More

    ಮುಗಿಲು ಕಡೆ ಮುಖ ಮಾಡಿದ ಜನರು

    ತೇರದಾಳ: ಬಾಯ್ದೆರೆದ ಭೂಮಿಯಲ್ಲಿ ಹನಿ ನೀರು ಹಾಕಲು ತತ್ವಾರ ಅನುಭವಿಸುತ್ತಿರುವ ಅನ್ನದಾತ, ಬಿರುಬಿಸಿಲಿಗೆ ಬತ್ತಿದ ಜಲಮೂಲಗಳು, ಮಳೆ ನಿರೀಕ್ಷೆಯಲ್ಲಿ ಮುಗಿಲೆಡೆಗೆ ಮುಖ ಮಾಡಿ ದಯೆ ತೋರೋ ವರುಣ ಎಂದು ಪ್ರಾರ್ಥಿಸುವ ಸ್ಥಿತಿ ದಿನದಿಂದ ದಿನಕ್ಕೆ ಮುಗಿಲೆತ್ತರಕ್ಕೆ ಏರುತ್ತಿದೆ.

    ಬೆಳಗಾವಿ ಸೇರಿ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ತೇರದಾಳ ಭಾಗದಲ್ಲಿ ಮಳೆ ಆಗದೆ ಇರುವುದರಿಂದ ರೈತ ಸೇರಿ ಈ ಭಾಗದ ಜನರು ಮುಗಿಲೆಡೆಗೆ ಮುಖಮಾಡಿ ಕುಳಿತರೂ ಹನಿ ನೀರು ಬೀಳುತ್ತಿಲ್ಲ. ನೀರಿನ ಮೂಲಗಳನ್ನು ಹುಡುಕುತ್ತ ಹೋದರೆ ಕೃಷ್ಣೆಯ ಒಡಲು ಖಾಲಿಯಾಗಿದೆ. ಬಾವಿಗಳು, ಬೋರ್‌ವೆಲ್‌ಗಳು ಬತ್ತಿವೆ. ಮುಂದೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಈ ಭಾಗದ ಜನತೆ ಮುಳುಗಿದ್ದಾರೆ.

    ಬೆಳೆಗಳಿಗೆ ಕುತ್ತು

    ವಾರ್ಷಿಕ ಬೆಳೆ ಕಬ್ಬು ಜತೆಗೆ ಬೇಸಿಗೆಯಲ್ಲಿ ಗೋವಿನಜೋಳ, ಅರಿಶಿಣ, ತರಕಾರಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅರಿಶಿಣ ಬೆಳೆ ಕೊಯ್ಲು ಈಗಾಗಲೇ ಮುಗಿದಿದೆ. ಇನ್ನುಳಿದ ಬೆಳೆಗಳು ಬಿಸಿಲಿನ ತಾಪಕ್ಕೆ ನಲುಗಿದ್ದು, ಈಗ ನೀರಿನ ಕೊರತೆಯಿಂದ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದೆ. ಈ ಬಾರಿಯ ಬಿಸಿಲು ಮತ್ತು ನೀರಿನ ಕೊರತೆ ಬೆಳೆಗಳಿಗೆ ಉರುಳಾಗಿ ಪರಿಣಮಿಸಿದೆ.

    ನೀರಿನ ಸಮಸ್ಯೆ

    ಅತ್ತ ಕೃಷ್ಣೆಯ ಒಡಲು ಖಾಲಿಯಾಗುತ್ತಿದೆ. ಇದರಿಂದ ಪಟ್ಟಣದಲ್ಲಿ ನೀರು ಪೂರೈಕೆಯಲ್ಲೂ ಕೆಲವೆಡೆ ತೊಂದರೆಯಾಗುತ್ತಿದೆ. ಪಟ್ಟಣದ ಸವದಿನಗರ ಸೇರಿ ಹಲವೆಡೆ ನೀರಿನ ಸಮಸ್ಯೆ ತೀವ್ರಗೊಂಡಿದೆ.

    ಜನಪ್ರತಿನಿಧಿಗಳ ಸುಳ್ಳು ಭರವಸೆ

    ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಸೇರಿ ಹಲವು ಮುಖಂಡರು ಕೃಷ್ಣೆಗೆ ನೀರು ಹರಿಸುವ ಭರವಸೆ ನೀಡುತ್ತ ಬಂದ್ರು ಹೊರತು ಹನಿ ನೀರು ಕೃಷ್ಣೆಗೆ ಹರಿಯದೆ ಇರುವುದು ಕ್ಷೇತ್ರದ ಜನತೆಗೆ ಬೇಸರ ತಂದಿದೆ.

    ಬಾವಿ, ಬೋರ್‌ವೆಲ್ ಸಂಪೂರ್ಣ ಬತ್ತಿವೆ. ಕಬ್ಬು ಬೆಳೆ ಸೇರಿ ವಿವಿಧ ಬೆಳೆಗಳ ನಿರ್ವಹಣೆ ಕಠಿಣವಾಗಿದೆ. ಬಿಸಿಲಿನ ತಾಪಕ್ಕೆ ತರಕಾರಿ ಬೆಳೆ ಕೈಗೆ ಬಾರದೆ ಶೇ.80 ರಷ್ಟು ಹಾನಿಯಾಗಿದೆ.
    -ಧನಪಾಲ ಯಲ್ಲಟ್ಟಿ, ಕೃಷಿ ಪಂಡಿತ ಪುರಸ್ಕೃತ ರೈತ, ಹಳಿಂಗಳಿ
    ತೇರದಾಳ ಪಟ್ಟಣದಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಸರಿಯಾಗಿ ಆಗುತ್ತಿದೆ. ಮುಂದಿನ ಹದಿನೈದು ದಿನಗಳು ಆಗುವಷ್ಟು ನದಿಯಲ್ಲಿ ನೀರು ಇದೆ. ಕಾರಣ ಯಾವುದೇ ಸಮಸ್ಯೆ ಇಲ್ಲ. ನೀರಿನ ಸಮಸ್ಯೆ ಕುರಿತಂತೆ ಯಾವುದೇ ದೂರು ಬಂದಿಲ್ಲ. ಸಮಸ್ಯೆಗಳಿದ್ದರೆ ಗಮನಿಸಲಾಗುವುದು.
    -ಮಾಲಿನಿ, ಮುಖ್ಯಾಧಿಕಾರಿ, ಪುರಸಭೆ ತೇರದಾಳ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts