More

    ನಾಲಾದಿಂದ ಜನಜೀವನ ಅಸಹ್ಯ

    ಹುಬ್ಬಳ್ಳಿ: ನಾಲಾದಲ್ಲಿ ಕೊಳಚೆ ನೀರು ಹರಿಯುವುದು ಸಹಜ. ಕೊಪ್ಪಿಕರ ರಸ್ತೆ ಮ್ಯಾದಾರ ಓಣಿಯಿಂದ ತುಳಜಾ ಭವಾನಿ ವೃತ್ತ ಮೂಲಕ ಹಾದು ಹೋಗಿರುವ ನಾಲಾ ಇಲ್ಲಿಯ ಜನಜೀವನವನ್ನೇ ಅಸಹ್ಯಗೊಳಿಸಿದೆ. ಇದನ್ನು ನಗರದ ಮಧ್ಯವರ್ತಿ ಸ್ಥಳವೆಂದು ಹೇಳಿಕೊಳ್ಳಲು ಬೇಸರ ಪಡಬೇಕು.

    ಇದು ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ವ್ಯಾಪಾರ-ವಹಿವಾಟು ಸ್ಥಳವೂ ಹೌದು. ಇಲೆಕ್ಟ್ರಾನಿಕ್ಸ್-ಪ್ಲಾಸ್ಟಿಕ್ ವಸ್ತುಗಳಿಂದ ಹಿಡಿದು ಮಕ್ಕಳ ಆಟಿಕೆ ಸಾಮಗ್ರಿಗಳವರೆಗೆ ಚಿಲ್ಲರೆ-ಸಗಟು ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ಇಂಥ ಸ್ಥಳ ನಗರದ ಸುಧಾರಿತ ಪ್ರದೇಶವಾಗಿರಬೇಕಿತ್ತು. ಗಬ್ಬು ವಾಸನೆ ಹರಡುವ ನಾಲಾ, ಹದಗೆಟ್ಟು ಹೋಗಿರುವ ರಸ್ತೆ, ಮಣ್ಣು ಮಿಶ್ರಿತ ನೀರು ಪೂರೈಕೆ ಕನಿಷ್ಠ ಮಟ್ಟದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

    ಕಳೆದ 2 ಅವಧಿಯಿಂದ ಕಾಂಗ್ರೆಸ್ಸಿನ ಪ್ರಸಾದ ಅಬ್ಬಯ್ಯ ಈ ಭಾಗದ ಶಾಸಕರಾಗಿದ್ದಾರೆ. ಒಮ್ಮೆ ಮೇಯರ್ ಆಗಿದ್ದ ಬಿಜೆಪಿಯ ಡಿ.ಕೆ. ಚವ್ಹಾಣ ಇಲ್ಲಿಯ (ವಾರ್ಡ್ ನಂ. 53) ಪಾಲಿಕೆ ಸದಸ್ಯರಾಗಿದ್ದರು (ಈಗ ಅವಧಿ ಮುಗಿದಿದೆ). ನಾಲಾ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

    ವಾಸ್ತವವಾಗಿ 10-12 ಅಡಿ ಆಳ ಇರಬೇಕಿದ್ದ ನಾಲಾ 2 ಅಡಿಯಷ್ಟಿದೆ. ಅಂದರೆ 8-10 ಅಡಿಯಷ್ಟು ಹೂಳು ತುಂಬಿಕೊಂಡಿದೆ. ಮಳೆಗಾಲದಲ್ಲಿ ನಾಲಾ ಉಕ್ಕಿ ಹರಿದು ಮೊದಲು ಸುತ್ತಮುತ್ತಲಿನ ರಸ್ತೆ ಜಲಾವೃತಗೊಳ್ಳುತ್ತದೆ. ಬಳಿಕ ಮನೆಯೊಳಗೆ ನೀರು ನುಗ್ಗುತ್ತದೆ. ಈಗಲೂ ಸಹ ಮನೆಯ ಹೊರಗೆ ಬಾಗಿಲ ಬಳಿ ಉಸುಕಿನ ಚೀಲ ಇಟ್ಟಿರುವುದನ್ನು ಕಾಣಬಹುದು. ಕೊಪ್ಪಿಕರ ರಸ್ತೆಯಿಂದ ತುಳಜಾ ಭವಾನಿ ವೃತ್ತದವರೆಗೆ ನಾಲಾ ಮೇಲೆಯೇ ವಾಸು ಮಗಜಿಕೊಂಡಿ ಕಾಂಪ್ಲೆಕ್ಸ್, ಮನಿಯಾರ್ ಕಾಂಪ್ಲೆಕ್ಸ್​ನಂಥ ಬಹಮಹಡಿ ವಾಣಿಜ್ಯ ಸಂಕೀರ್ಣಗಳಿವೆ. ನ್ಯೂ ಮ್ಯಾದಾರ ಓಣಿಯಲ್ಲಿ ವರ್ಷದ ಹಿಂದೆ ಪಾಲಿಕೆ ಒಡೆತನದ ವಾಣಿಜ್ಯ ಸಂಕೀರ್ಣವೊಂದು ನಾಲಾದ ಮೇಲೆಯೇ ಇತ್ತು. ತುಳಜಾ ಭವಾನಿ ವೃತ್ತದ ಕೆಳಗೆ ನಾಲಾ ಇದೆ.

    ಹೀಗೆ ನಾಲಾ ಮೇಲೆ ಕಟ್ಟಡಗಳು ಇರುವುದರಿಂದ ಹೂಳೆತ್ತುವುದು ಅತ್ಯಂತ ಸಂಕೀರ್ಣವಾದ ಕೆಲಸವಾಗಿದೆ. ಆದರೂ ತಕ್ಕಮಟ್ಟಿಗಾದರೂ ಆ ಕೆಲಸ ಮಾಡಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿಯ ನಿವಾಸಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮಳಿಗೆದಾರರು ನಿರಂತರವಾಗಿ ಥರ್ಮಕೋಲ್, ಪ್ಯಾಕಿಂಗ್ ಸಾಮಗ್ರಿಗಳನ್ನು ನಾಲಾಗೆ ಎಸೆಯುತ್ತಾರೆ. ಇದರಿಂದ ನಾಲಾದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ.

    ನ್ಯೂ ಮ್ಯಾದಾರ ಓಣಿ ಸೊರಬದಮಠ ಓಣಿ ಕ್ರಾಸ್​ನಲ್ಲಿ ರಸ್ತೆ ಮೇಲಿನ ಸ್ಲ್ಯಾಬ್ ತೆಗೆದು ಓಪನ್ ಬಿಡಲಾಗಿದೆ. ಇದು ಪಾದಚಾರಿಗಳಿಗೆ, ವಾಹನ ಸವಾರರಿಗೆ ಅಪಾಯವೊಡ್ಡುತ್ತಿದೆ. ಇದೇ ರೀತಿ ತುಳಜಾ ಭವಾನಿ ವೃತ್ತದಲ್ಲಿ ನಾಲಾ ಮೇಲಿನ ಸ್ಲ್ಯಾಬ್ ತೆಗೆದು 3-4 ತಿಂಗಳಾಗಿವೆ. ಮುಂದೆ ಏನು ಮಾಡುತ್ತೇವೆ ಎಂಬುದನ್ನು ಪಾಲಿಕೆ ಅಧಿಕಾರಿಗಳು ಸ್ಥಳೀಯರಿಗೆ ಇನ್ನೂ ತಿಳಿಸಿಲ್ಲ. ಅಧಿಕಾರಿಗಳು ಸ್ಥಳೀಯರನ್ನು ಕತ್ತಲೆಯಲ್ಲಿಟ್ಟಿದ್ದಾರೆ. ಮಧ್ಯಾಹ್ನದಿಂದ ಸಂಜೆಯವರೆಗೆ ಸಂಚಾರ ದಟ್ಟಣೆ ವಿಪರೀತವಾಗಿದೆ.

    ನ್ಯೂ ಮ್ಯಾದಾರ ಓಣಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪಾಲಿಕೆ ಒಡೆತನದ ವಾಣಿಜ್ಯ ಸಂಕೀರ್ಣ ಕೆಡವಿ ವರ್ಷವಾಗುತ್ತ ಬಂದಿದೆ. ಇಲ್ಲಿ 4.6 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ ಡಿಸ್ಪೆನ್ಸರಿ (ಆಸ್ಪತ್ರೆ) ನಿರ್ಮಾಣ ಮಾಡಬೇಕಿದೆ. ರಾಮಾಚಾರಿ ಗ್ಲೋಬಲ್ ಕನ್ಸಟ್ರಕ್ಷನ್ ಏಜೆನ್ಸಿ ಗುತ್ತಿಗೆ ಪಡೆದಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಿಲ್ಲ.

    5 ದಿನಕ್ಕೊಮ್ಮೆ ನೀರು

    ಮ್ಯಾದಾರ ಓಣಿ, ನ್ಯೂ ಮ್ಯಾದಾರ ಓಣಿ, ಸೊರಬದ ಓಣಿ, ತುಳಜಾ ಭವಾನಿ ವೃತ್ತದ ಸುತ್ತಮುತ್ತಲಿನ ಮನೆಗಳಿಗೆ ಪ್ರತಿ 5 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಕಳೆದ ವರ್ಷ 26 ಕೋಟಿ ರೂ. ವ್ಯಯಿಸಿ ಮಲಪ್ರಭಾದಿಂದೆ ಹೆಚ್ಚುವರಿಯಾಗಿ 50 ಎಂಎಲ್​ಡಿ ನೀರು ಪಡೆದಾಗ ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದಾಗಿ ಹೇಳಿದ್ದರು. ಅದೀಗ ಈ ಭಾಗದ ನಿವಾಸಿಗಳಿಗೆ ಮರೀಚಿಕೆಯಾಗಿದೆ. ಮೇಲಾಗಿ ಕರ್ನಾಟಕ ಜಲ ಮಂಡಳಿ ಮಣ್ಣು ಮಿಶ್ರಿತ, ದುರ್ವಾಸನೆಯುಕ್ತ ನೀರು ಪೂರೈಸುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

    ರಸ್ತೆಗಳು ಅಧ್ವಾನವಾಗಿವೆ. ರಸ್ತೆಯಲ್ಲಿ ಸಂಚರಿಸಿದರೆ ಡಾಂಬರ್ ಭಾಗಕ್ಕಿಂತ ಮಣ್ಣು, ಜಲ್ಲಿಕಡಿಯೇ ಹೆಚ್ಚಾಗಿ ಕಾಣಿಸುತ್ತದೆ. ತಗ್ಗು ಗುಂಡಿಗಳದ್ದೇ ಮೇಲುಗೈ.

    ಪ್ರತಿ 4-5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತದೆ. ಮೊದಲ ಅರ್ಧ ಗಂಟೆ ಮಣ್ಣು ಮಿಶ್ರಿತ ನೀರು ಬರುತ್ತದೆ. ಅದನ್ನು ಚೆಲ್ಲಿ ಬಳಿಕ ಕುಡಿಯಲು ನೀರು ಹಿಡಿದುಕೊಳ್ಳುತ್ತೇವೆ.

    | ನೂತನ ಜಾಧವ, ತುಳಜಾ ಭವಾನಿ ವೃತ್ತ ನಿವಾಸಿ

    ಮ್ಯಾದಾರ ಓಣಿಯಿಂದ ತುಳಜಾಭವಾನಿ ವೃತ್ತದವರೆಗೆ ಹಾದು ಹೋಗಿರುವ ನಾಲಾ 10-12 ಅಡಿ ಆಳ ಇರಬೇಕಿತ್ತು. ಆದರೆ, ಇದೀಗ 2 ಅಡಿ ಆಳವೂ ಇಲ್ಲ. ನಾಲಾ ಹೂಳೆತ್ತುವ ಬದಲು ಪಾಲಿಕೆ ನಾಲಾ ಮೇಲ್ಭಾಗದ ಕಾಂಕ್ರೀಟ್ ಒಡೆದು ಹಾಕಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೆ ಅಪಾಯದ ಸ್ಥಿತಿ ನಿರ್ವಣವಾಗಿದೆ.

    | ಗಣಪತಿ ಬಿ., ನ್ಯೂ ಮ್ಯಾದಾರ ಓಣಿ ನಿವಾಸಿ

    ನಾಲಾ ಹೂಳೆತ್ತುವ ಪ್ರಸ್ತಾವನೆ ಸದ್ಯಕ್ಕಿಲ್ಲ. 15 ಲಕ್ಷ ರೂ. ವೆಚ್ಚದಲ್ಲಿ ತುಳಜಾಭವಾನಿ ವೃತ್ತದ ಬಳಿ ನಾಲಾಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕಲಾಗುವುದು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ.

    | ಬಿ. ಮನೋಹರ, ಸಹಾಯಕ ಆಯುಕ್ತ, ವಲಯ ಕಚೇರಿ 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts