More

    ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

    ಹನೂರು: ಗಣಪತಿ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಏಕಗವಾಕ್ಷಿ ಸಮಿತಿಯಿಂದ ಅನುಮತಿ ಪಡೆಯುವುದರ ಜತೆಗೆ ಸಂಜೆ 6 ಗಂಟೆಯೊಳಗೆ ಮೂರ್ತಿಯನ್ನು ವಿಸರ್ಜಿಸಬೇಕು ಎಂದು ಇನ್ಸ್‌ಪೆಕ್ಟರ್ ಶಶಿಕುಮಾರ್ ತಿಳಿಸಿದರು.

    ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಬಂಧ ಆಯೋಜಿಸಿದ್ದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ವಿವಿಧ ಗ್ರಾಮಗಳ ಸಂಘ-ಸಂಸ್ಥೆ ಹಾಗೂ ಯುವಕರ ಸಮಿತಿ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏಕಗವಾಕ್ಷಿ ಸಮಿತಿಯನ್ನು ಜಾರಿಗೆ ತರಲಾಗಿದೆ. ಆಯೋಜಕರು ಸೆಸ್ಕ್, ಪೊಲೀಸ್, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಅಗ್ನಿಶಾಮಕ ಸೇರಿದಂತೆ ಇತರ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗುಂಪು ಘರ್ಷಣೆಗಳಿಗೆ ಆಸ್ಪದ ನೀಡಬಾರದು. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಅಗತ್ಯವಿದ್ದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಹೇಳಿದರು.

    ಈ ಬಾರಿ ಜಲಾಶಯ, ಕೆರೆಕಟ್ಟೆಗಳಲ್ಲಿ ಮೂರ್ತಿ ವಿಸರ್ಜಿಸದಂತೆ ಸುಪ್ರಿಂಕೋರ್ಟ್ ಆದೇಶ ಹೊರಡಿಸಿದೆ. ಆದ್ದರಿಂದ ವಿಸರ್ಜನೆ ಸ್ಥಳ ಹಾಗೂ ಪ್ರತಿಷ್ಠಾಪನೆ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು. ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

    ಸಭೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಿ.ಮಂಜುನಾಥ್ ಪ್ರಸಾದ್, ಎಎಸೈಗಳಾದ ಕೃಷ್ಣ, ಶಿವರಾಜು, ಸಿಬ್ಬಂದಿ ಶಿವಮೂರ್ತಿ, ರಾಘವೇಂದ್ರ ಹಾಗೂ ವಿವಿಧ ಗ್ರಾಮಗಳ ಯುವ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts