More

    ಪ್ರತಿ ತಾಲೂಕಲ್ಲೂ ಕೋವಿಡ್ ಕೇರ್ ಸೆಂಟರ್

    ಬೆಳಗಾವಿ: ಲಕ್ಷಣ ರಹಿತ ಕೋವಿಡ್-19 ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ಜಿಲ್ಲೆಯ 10 ತಾಲೂಕಿನಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿರುವ 30 ಬೆಡ್ ಕೂಡ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗಂಭೀರ ಪ್ರಕರಣ ಹಾಗೂ ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಬಿಮ್ಸ್ಗೆ ದಾಖಲು ಮಾಡಲಾಗುತ್ತಿದೆ ಎಂದರು.

    ಬೈಲಹೊಂಗಲ, ಸವದತ್ತಿ, ರಾಮದುರ್ಗ ಮತ್ತು ಗೋಕಾಕದಲ್ಲಿ ಈಗಾಗಲೇ ಲಕ್ಷಣ ರಹಿತರಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಇವರಿಗೆ 10 ದಿನಗಳ ಕಾಲ ಸರ್ಕಾರದ ಮಾರ್ಗಸೂಚಿ ಪ್ರಕಾರ ಊಟೋಪಹಾರ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. 768 ಬೆಡ್‌ಗಳು ಈ 10 ಕೋವಿಡ್ ಕೇರ್ ಸೆಂಟರ್‌ನಲ್ಲಿ ಲಭ್ಯವಿವೆ. ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನ ಬೆಡ್ ಕಲ್ಪಿಸುವ ಅವಕಾಶ ಇದೆ ಎಂದರು.

    ಇಎಸ್‌ಐ/ಕೆಎಲ್‌ಇ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯ: ಬೆಳಗಾವಿ ನಗರದ ಇಎಸ್‌ಐ ಆಸ್ಪತ್ರೆಯಲ್ಲೂ 25 ಬೆಡ್ ಸಜ್ಜುಗೊಳಿಸಲಾಗಿದೆ. ಕೆಎಲ್‌ಇ ಆಸ್ಪತ್ರೆಯಲ್ಲಿ 65 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ 30 ಬೆಡ್ ಕಲ್ಪಿಸಲು ಕೋರಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇನ್ನೂ 100 ಬೆಡ್ ಹೆಚ್ಚಳ ಮಾಡಲಾಗಿದೆ. ಕೋವಿಡ್ ಹೊರತುಪಡಿಸಿ ಇತರ ರೋಗಿಗಳನ್ನು ಸರ್ಕಾರದ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಖಾಸಗಿ ಆಸ್ಪತ್ರೆಯವರು ಕೂಡ ಇತರ ರೋಗಿಗಳ ಚಿಕಿತ್ಸೆಗೆ ಮುಂದಾಗಿದ್ದಾರೆ. ಕೆಲ ಸಣ್ಣ ಆಸ್ಪತ್ರೆಯ ವೈದ್ಯರು ಸರ್ಕಾರಿ ಅಥವಾ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಆಸಕ್ತಿ ತೋರಿಸಿದ್ದಾರೆ. ಅವರ ಪಟ್ಟಿ ತಯಾರಿಸಿ ಅವರ ಸೇವೆ ಬಳಸಿಕೊಳ್ಳಲಾಗುವುದು ಎಂದರು.

    161 ಪ್ರಕರಣ: ಕ್ವಾರಂಟೈನ್ ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ ಇದುವರೆಗೆ 161 ಪ್ರಕರಣ ದಾಖಲಿಸಲಾಗಿದೆ. ಮಾದರಿ ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡಿದ್ದರಿಂದ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಆತಂಕಪಡುವ ಅಗತ್ಯವಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧನ ಮರಣ ತನಿಖೆಗೆ ಆದೇಶ ನೀಡಲಾಗಿದೆ. ಉಸಿರಾಟ ತೊಂದರೆ ಇರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳು ತಕ್ಷಣ ಬಿಮ್ಸ್ ಆಸ್ಪತ್ರೆಗೆ ಕಳುಹಿಸಬೇಕು ಎಂದರು. ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಕ್ಕಾರ ಇತರರಿದ್ದರು.

    ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಕರೊನಾ ಸೋಂಕಿಗೆ 24 ಜನರು ಮೃತಪಟ್ಟಿದ್ದು, ಮರಣ ಪ್ರಮಾಣ ತಡೆಗಟ್ಟುವುದು ನಮ್ಮ ಆದ್ಯತೆ. ಜಿಲ್ಲೆಗೆ 1 ಸಾವಿರ ರ‌್ಯಾಪಿಡ್ ಆಂಟಿಜೆನ್ ಕಿಟ್ ಬಂದಿದ್ದು, ಗಂಟಲು ದ್ರವ ಮಾದರಿ ಪರೀಕ್ಷಿಸಿದ 15 ನಿಮಿಷಗಳಲ್ಲಿ ಫಲಿತಾಂಶ ದೊರೆಯಲಿದೆ. ಕುಟುಂಬಕ್ಕೆ ಶವ ಹಸ್ತಾಂತರ ಅಥವಾ ಶವ ಸಂಸ್ಕಾರ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಲಾಗಿದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು.
    | ಎಂ.ಜಿ. ಹಿರೇಮಠ ಡಿಸಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts