More

    ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಶೇ. 9.51 ಇಳುವರಿ

    ಕಿಕ್ಕೇರಿ: ಪ್ರಸಕ್ತ ಹಂಗಾಮಿನಲ್ಲಿ 5.87ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯಲಾಗಿದ್ದು, ಶೇ.9.51ರಷ್ಟು ಇಳುವರಿ ಲಭಿಸಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ. ರವಿ ತಿಳಿಸಿದರು.

    ಸಮೀಪದ ಮಾಕವಳ್ಳಿ ಗ್ರಾಮದಲ್ಲಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆ ಕಾರ್ಯ ಮುಗಿದ ಸಲುವಾಗಿ ಗುರುವಾರ ಕಾರ್ಖಾನೆ ಸಿಬ್ಬಂದಿ ಹಾಗೂ ರೈತರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ಕಾರ್ಖಾನೆಗೆ ಪ್ರತಿ ಹಂಗಾಮಿನಲ್ಲಿ 8ರಿಂದ 9ಲಕ್ಷ ಟನ್ ಕಬ್ಬಿನ ಅವಶ್ಯಕತೆ ಇದೆ. ಈ ಬಾರಿ ಮಳೆ ಕೊರತೆಯಿಂದ 2.5ಲಕ್ಷ ಟನ್ ಕಬ್ಬು ಕೊರತೆ ಕಾಡಿದ್ದು, ರೈತರಿಂದ ಸಮರ್ಪಕವಾಗಿ ಕಬ್ಬು ಪೂರೈಕೆಯಾಗಿಲ್ಲ ಎಂದರು.

    ಕಾರ್ಖಾನೆ ನಷ್ಟದಲ್ಲಿದ್ದು, ಎಥನಾಲ್ ಘಟಕ ಅತ್ಯವಶ್ಯವಿದೆ. ಪರಿಸರ, ರೈತಸ್ನೇಹಿಯಾಗಿ ಕಾರ್ಖಾನೆ ಎಲ್ಲ ರೀತಿಯ ಅತ್ಯಾಧುನಿಕ ಯಂತ್ರೋಪಕರಣವನ್ನು ಅಳವಡಿಸಿಕೊಂಡಿದ್ದು, ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಲಾಗಿದೆ. ಕಾರ್ಖಾನೆಯಲ್ಲಿ ಎಲ್ಲ ರೀತಿಯ ನೀರನ್ನು 4 ಹಂತದಲ್ಲಿ ಶುದ್ಧಿಕರಣಗೊಳಿಸಿ, ಕಾರ್ಖಾನೆಯಲ್ಲಿರುವ ಗಿಡಮರಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಕಬ್ಬು ವಿಭಾಗದ ಮುಖ್ಯಸ್ಥ ಕೆ.ಬಾಬುರಾಜ್ ಮಾತನಾಡಿ, ಕಬ್ಬು ಬೆಳೆ ರೈತರಿಗೆ ಸರ್ಕಾರದ ಎಫ್‌ಆರ್‌ಪಿ ದರದಂತೆ 2,944ರೂ.ಗಳನ್ನು ಸಕಾಲದಲ್ಲಿ ಬ್ಯಾಂಕ್‌ಗಳ ಮೂಲಕ ಪಾವತಿಸಲಾಗಿದೆ. ಬೇಸಿಗೆಯಲ್ಲಿ ಕಬ್ಬು ನಾಟಿ ಮಾಡುವವರಿಗೆ ಎಕರೆಗೆ 2.5ಟನ್ ಉಚಿತವಾಗಿ ಕಬ್ಬಿನ ಬಿತ್ತನೆ ಬೀಜ ಹಾಗೂ ಸಾಗಾಣಿಕೆ ಸಾವಿರ ರೂ. ಸಹಾಯಧನ ನೀಡಲಾಗುವುದು. ಮೇ ಯಿಂದ ಏಪ್ರಿಲ್ ಮಾಹೆಯಲ್ಲಿ ಬಿತ್ತನೆ ಮಾಡುವವರಿಗೆ ಶೇ.50ರಷ್ಟು ರಿಯಾಯಿತಿಯಲ್ಲಿ ಕಬ್ಬಿನ ಬಿತ್ತನೆ ಬೀಜ ನೀಡಲಾಗುತ್ತುದೆ. ಮಣ್ಣಿನ ಪೋಷಕಾಂಶ ವೃದ್ಧಿಗಾಗಿ ಶೇ. 25ರಿಯಾಯಿತಿಯಲ್ಲಿ ಸೂಕ್ಷ್ಮ ಪೋಷಕಾಂಶ ಮಿಶ್ರಣ ವಿತರಣೆ ಮಾಡಲಾಗುತ್ತಿದೆ. ಸೂಲಂಗಿ ರಹಿತ ಕಬ್ಬಿನ ತಳಿ ಸಿಒವಿಸಿ 18061 ಸುಮಾರು 700 ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಎಲ್ಲ ರೈತರು ಈ ತಳಿ ಬೆಳೆದು ಉತ್ತಮ ಆದಾಯ ಪಡೆಯಲು ಮುಂದಾಗಬಹುದು ಎಂದು ಮಾಹಿತಿ ನೀಡಿದರು. ಬೆಳೆಗಾರರಿಗೆ ಕಾರ್ಖಾನೆ ವತಿಯಿಂದ ಔತಣಕೂಟ ಏರ್ಪಡಿಸಲಾಗಿತ್ತು.

    ಕಬ್ಬು ವಿಭಾಗ ಹಿರಿಯ ಮುಖ್ಯಸ್ಥ ಕೆ. ಬಾಬುರಾಜ್, ವ್ಯವಸ್ಥಾಪಕ ದತ್ತಾತ್ರೇಯ, ತಾಂತ್ರಿಕ ವಿಭಾಗದ ಮೆಯನ್, ಎಚ್‌ಆರ್ ವಿಭಾಗದ ನವೀನ್, ಉತ್ಪಾದನಾ ವಿಭಾಗದ ಅಶೋಕ್‌ಕುಮಾರ್, ಲೆಕ್ಕ ವಿಭಾಗದ ಕುಮಾರ್, ಕುಮಾರಸ್ವಾಮಿ, ಹರೀಶ್, ವೀರೇಶ್, ಶಿವರಾಜ್, ಕಿರಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts