More

    ಪೆಟ್ರೋಮ್ಯಾಕ್ಸ್​ನಲ್ಲಿ ಬದುಕು ಮತ್ತು ಬೆಳಕು: ಸಿನಿಮಾ ವಿಮರ್ಶೆ

    • ಚಿತ್ರ: ಪೆಟ್ರೋಮ್ಯಾಕ್ಸ್
    • ನಿರ್ದೇಶನ: ವಿಜಯಪ್ರಸಾದ್
    • ನಿರ್ಮಾಣ: ಸುಧೀಂದ್ರ ಕೆ.ಎಂ.
    • ತಾರಾಗಣ: ಸತೀಶ್ ನೀನಾಸಂ, ಹರಿಪ್ರಿಯಾ, ಅರುಣ್, ನಾಗಭೂಷಣ್, ಕಾರುಣ್ಯ ರಾಮ್ ವಿಜಯಲಕ್ಷ್ಮೀ ಸಿಂಗ್ ಮುಂತಾದವರು

    | ಚೇತನ್ ನಾಡಿಗೇರ್ ಬೆಂಗಳೂರು

    ‘ನಮ್ ಸಿನಿಮಾದಲ್ಲಿ ಅಷ್ಟೊಂದು ಎಮೋಷನ್ ಇದೆ, ನಮ್ ಡೈರೆಕ್ಟರ್ ಯಾಕೆ ಬರೀ ಡಬಲ್ ಮೀನಿಂಗ್ ಡೈಲಾಗ್ ಇಟ್ಟವ್ರೆ?’

    ಕೆಲವು ದಿನಗಳ ಹಿಂದೆ ಬಿಡುಗಡೆಯಾದ ‘ಪೆಟ್ರೋಮ್ಯಾಕ್ಸ್’ ಟೀಸರ್​ನಲ್ಲಿ ಇಂಥದ್ದೊಂದು ಸಂಭಾಷಣೆ ಇದೆ. ಸಿನಿಮಾ ನೋಡಿ ಹೊರಬಂದವರಿಗೂ ಇಂಥದ್ದೊಂದು ಪ್ರಶ್ನೆ ಕಾಡಿದರೆ ಆಶ್ಚರ್ಯವಿಲ್ಲ. ಏಕೆಂದರೆ, ಟ್ರೇಲರ್​ನಲ್ಲಷ್ಟೇ ಅಲ್ಲ, ಚಿತ್ರದಲ್ಲೂ ಸಿಕ್ಕಾಪಟ್ಟೆ ಎನ್ನುವಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳಿವೆ. ಅದರ ಮಧ್ಯದಲ್ಲೊಂದು ಮನಸ್ಸು ತಟ್ಟುವ ಕಥೆ ಇದೆ. ಯೋಚನೆಗೆ ಹಚ್ಚುವ ಹಲವು ವಿಚಾರಗಳಿವೆ. ಪ್ರತಿಯೊಬ್ಬರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವಂತಹ ವಿಷಯಗಳಿವೆ.

    ಅಷ್ಟಾದರೂ ನಿರ್ದೇಶಕ ವಿಜಯಪ್ರಸಾದ್ ಬರೀ ಡಬಲ್ ಮೀನಿಂಗ್ ಸಂಭಾಷಣೆಗಳನ್ನೇ ವಿಜೃಂಭಿಸುವುದೇಕೆ? ಬರೀ ಗಂಭೀರ ವಿಷಯಗಳನ್ನು ಹೇಳಿದರೆ ಜನ ಮನರಂಜನೆ ಇಲ್ಲ ಎಂದು ದೂರ ಉಳಿಯುತ್ತಾರೆ ಎಂಬ ಭಯವೋ? ಮಾಸ್ ಅಂಶಗಳ ಮೂಲಕ ಹೇಳಿದರೆ, ಎಲ್ಲಾ ವರ್ಗದ ಜನರನ್ನು ತಲುಪಬಹುದು ಎಂಬ ನಂಬಿಕೆಯೋ? ಅಥವಾ ಬೇರೆ ಕಾರಣಗಳೋ ಗೊತ್ತಿಲ್ಲ. ಒಟ್ಟಿನಲ್ಲಿ ಇಡೀ ಚಿತ್ರದಲ್ಲಿ ಡಬಲ್ ಮೀನಿಂಗ್ ಸಂಭಾಷಣೆಗಳು ತುಂಬಿ ತುಳುಕುತ್ತಿವೆ.

    ‘ಪೆಟ್ರೋಮ್ಯಾಕ್ಸ್’ ಬದುಕಿನ ಕುರಿತಾದ ಚಿತ್ರ. ಬೆಳಕಿನ ಕುರಿತಾದ ಚಿತ್ರ. ಬೆಳಕು ಅಥವಾ ಸರಿಯಾದ ಆಲೋಚನೆಗಳು ಹೇಗೆ ಮನುಷ್ಯನ ಬದುಕನ್ನೇ ಬದಲಾಯಿಸುತ್ತದೆ ಎಂದು ಸೂಕ್ಷ್ಮವಾಗಿ ಸಾರುವ ಚಿತ್ರ. ಈ ವಿಷಯವನ್ನು ನಾಲ್ವರು ಅನಾಥರ ಮೂಲಕ ಹೇಳುತ್ತಾರೆ ವಿಜಯಪ್ರಸಾದ್. ತಮ್ಮ ಕಾಲಮೇಲೆ ನಿಂತಿರುವುದರಿಂದ ಹೊರಗೆ ಹೋಗಿ ಬದುಕು ಕಟ್ಟಿಕೊಳ್ಳಿ ಎಂದು ಅನಾಥಾಶ್ರಮದವರು ಹೇಳುತ್ತಾರೆ. ಅಷ್ಟು ವರ್ಷ ಒಟ್ಟಿಗೆ ಇರುವ ಆ ನಾಲ್ವರು, ಮುಂದೆ ಸಹ ಒಟ್ಟಿಗೆ ಬದುಕಬೇಕೆಂದು ತೀರ್ವನಿಸುತ್ತಾರೆ. ಈ ನಿಟ್ಟಿನಲ್ಲಿ ಮನೆ ಹುಡುಕಿಕೊಂಡು ಹೊರಡುವ ಅವರ ಜೀವನದಲ್ಲಿ ಹಲವರು ಬಂದು ಸೇರಿಕೊಳ್ಳುತ್ತಾರೆ. ಕೊನೆಗೆ ಅವರು ಮನೆ ಮಾಡಿಕೊಂಡು ಚೆನ್ನಾಗಿರುತ್ತಾರಾ? ಎಂಬುದೇ ಚಿತ್ರದ ಕಥೆ.

    ಅನಾಥರಾಗಿ ಹುಟ್ಟಬಹುದು, ಆದರೆ ಅನಾಥರಾಗಿ ಸಾಯಬಾರದು ಎಂಬ ಸಂದೇಶವನ್ನು ಸಾರುವ ಚಿತ್ರ ‘ಪೆಟ್ರೋಮ್ಯಾಕ್ಸ್’. ಮೊದಲೇ ಹೇಳಿದಂತೆ ಚಿತ್ರದಲ್ಲಿ ಕೆಲವು ಗಾಢವಾದ ವಿಷಯಗಳಿವೆ. ಆದರೆ, ಅದನ್ನು ಮರೆಸುವಷ್ಟು ದ್ವಂದ್ವಾರ್ಥದ ಸಂಭಾಷಣೆಗಳೂ ಇವೆ. ಮೊದಲರ್ಧ ಚಿತ್ರ ಹೋಗುವುದೇ ಗೊತ್ತಾಗದಷ್ಟು ನಗುವಿದೆ. ದ್ವಿತೀಯಾರ್ಧ ಸಿಕ್ಕಾಪಟ್ಟೆ ವಿಷಾಧ ಆವರಿಸಿಕೊಳ್ಳುತ್ತದೆ. ಅದರ ನಡುವೆಯೂ ಆಗಾಗ ನಗಿಸುವುದಕ್ಕೆ ಪ್ರಯತ್ನಿಸುತ್ತಾರೆ ನಿರ್ದೇಶಕರು. ಹಾಗೆ ನೋಡಿದರೆ, ಅವರು ದ್ವಂದ್ವಾರ್ಥ ಎಂದು ಒಪು್ಪವುದಿಲ್ಲ. ಅದು ಚೇಷ್ಟೆ ಎನ್ನುತ್ತಾರೆ. ತಮ್ಮ ಪಾತ್ರಗಳಿಂದಲೂ ಹೇಳಿಸುತ್ತಾರೆ. ಅಷ್ಟೇ ಅಲ್ಲ, ಡಬಲ್ ಮೀನಿಂಗ್ ಎಂದು ಹೇಳುವವರ ಮನಸ್ಥಿತಿಯೇ ಸರಿ ಇಲ್ಲ ಎಂದು ಸಹ ವಾದಿಸುತ್ತಾರೆ. ಒಟ್ಟಾರೆ ನಗಿಸುತ್ತಲೇ, ಅಲ್ಲಲ್ಲಿ ಕಣ್ಣು ಒದ್ದೆ ಮಾಡಿಸಿ ಕಳಿಸುತ್ತಾರೆ.

    ಇಡೀ ಚಿತ್ರ ನಿಂತಿರುವುದು ಪಾತ್ರಗಳು ಮತ್ತು ಮಾತುಗಳ ಮೇಲೆ. ಈ ನಿಟ್ಟಿನಲ್ಲಿ ಅವರು, ಇವರು ಎನ್ನದೆ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ ಮತ್ತು ಪ್ರತಿಯೊಬ್ಬರು ಸಹ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸತೀಶ್ ನೀನಾಸಂ, ಹರಿಪ್ರಿಯಾ, ಅರುಣ್, ನಾಗಭೂಷಣ್, ಕಾರುಣ್ಯ ರಾಮ್ ವಿಜಯಲಕ್ಷ್ಮೀ ಸಿಂಗ್, ಕೆ.ಎಸ್. ಶ್ರೀಧರ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪದ್ಮಜಾ ರಾವ್ ಹೀಗೆ ಪ್ರತಿಯೊಬ್ಬರು ಗಮನಸೆಳೆಯುತ್ತಾರೆ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಮತ್ತು ನಿರಂಜನ್ ಬಾಬು ಇಟ್ಟಿರುವ ಶಾಟ್​ಗಳು ಚಿತ್ರದ ಹೈಲೈಟ್.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    06

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts