More

    ಭತ್ತಕ್ಕೆ ಬಂತು ಬಂಪರ್ ಬೆಲೆ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಬೆಳೆ ಪ್ರಮಾಣದಲ್ಲಿ ಕುಸಿತ, ಬೇಸಿಗೆಯಲ್ಲಿ ನೀರಿಲ್ಲದೆ ಬೆಳೆ ಬೆಳೆಯದ ಸ್ಥಿತಿಯ ನಡುವೆ ಮುಂಗಾರು ಹಂಗಾಮಿನ ಭತ್ತಕ್ಕೆ ಇದೀಗ 2500 ರೂ.ಗೂ ಅಧಿಕ ಬೆಲೆ ಬಂದಿದ್ದು, ಹೊಸ ದಾಖಲೆಗೆ ಮುನ್ನುಡಿ ಬರೆದಿದೆ.

    ಈ ಬಾರಿ ಮಳೆ ಕೊರತೆಯಿಂದಾಗಿ ಜಿಲ್ಲೆಯ ತುಂಗಭದ್ರಾ, ವರದಾ, ಕುಮದ್ವತಿ, ಧರ್ವ ನದಿಗಳನ್ನು ನಂಬಿಕೊಂಡು ಭತ್ತ ನಾಟಿ ಮಾಡುತ್ತಿದ್ದ ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಹಾನಗಲ್ಲ, ಶಿಗ್ಗಾಂವಿ ತಾಲೂಕಿನ ರೈತರು ಭತ್ತ ಬೆಳೆಯಲು ಹರಸಾಹಸ ಪಟ್ಟಿದ್ದಾರೆ. ಭತ್ತ ನಾಟಿಯಿಂದ ಹಿಡಿದು ಫಸಲು ಕೈಗೆ ಬರುವವರೆಗೂ ಜೀವಜಲದ ಅಭಾವ ಕಾಡಿದೆ.

    ಒಂದೆಡೆ ಮಳೆ ಕೊರತೆ ರೈತರನ್ನು ಕಾಡಿದರೆ ಕಳೆದ 15 ದಿನಗಳ ಹಿಂದೆ ಸುರಿದ ಹಿಂಗಾರು ಮಳೆ, ಭತ್ತದ ಫಸಲನ್ನು ನಾಶಪಡಿಸಿದೆ. ಆದರೆ, ಪ್ರತಿ ಬಾರಿಗಿಂತ ಈ ಬಾರಿ ನೀರಿನ ಅಭಾವದ ಕಾರಣಕ್ಕೆ ಭತ್ತನಾಟಿ ಪ್ರಮಾಣ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಲು ಕಾರಣವಾಗಿದೆ.

    ಬೆಲೆ ಗಗನಮುಖಿ

    ಕಳೆದ ವರ್ಷ 1 ಕ್ವಿಂಟಾಲ್ ಭತ್ತಕ್ಕೆ 1500 ರೂ.ವರೆಗೂ ಬೆಲೆಯಿತ್ತು. ಆದರೆ, ಈ ವರ್ಷ ದಪ್ಪ ಭತ್ತ 1 ಕ್ವಿಂಟಾಲ್​ಗೆ 2300 ರೂ.ನಿಂದ 2350 ರೂ.ಗಳಿದೆ. ಆರ್​ಎನ್​ಆರ್ ಸಣ್ಣ ಭತ್ತ 2750 ರೂ.ನಿಂದ 2800 ರೂ. ಹಾಗೂ ಬಿಪಿಟಿ ಸೋನಾ ಭತ್ತಕ್ಕೆ 2450 ರೂ.ನಿಂದ 2500 ರೂ.ವರೆಗೂ ಬೆಲೆ ಬಂದಿದೆ. ಈ ಬಾರಿ ಕೊಯ್ಲಿನ ವೇಳೆಯೇ ಭತ್ತ ಖರೀದಿಗಾಗಿ ವರ್ತಕರು ಹೊಲಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಹೊಲದಲ್ಲಿಯೇ ಭತ್ತ ಖರೀದಿಸಿದರೆ 2300 ರೂ. ದರ ನೀಡುತ್ತಿದ್ದಾರೆ.

    ದೊಡ್ಡ ವರ್ತಕರು ಸಾವಿರಾರು ಚೀಲ ಭತ್ತ ಶೇಖರಣೆ ಮಾಡುವುದಕ್ಕಾಗಿಯೇ ಖರೀದಿಗೆ ಮುಗಿಬಿದ್ದಿದ್ದಾರೆ. ಸಂಗ್ರಹಿಸಿದ ಮೂರಾಲ್ಕು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಆದಾಯಗಳಿಸಿದ್ದು, ಅದೇ ರೀತಿಯ ಪ್ರಯತ್ನ ಈ ಬಾರಿಯೂ ನಡೆದಿದೆ. ರೈತರು ಸಹ ಈ ಬಾರಿ ಎಚ್ಚೆತ್ತುಕೊಂಡಿದ್ದು, ಭತ್ತ ಮಾರಾಟಕ್ಕೂ ಮೊದಲು ದರ ಏರಿಕೆಯ ಮಾಹಿತಿ ಪಡೆಯುತ್ತಿದ್ದಾರೆ. ಭತ್ತ ಶೇಖರಣೆ ಮಾಡಿಟ್ಟ ಒಂದೆರಡು ತಿಂಗಳಲ್ಲಿ ದರ ಏರಿಕೆಯಾದರೆ, ದೊಡ್ಡ ಪ್ರಮಾಣದ ಲಾಭ ಗಳಿಕೆಯ ಲೆಕ್ಕಾಚಾರದಲ್ಲಿ ವರ್ತಕರಿದ್ದಾರೆ.

    ಒಂದು ವರ್ಷ ಬೆಳೆಯೇ ಇಲ್ಲ

    ಮುಂಗಾರು ಹಂಗಾಮಿನ ಭತ್ತ ಕೊಯ್ಲಾಗಿ ಮಾರಾಟವಾದ ಬಳಿಕ ಮುಂದಿನ ಮುಂಗಾರಿನವರೆಗೂ ಯಾವುದೇ ಬೆಳೆ ಇಲ್ಲದೆ ಕಾಯುವ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ. ಬೇಸಿಗೆ ಬೆಳೆ ನೀರಿಲ್ಲದೇ ಇರುವುದರಿಂದ ಮುಂದಿನ ವರ್ಷದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ನಾಟಿ ಮಾಡಿ, ಕೊಯ್ಲು ಮಾಡಿದ ಬಳಿಕವೇ ಬೆಳೆ ಬರಲಿದೆ. ಹೀಗಾಗಿ ಈಗಿನ ಭತ್ತಕ್ಕೆ ಭರ್ಜರಿ ಬೇಡಿಕೆ ಕುದುರಿದೆ.

    ಸರ್ಕಾರದ ಬೆಂಬಲ ಬೆಲೆಯೇ 2,203 ರೂಪಾಯಿ

    ರಾಣೆಬೆನ್ನೂರಿನಲ್ಲಿ 7,780 ಹೆಕ್ಟೇರ್, ಹಾನಗಲ್ಲನಲ್ಲಿ 14,350 ಹೆಕ್ಟೇರ್, ಶಿಗ್ಗಾಂವಿಯಲ್ಲಿ 4,582 ಹೆಕ್ಟೇರ್, ಹಿರೇಕೆರೂರ ಹಾಗೂ ರಟ್ಟಿಹಳ್ಳಿಯಲ್ಲಿ 1,883 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಜಿಲ್ಲಾಡಳಿತ ಸಹ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ಮುಂದಾಗಿದ್ದು, 1 ಕ್ವಿಂಟಾಲ್​ಗೆ 2,183 ರೂ.ಗಳಿಂದ 2,203 ರೂ.ಗಳ ವರೆಗೆ ಬೆಲೆ ನಿಗದಿಪಡಿಸಿದೆ.

    ಈ ಬಾರಿ ಮಳೆ ಕೈ ಕೊಟ್ಟರೂ ಕಷ್ಟ ಪಟ್ಟು ಹೇಗೋ ಭತ್ತ ಬೆಳೆದಿದ್ದೇವೆ. ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚಳವಾಗಿದ್ದು, ಕಷ್ಟದಲ್ಲಿ ಭತ್ತ ಕೈ ಹಿಡಿದಂತಾಗಿದೆ. ಕಳೆದ ವರ್ಷ 1600 ರೂ.ಗೆ ಕ್ವಿಂಟಾಲ್​ನಂತೆ ಭತ್ತ ಮಾರಾಟ ಮಾಡಿದ್ದೇವೆ. ಈ ಬಾರಿ 2300 ರೂ.ಗಳಿಗೆ ಗದ್ದೆಗೆ ಬಂದು ಖರೀದಿಸುತ್ತಿದ್ದಾರೆ.

    | ಬಸವರಾಜ ಹುಲ್ಲತ್ತಿ, ಭತ್ತ ಬೆಳೆಗಾರ

    ಈ ಬಾರಿ ಭತ್ತದ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿರುವುದರಿಂದ ಬೆಲೆ ಏರಿಕೆಯಾಗಿದೆ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿ ಖರೀದಿಸಲು ಈಗಾಗಲೇ ನೋಂದಣಿ ಆರಂಭಿಸಲಾಗಿದೆ.

    | ಪರಮೇಶ ನಾಯಕ, ಎಪಿಎಂಸಿ ಸಹಾಯಕ ನಿರ್ದೇಶಕ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts