ಇದೆ. ಅದೇ ರೀತಿ ಅಲ್ಪಾವಧಿಯ ಸಿಎನ್‌ಸಿ ಪ್ರೋಗ್ರಾಮಿಂಗ್ ಮತ್ತು ಆಪರೇಷನ್, ಕ್ಯಾಡ್ ಆ್ಯಂಡ್ ಕಾಂ, ಟರ್ನರ್, ಫಿಟ್ಟರ್, ಟೂಲ್ಸ್ ಆ್ಯಂಡ್ ಮೆಷಿನಿಸ್ಟ್ ಮತ್ತು ಸಿಎಂಎಂ ಕೋರ್ಸ್‌ಗಳಿವೆ.

    ಬೆಳಗಾವಿಗೆ ಹೊಸ ಕೋರ್ಸ್

    ಬೆಳಗಾವಿಯ ಜಿಟಿಟಿಸಿ ಕೇಂದ್ರದಲ್ಲಿ ಈ ವರ್ಷದಿಂದಲೇ ಮತ್ತಷ್ಟು ಹೊಸ ಕೋರ್ಸ್ ಸೇರ್ಪಡೆ ಮಾಡಲಾಗುವುದು. ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಕುಶಲತೆ ವೃದ್ಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹೊಸ ಅವಕಾಶಗಳಿಗೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಸದ್ಯಕ್ಕೆ ಬೆಳಗಾವಿ ಕೇಂದ್ರದಲ್ಲಿ 294 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ತರಬೇತಿ ಮುಗಿದ ನಂತರ ಇವರೆಲ್ಲರಿಗೂ ಉತ್ತಮ ಉದ್ಯೋಗಾವಕಾಶ ಸಿಗಲಿವೆ ಎಂದು ಡಿಸಿಎಂ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts