More

    ಪೈಪ್‌ಲೈನ್ ಇರುವಲ್ಲಿ ಶಾಶ್ವತ ಚಟುವಟಿಕೆಗೆ ಇಲ್ಲ ಅವಕಾಶ

    ಯಶೋಧರ ವಿ.ಬಂಗೇರ ಮೂಡುಬಿದಿರೆ
    ವಂಶಪಾರಂಪರ್ಯ ಅಥವಾ ಖರೀದಿಸಿದ ಜಾಗದಲ್ಲಿ ಕುದುರೆಮುಖ(ಕೆಐಒಸಿಎಲ್) ಕಂಪನಿಯ ಪೈಪ್‌ಲೈನ್ ಹಾದುಹೋದರೆ ಆ ಜಾಗದಲ್ಲಿ ಮಾಲೀಕರು ಕಟ್ಟಡ, ಮನೆ ಕಟ್ಟುವುದು ಅಥವಾ ಇತರ ಯಾವುದೇ ಶಾಶ್ವತ ಚಟುವಟಿಕೆ ಮಾಡುವಂತಿಲ್ಲ. ಹೆಸರಿಗೆ ಜಾಗದ ಮಾಲೀಕತ್ವ ಇದ್ದರೂ ಅದನ್ನು ತಮಗೆ ಬೇಕಾದಂತೆ ಉಪಯೋಗಿಸಲು ಸಾಧ್ಯವಿಲ್ಲ.

    ಹಿಂದಿನ ತಲೆಮಾರಿನಲ್ಲಿ ಪೈಪ್‌ಲೈನ್‌ಗೆ ಬೇಕಾದ ಸ್ಥಳ ಸ್ವಾಧೀನವಾಗಿದ್ದು, ಅದು ತಿಳಿಯದೆ ಇದ್ದರೂ ಪೈಪ್‌ಲೈನ್ ಇರುವ ಜಾಗದಲ್ಲಿ ಶಾಶ್ವತ ಚಟುವಟಿಕೆ ಕೈಗೊಂಡರೆ ಮಾಲೀಕರೇ ನಷ್ಟ ಅನುಭವಿಸಬೇಕು.  ಮೂಡುಬಿದಿರೆ ತಾಲೂಕಿನ 11 ಗ್ರಾಮಗಳಲ್ಲಿ ಈ ಪೈಪ್‌ಲೈನ್ ಹಾದುಹೋಗಿದೆ. ಮೂಡುಬಿದಿರೆ ಗ್ರಾಮಾಂತರ ಹಾಗೂ ಪುರಸಭೆ ವ್ಯಾಪ್ತಿಯ ಆಯ್ದ ಗ್ರಾಮಗಳ 478 ಸರ್ವೇ ನಂಬರ್‌ಗಳಲ್ಲಿ ಈ ಪೈಪ್‌ಲೈನ್ ಇದೆ. ವಾಲ್ಪಾಡಿ ಗ್ರಾಮದ 91, ತೆಂಕಮಿಜಾರು ಗ್ರಾಮದ 76, ನೆಲ್ಲಿಕಾರು ಗ್ರಾಮದ(ಎರಡೂ ವಿಭಾಗ ಸೇರಿಸಿ) 76, ಕಲ್ಲಬೆಟ್ಟು ಗ್ರಾಮದ 55, ಪ್ರಾಂತ್ಯ ಗ್ರಾಮದ 42, ತೋಡಾರು ಗ್ರಾಮದ 40, ಪಡುಕೊಣಾಜೆ ಗ್ರಾಮದ 39, ಮೂಡುಕೊಣಾಜೆ ಗ್ರಾಮದ 25, ಹೊಸಬೆಟ್ಟು ಗ್ರಾಮದ 13, ಪುತ್ತಿಗೆ ಗ್ರಾಮದ 11, ಕರಿಂಜೆ ಗ್ರಾಮದ 10 ಸರ್ವೇ ನಂಬರ್‌ಗಳಲ್ಲಿ ಪೈಪ್‌ಲೈನ್ ಇದೆ.

    ಕುದುರೆಮುಖದಿಂದ ನೀರು: ಕುದುರೆಮುಖದಲ್ಲಿ ಕಬ್ಬಿಣದ ಅದಿರು ತೆಗೆಯುವ ಕೆಲಸ ಸ್ಥಗಿತಗೊಂಡಿದೆ. ಹಿಂದೆ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಪೈಪ್‌ನಲ್ಲಿ ಇಂದು ಮಂಗಳೂರಿಗೆ ಕುದುರೆಮುಖ ಡ್ಯಾಂನಲ್ಲಿರುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪೈಪ್‌ಲೈನ್ ಮೂಲಕ ನೀರು ಸರಬರಾಜು ನಿರಂತರ ನಡೆಯುತ್ತಿದ್ದು, ಕುದುರೆಮುಖದಿಂದ ಮಂಗಳೂರಿನ ಕಡೆಗೆ ಹಾಕಿರುವ ಪೈಪ್‌ಲೈನ್ ಸಕ್ರಿಯವಾಗಿದೆ. ಕಬ್ಬಿಣದ ಅದಿರು ಸಾಗಿಸಲು ಪೈಪ್‌ಲೈನ್ ಮಾಡುವ ಸಂದರ್ಭದಲ್ಲೇ ಬೇಕಾದ ಜಾಗ ಸ್ವಾಧೀನಪಡಿಸಿ ಪರಿಹಾರ ಕೂಡ ನೀಡಲಾಗಿದೆ.

    ಪೈಪ್‌ಗೆ ಹಾನಿಯಾದಲ್ಲಿ ನಷ್ಟ: ಒಂದು ವೇಳೆ ಪೈಪ್‌ಲೈನ್ ಇರುವ ಜಾಗದಲ್ಲಿ ಕಟ್ಟಡ ಕಟ್ಟುವಾಗ ಅದಕ್ಕೆ ಹಾಕುವ ಪಿಲ್ಲರ್‌ನಿಂದ ಹಾನಿಯಾದಲ್ಲಿ ರಭಸದಿಂದ ಹರಿಯುವ ನೀರಿನಿಂದ ಕೃತಕ ನೆರೆ ಉಂಟಾಗಿ ನಷ್ಟ ಸಂಭವಿಸಬಹುದು. ಜನರಿಗೆ ಮಾತ್ರವಲ್ಲ, ಸರ್ಕಾರಕ್ಕೂ ಕೋಟ್ಯಂತರ ರೂ. ನಷ್ಟ ಆಗಬಹುದು. ಇದಕ್ಕೆ ಮುನ್ನೆಚರಿಕೆ ಕ್ರಮವಾಗಿ ಪೈಪ್‌ಲೈನ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ.

    ಗೊಂದಲಕ್ಕೆ ತೆರೆ: ಕೆಲವು ವರ್ಷಗಳಿಂದ ಗ್ರಾಮಗಳಲ್ಲಿ ಪೈಪ್‌ಲೈನ್ ಸ್ವಾಧೀನಪಡಿಸಿದ ಜಾಗದ ಸರ್ವೇ ನಂಬರ್‌ಗಳ ಬಗ್ಗೆ ಗೊಂದಲಗಳಿದ್ದು, ಕೆಐಒಸಿಎಲ್ ಜುಲೈ 28ರಂದು ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಸರ್ವೇ ನಂಬರ್‌ನ ಪರಿಷ್ಕೃತ ಪಟ್ಟಿ ನೀಡಿದೆ. ಕಾರ್ಕಳ, ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕುಗಳ ಒಟ್ಟು 20 ಗ್ರಾಮಗಳಲ್ಲಿ ಪೈಪ್‌ಲೈನ್ ಹಾದುಹೋಗಿದ್ದು, ಸರ್ವೇ ನಂಬರ್ ವಿವರವನ್ನು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts