More

    ಮಳೆಯಿಂದ ನಿಟ್ಟುಸಿರು ಬಿಟ್ಟ ಜನ

    ಮಡಿಕೇರಿ:

    ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ ೩-೪ ದಿನಗಳಿಂದ ಮಳೆಯಾಗುತ್ತಿದ್ದು, ಬಿಸಿಲಿನಿಂದ ಬಸವಳಿದಿದ್ದವರು ಸ್ವಲ್ಪ ಮಟ್ಟಿಗೆ ಸುಧಾರಿಸುವಂತೆ ಮಾಡಿದೆ. ನೀರಿಲ್ಲದೆ ಒಣಗುತ್ತಿದ್ದ ಕಾಫಿ ಸೇರಿದಂತೆ ಬಹುವಾರ್ಷಿಕ ವಾಣಿಜ್ಯ ಬೆಳೆಗಳ ತೋಟ ಮಾಲೀಕರೂ ಸದ್ಯಕ್ಕೆ ನಿಟ್ಟುಸಿರುವ ಬಿಟ್ಟಿದ್ದಾರೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬುಧವಾರ (ಏ.೨೪) ತನಕವೂ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ಕೊಡಗಿನಾದ್ಯಂತ ಉತ್ತಮ ಮಳೆಯಾಗುವ ಬಗ್ಗೆ ಮಾಹಿತಿ ನೀಡಲಾಗಿದೆ.

    ಬಿಸಿಲಿನ ಬೇಗೆಯಿಂದ ಬಸವಳಿದು ಸದ್ಯಕ್ಕೊಂದು ಮಳೆ ಬಂದರೆ ಸಾಕು ಎನ್ನುವ ನಿರೀಕ್ಷೆಯಲ್ಲಿದ್ದ ಜನತೆಗೆ ವರುಣ ಕೃಪೆ ತೋರಿಸಿರುವುದು ಸಮಾಧಾನ ಮೂಡಿಸಿದೆ. ಕೊಡಗಿನ ಕೆಲವೊಂದು ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದೆಡೆ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಗುರುವಾರ ಮತ್ತು ಶುಕ್ರವಾರ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಶನಿವಾರವೂ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನಾದ್ಯಂತ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಹಲವು ದಿನಗಳ ನಂತರ ಸ್ವಲ್ಪ ತಂಪಿನ ಅನುಭವ ಮೂಡಿಸಿತು.

    ಸೂರ್ಯನ ಪ್ರಖರ ಕಿರಣಗಳಿಂದಾಗಿ ಕಾದ ಕಾವಲಿಯಂತೆ ಆಗಿದ್ದ ಭೂಮಿ, ಬಿಸಿಲಿನಿಂದ ತತ್ತಿರಿಸಿದ್ದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಈ ಮಳೆ ಸ್ವಲ್ಪ ಕಳೆ ತಂದಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ತೋಟ ಉಳಿಸಿಕೊಳ್ಳಲು ಬೆಳೆಗಾರರು ಕೃತಕ ನೀರಾವರಿ ಮೊರೆ ಹೋಗಿದ್ದರು. ತೋಟದಲ್ಲಿನ ಕೆರೆಗಳಲ್ಲಿ ನೀರು ಖಾಲಿಯಾಗಿ, ನದಿಗಳು ಬತ್ತಿ ಹೋಗಿದ್ದರೂ ಕೊಳವೆ ಬಾವಿ ಮತ್ತಿತರ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಕಣ್ಣಾಮುಚ್ಚಾಲೆ ಆಟದ ಮಧ್ಯೆಯೇ ನೀರು ಹಾಯಿಸುತ್ತಾ ಮಳೆಗಾಗಿ ಆಕಾಶ ನೋಡುತ್ತಿದ್ದವರಿಗೆ ಹವಾಮಾನದಲ್ಲಿನ ಈಗಿನ ಬದಲಾವಣೆ ನಿಟ್ಟುಸಿರು ಬಿಡುವಂತೆ ಮಾಡಿದೆ.

    ಕಾಫಿ ಗಿಡಗಳನ್ನು ಕಾಪಾಡಿಕೊಳ್ಳುವುದರ ಜತೆಗೆ ಮುಂದಿನ ವರ್ಷಕ್ಕೆ ಫಸಲಿನ ಖಾತರಿ ಮಾಡಿಕೊಳ್ಳಲು ಈಗ ಮಳೆಯ ಅಗತ್ಯ ತುಂಬಾ ಇದೆ. ಅನುಕೂಲ ಉಳ್ಳವರು, ದೊಡ್ಡ ದೊಡ್ಡ ತೋಟಗಳ ಮಾಲೀಕರು ತೋಟದ ಬದಿ ಹರಿಯುವ ನದಿ, ಕೆರೆ, ಕೊಳವೆ ಬಾವಿಗಳಿಂದ ಕೃತಕ ನೀರಾವರಿ ವ್ಯವಸ್ಥೆ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದರು. ಆದರೆ ಚಿಕ್ಕ ಚಿಕ್ಕ ತೋಟಗಳ ಮಾಲೀಕರು ಮಳೆಯನ್ನೇ ಅವಲಂಭಿಸಿದ್ದಾರೆ. ಏಪ್ರಿಲ್, ಮೇ ತಿಂಗಳಿನಲ್ಲಿ ಒಳ್ಳೆಯ ಮಳೆಯಾದರೆ ತೋಟ ಉಳಿಯುತ್ತದೆ. ಮುಂದಿನ ವರ್ಷಕ್ಕೆ ಕಾಫಿಯ ಉತ್ತಮ ಫಸಲು ಕೂಡ ನಿರೀಕ್ಷೆ ಮಾಡಬಹುದು. ಹಾಗಾಗಿಯೇ ಈಗ ಬರುತ್ತಿರುವ ಮಳೆ ಪ್ರಮುಖವಾಗಿ ಸಣ್ಣ ಬೆಳೆಗಾರರಿಗೆ ಖುಷಿ ಕೊಟ್ಟಿದೆ.

    ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಸೇರಿದಂತೆ ಹೆಚ್ಚಿನ ನದಿಗಳು ಬತ್ತಿಹೋಗಿವೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜಿಲ್ಲೆಯ ಮತ್ತೊಂದು ಜಲಾಶಯವಾದ ಚಿಕ್ಲಿಹೊಳೆಯಲ್ಲಿ ನೀರು ತಳ ಸೇರಿದ್ದು, ಈಗ ಸುರಿಯುತ್ತಿರುವ ಮಳೆ ನಿರೀಕ್ಷೆ ಹುಟ್ಟುಹಾಕಿದೆ. ನದಿ ನೀರು ಅವಲಂಬಿಸಿರುವ ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದು, ಟ್ಯಾಂಕರ್‌ಗಳ ಮೂಲಕ ಪೂರೈಕೆ ಆಗುತ್ತಿರುವ ನೀರಿಗೆ ಸಂಚಕಾರ ಎದುರಾಗುವ ಆತಂಕ ಕಂಡು ಬರುತ್ತಿದೆ. ಇದರಿಂದಾಗಿ ಈಗಿನ ಈ ವಾತಾವರಣ ಇನ್ನೊಂಷ್ಟು ದಿನ ಮುಂದವರಿಯಲಿ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.
    ಕಳೆದ ವರ್ಷ ಬೇಸಿಗೆ ಮಳೆ ಮಾತ್ರವಲ್ಲದೆ ಮುಂಗಾರು ಕೂಡ ಜಿಲ್ಲೆಯಲ್ಲಿ ಕೈ ಕೊಟ್ಟಿತ್ತು. ವಾರ್ಷಿಕವಾಗಿ ವಾಡಿಕೆಯ ೨,೭೨೭.೬ ಮಿಮೀ ಮಳೆಯಾಗಬೇಕಿದ್ದಲ್ಲಿ ೧,೬೮೯.೯ ಮಿಮೀ ಮಾತ್ರ ಮಳೆಯಾಗುವುದರ ಮೂಲಕ ಶೇ. ೩೮ರಷ್ಟು ಮಳೆ ಕೊರತೆ ಎದುರಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ೩ ಮಿಮೀ ಮಳೆಯಾಗಬೇಕಿದ್ದಲ್ಲಿ ೧೬ ಮಿಮೀ ಮಳೆಯಾಗಿ ಶೇ. ೧೦೦ರಷ್ಟು ಪ್ರಮಾಣದಲ್ಲಿ ಹೆಚ್ಚಿನ ಮಳೆ ಆಗಿದ್ದರೆ, ಫೆಬ್ರವರಿಯಲ್ಲಿ ೫ ಮಿಮೀ ವಾಡಿಕೆಯ ಮಳೆಯಾಗಬೇಕಿದ್ದಲ್ಲಿ ಮಳೆಯೇ ಬಾರದೇ ಶೇ. ೧೦೦ರಷ್ಟು ಮಳೆಯ ಕೊರತೆ ಆಗಿತ್ತು. ಮಾರ್ಚ್‌ನಲ್ಲಿ ೨೧.೫ ಮಿಮೀ ವಾಡಿಕೆಯ ಮಳೆಯಾಗಬೇಕಿದ್ದಲ್ಲಿ ಕೇವಲ ೨ ಮಿಮೀ ಮಳೆ ಆಗುವ ಮೂಲಕ ಶೇ. ೯೦.೭ರಷ್ಟು ಮಳೆ ಕೊರತೆ ಆಗಿತ್ತು. ಏಪ್ರಿಲ್‌ನಲ್ಲಿ ವಾಡಿಕೆಯ ೮೪ ಮಿಮೀ ಮಳೆಯಾಗಬೇಕಿದ್ದಲ್ಲಿ ೨೭ ಮಿಮೀ ಮಾತ್ರ ಮಳೆಯಾಗಿ ಶೇ. ೬೭.೯ ಮಿಮೀ ಕಡಿಮೆ ಮಳೆ ಬಂದಿತ್ತು. ಮೇನಲ್ಲಿ ೧೩೮.೭ ಮಿಮೀ ಮಳೆಯಾಗಬೇಕಿದ್ದಲ್ಲಿ ೧೨೧.೪ ಮಿಮೀ ಮಳೆಬಂದಿದ್ದರೂ ಶೇ. ೧೨.೫ರಷ್ಟು ಕೊರತೆ ಕಂಡುಬಂದಿತ್ತು. ಈ ವರ್ಷ ಈ ಪರಿಸ್ಥಿತಿ ಬದಲಾಗಿ ಉತ್ತಮ ಮಳೆಯಾಗುವ ಆಶಾಭಾವನೆ ಹೊಂದಲಾಗಿದೆ.

    ಕಳೆದ ಬೇಸಿಗೆಯಲ್ಲಿ ಉಂಟಾಗಿದ್ದ ಮಳೆಯ ಕೊರತೆ ಎಲ್‌ನಿನೋ ಪರಿಣಾಮದಿಂದ ಮುಂಗಾರು ಅವಧಿಯಲ್ಲೂ ಮುಂದುವರಿದಿದ್ದು ಅದರ ದುಷ್ಪರಿಣಾಮ ಈಗ ಕಂಡು ಬರುತ್ತಿದೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲ. ಕೊಳವೆ ಬಾವಿಗಳಲ್ಲಿ ನೀರು ತಳಸೇರಿದೆ. ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡುಬರುತ್ತಿದೆ. ಮಳೆ ಸುರಿಯುವುದರಿಂದ ಇದಕ್ಕೆಲ್ಲಾ ಪರಿಹಾರ ಸಿಗುವುದರ ಜತೆಗೆ ಮಳೆ ಬಂದರೆ ಭೂಮಿ ಹಸಿ ಆಗುವುದರಿಂದ ಕಾಳ್ಗಿಚ್ಚಿನ ಸಾಧ್ಯತೆ ಕಡಿಮೆ ಆಗುತ್ತದೆ. ಕಾಡೊಳಗಿನ ನೀರಿನ ಸೆಲೆಗಳು ತುಂಬಿಕೊಳ್ಳುವುದರಿಂದ ವನ್ಯಜೀವಿಗಳು ನೀರು ಅರಸುತ್ತಾ ಜನವಸತಿ ಪ್ರದೇಶಗಳಿಗೆ ಬಂದು ಹಾನಿ ಮಾಡುವುದೂ ತಪ್ಪುತ್ತದೆ.

    ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಏ.೨೦ ರಿಂದ ಏ.೨೪ರ ತನಕ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಂಭವವಿದೆ. ಗರಿಷ್ಠ ಉಷ್ಣಾಂಶ ೩೪.೬-೩೬.೨ ಡಿ. ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ ೨೧.೮-೨೨.೨ ಡಿ. ಸೆಲ್ಸಿಯಸ್ ತನಕ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ. ೮೨-೯೪ ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ. ೨೯-೪೬೧ ವರೆಗೆ ಇರಲಿದೆ. ಗಾಳಿ ಗಂಟೆಗೆ ೫-೭ ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
    ಡಾ. ಸುಮಂತ್‌ಕುಮಾರ್ ಬಿ.ವಿ., ಸಹಸಂಶೋಧಕ, ಗ್ರಾಮೀಣ್ ಕೃಷಿ ಮೌಸುಮ್ ಸೇವಾ ಕೇಂದ್ರ, ನಾಗೇನಹಳ್ಳಿ

    ಮಳೆ ಇಲ್ಲದ ಕಾರಣ ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲೂ ನೀರಿನ ಸಮಸ್ಯೆ ಆಗಿದೆ. ಕಾವೇರಿ ಇಲ್ಲಿ ಚಿಕ್ಕದಾಗಿ ಹರಿಯುತ್ತಿದ್ದಾಳೆ. ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಈ ಬಾರಿ ಕಂಡು ಬಂದಿದೆ. ಪಕ್ಕದ ಕೇರಳ ನೆನಪಿಸುವ ಸೆಕೆಯೂ ಇಲ್ಲಿತ್ತು. ಹೆಚ್ಚು ಮಳೆ ಬಿಳುವ ಹೆಗ್ಗಳಿಕೆಯ ಭಾಗಮಂಡಲದಲ್ಲೂ ಈ ಬಾರಿ ಮಳೆಯ ಕೊರತೆ ಆಗಿದೆ. ನಾವು ಕೂಡ ದೊಡ್ಡ ಮಳೆಯ ನಿರೀಕ್ಷೆಯಲ್ಲಿ ಇದ್ದೇವೆ.
    ಜೆ.ಬಿ. ರವಿಶಂಕರ್, ಭಾಗಮಂಡಲ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts