More

    ವಸ್ತುಗಳಿಗೆ ಮುಗಿಬಿದ್ದ ಜನ

    ಮಂಗಳೂರು: ದ.ಕ ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ಮನೆಯಲ್ಲೇ ಉಳಿಸಿದ್ದ ಸಾರ್ವಜನಿಕರು, ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆಯೇ ಬೀದಿಗಿಳಿದರು. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದ ಕಾರಣ ಮಾರ್ಕೆಟ್, ಅಂಗಡಿ, ಸೂಪರ್ ಮಾರ್ಕೆಟ್‌ಗಳ ಮುಂದೆ ಜನಜಂಗುಳಿ ಕಂಡುಬಂತು. ತರಕಾರಿ, ಮಾಂಸ, ದಿನಸಿ ಅಂಗಡಿಗಳಿಗೆ ಬೆಳಗ್ಗೆಯಿಂದಲೇ ಜನ ಮುಗಿಬಿದ್ದು ಖರೀದಿಸಿದ್ದು, ಸಾರ್ವಜನಿಕ ಅಂತರವನ್ನು ಹಲವೆಡೆ ಉಲ್ಲಂಘಿಸಿದರು.

    ಮಂಗಳೂರು ನಗರದ ಸೂಪರ್ ಮಾರ್ಕೆಟ್, ತರಕಾರಿ ಅಂಗಡಿ, ಮೆಡಿಕಲ್ ಶಾಪ್, ಮಾಂಸದ ಅಂಗಡಿಗಳ ಎದುರು ಮೈಲುದ್ದದ ಸರತಿ ಸಾಲು ಇತ್ತು. ಪೊಲೀಸರು ಹಾಗೂ ಮನಪಾ ಅಧಿಕಾರಿಗಳು ಆಗಮಿಸಿ ಜನ ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸುವಂತೆ ಸೂಚಿಸಿದರು. ಕೆಲವು ಕಡೆ ಅಂಗಡಿ ಮಾಲೀಕರೇ ಸರತಿ ಸಾಲಿನಲ್ಲಿ ಬಂದರೆ ಮಾತ್ರ ಸಾಮಗ್ರಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸರತಿ ಸಾಲಿಗೆ ಕುರ್ಚಿ: ಉರ್ವ ಮಾರ್ಕೆಟ್, ಚಿಲಿಂಬಿ, ಮಲ್ಲಿಕಟ್ಟೆ ಮುಂತಾದ ಕಡೆ ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಹಲವು ಮಂದಿ ಒಂದೇ ಕುರ್ಚಿ ಬಳಸುವ ಕಾರಣ ಸೋಂಕು ಹರಡಬಹುದೆನ್ನುವ ಭೀತಿಯಲ್ಲಿ ಕೆಲವರು ನಿಂತುಕೊಂಡೇ ಸರತಿ ಸಾಲಿನಲ್ಲಿ ಮುಂದುವರಿದರು. ಹಂಪನಕಟ್ಟೆ, ಬಿಜೈ, ಕುದ್ರೋಳಿ, ವೆಲೆನ್ಸಿಯಾ, ಕದ್ರಿ, ಕಾವೂರು, ಪದವಿನಂಗಡಿ, ಬಂದರು, ಕಂಕನಾಡಿ ಮುಂತಾದ ಕಡೆ ಬೆಳಗ್ಗೆ 6 ಗಂಟೆಯಿಂದಲೇ ಜನ ಚೀಲ ಹಿಡಿದುಕೊಂಡು ಅಂಗಡಿಗಳ ಕಡೆಗೆ ಬಂದಿದ್ದಾರೆ. ಅಂಗಡಿಗಳ ಬಾಗಿಲು ತೆರೆಯುವುದರ ಮೊದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಬಹುತೇಕ ಮಂದಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ನಿಂತಿದ್ದರು.

    ಗ್ರಾಮೀಣ ಭಾಗದಲ್ಲೂ ರಶ್: ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಮೂಡುಬಿದಿರೆ ಮುಂತಾದ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಜನ ಅಧಿಕ ಸಂಖ್ಯೆಯಲ್ಲಿ ಖರೀದಿಗೆ ಆಗಮಿಸಿದ್ದರು. ಗ್ರಾಮೀಣ ಭಾಗದ ಅಂಗಡಿಗಳಿಗೆ ಸಾಮಗ್ರಿಗಳು ಪೂರೈಕೆಯಾಗದೆ ಕೆಲವು ಅಂಗಡಿಗಳಲ್ಲಿ ಬೇಗನೆ ಖಾಲಿಯಾಗಿವೆ. ಕೆಲವು ಅಂಗಡಿಗಳಲ್ಲಿ ಸಾರ್ವಜನಿಕರು ಸಾಮಗ್ರಿಗಳ ಚೀಟಿ ಹಾಗೂ ವಿಳಾಸ ವಾಟ್ಸಾಪ್ ಮಾಡಿದರೆ ಮನೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಮಂಗಳೂರು ನಗರದಲ್ಲೂ ಬಹುತೇಕ ತರಕಾರಿ ಅಂಗಡಿಗಳಲ್ಲಿ 9 ಗಂಟೆ ವೇಳೆಗೆ ತರಕಾರಿ, ಹಣ್ಣುಗಳು ಖಾಲಿಯಾಗಿವೆ. ಕೆಲವರು 10-15 ದಿನಗಳಿಗಾಗುವಷ್ಟು ದಿನಸಿಗಳನ್ನು ಖರೀದಿಸಿದ್ದರೆ, ಇನ್ನು ಕೆಲವರು ಸರತಿಯ ಸಾಲು ಕಂಡು ಗಾಬರಿಗೊಂಡು ಅಂಗಡಿ ಮಾಲೀಕರಿಗೆ ಸಾಮಗ್ರಿ ಚೀಟಿ ಹಾಗೂ ಚೀಲ ನೀಡಿ ಸಮಯವಿದ್ದಾಗ ಸಿದ್ಧಪಡಿಸಿ ಇಡಲು ಹೇಳಿ ಹೋಗಿದ್ದಾರೆ.

    ಮಾರ್ಕೆಟ್‌ನಲ್ಲಿ ಜನಸಾಗರ: ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೆಳಗ್ಗೆ ಜನಸಾಗರ. ಚಿಲ್ಲರೆ ವ್ಯಾಪಾರಿಗಳ ಜತೆ ಸಾವಿರಾರು ಮಂದಿ ಸಾರ್ವಜನಿಕರು ತರಕಾರಿ, ದಿನಸಿ ಹಾಗೂ ಮಾಂಸ ಖರೀದಿಗೆ ಸೆಂಟ್ರಲ್ ಮಾರುಕಟ್ಟೆಗೆ ಮುಗಿಬಿದ್ದರು. ಇಲ್ಲಿ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಲು ಜಾಗವೇ ಇರಲಿಲ್ಲ. ಹೆಚ್ಚಿನ ಮಂದಿ ಮಾಸ್ಕ್ ಧರಿಸಿದ್ದರೆ, ಇನ್ನು ಕೆಲವರು ಹಾಗೆಯೇ ಬಂದಿದ್ದರು. ಪೊಲೀಸರು ಆಗಮಿಸಿ ಎಲ್ಲರೂ ಮಾಸ್ಕ್ ಹಾಕಬೇಕು ಮತ್ತು ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸಬೇಕು ಎಂದು ಸೂಚನೆ ನೀಡಿದರು.

    ವಾಹನ ದಟ್ಟಣೆ : ಕಳೆದ 10 ದಿನಗಳಿಂದ ವಾಹನ ಹಾಗೂ ಜನಸಂಚಾರವಿಲ್ಲದೆ ಖಾಲಿಯಾಗಿದ್ದ ಮಂಗಳೂರಿನ ರಸ್ತೆಗಳಲ್ಲಿ ಬೆಳಗ್ಗೆಯಿಂದ ಸಾಯಂಕಾಲದ ತನಕ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಟ ನಡೆಸಿದವು. ಮಲ್ಲಿಕಟ್ಟೆ, ಕಂಕನಾಡಿ, ಬಂದರ್, ಹಂಪನಕಟ್ಟೆ, ಚಿಲಿಂಬಿ, ಕಾವೂರು, ಪದವಿನಂಗಡಿ ಮುಂತಾದ ಕಡೆ ವಾಹನ ದಟ್ಟಣೆ ಉಂಟಾಯಿತು.

    ಮಾಂಸದಂಗಡಿಯಲ್ಲಿ ರಶ್: ಮಾಂಸ ಪ್ರಿಯರು ಬೆಳಗ್ಗೆಯಿಂದಲೇ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದರು. ಕೋಳಿ ಪೂರೈಕೆ ಇಲ್ಲದ ಕಾರಣ, ದರವೂ ದುಪ್ಪಟ್ಟಾಗಿದೆ. ಚಿಕನ್ ಲೈವ್‌ಗೆ 100 ರೂ, ವಿದ್ ಸ್ಕಿನ್‌ಗೆ 170 ಹಾಗೂ ವಿದೌಟ್ ಸ್ಕಿನ್‌ಗೆ 200 ರೂ.ಇತ್ತು. ಮಟನ್ ದರವೂ 600-650 ರೂ.ಗೆ ಏರಿಕೆಯಾಗಿದೆ. ಚಿಕನ್ ಪೂರೈಕೆ ಇಲ್ಲದೆ ಮಧ್ಯಾಹ್ನ ವೇಳೆಗೆ ಅಂಗಡಿಗಳು ಬಂದ್ ಆಗಿವೆ.

    ದುಪ್ಪಟ್ಟು ದರ: ಹಣ್ಣು, ತರಕಾರಿ ದರ ದುಪ್ಪಟ್ಟಾಗಿವೆ. ಕಳೆದ ವಾರ ಕೆ.ಜಿಗೆ 50 ರೂ.ಇದ್ದ ಕಿತ್ತಳೆ ದರ 200 ರೂ. ತಲುಪಿದೆ. ಆ್ಯಪಲ್ ದರ 200 ರೂ, ದ್ರಾಕ್ಷಿ 150 ರೂ, ದಾಳಿಂಬೆ 200 ರೂ, ಕಲ್ಲಂಗಡಿ 50 ರೂ, ಬಸಳೆ 50 ರೂ, ಕ್ಯಾಬೇಜ್ 40 ರೂ, ಟೊಮ್ಯಾಟೊ 30 ರೂ, ನೀರುಳ್ಳಿ 50 ರೂ. ದರದಲ್ಲಿ ಮಾರಾಟವಾಗಿದೆ. ದುಪ್ಪಟ್ಟು ದರ ಇದ್ದರೂ ಜನರು ಆ ಬಗ್ಗೆ ಚಿಂತಿಸದೆ ಖರೀದಿ ಮಾಡುತ್ತಿರುವುದು ಕಂಡುಬಂತು.

    ತಂಬಾಕು, ಸಿಗರೇಟ್‌ಖರೀದಿ: ಕಳೆದ ಮೂರು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಆದ ಪರಿಣಾಮ ತಂಬಾಕು, ಗುಟ್ಖಾ, ಬೀಡಿ, ಸಿಗರೇಟ್ ಸಿಗದೆ ವ್ಯಸನಿಗಳು ಚಡಪಡಿಸುತ್ತಿದ್ದರು. ಮಂಗಳವಾರ ಅಂಗಡಿಗಳು ತೆರೆದುಕೊಳ್ಳುತ್ತಿದ್ದಂತೆ ಗುಟ್ಖಾ, ತಂಬಾಕು ಮೊದಲಾದ ಉತ್ಪನ್ನಗಳನ್ನು ಇನ್ನೂ ಕೆಲವು ದಿನಗಳಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಖರೀದಿಸಿದ್ದಾರೆ. 20-25 ಕಿ.ಮೀ. ದೂರದಿಂದ ಸೆಂಟ್ರಲ್ ಮಾರುಕಟ್ಟೆಗೆ ಆಗಮಿಸಿ ಖರೀದಿ ಮಾಡಿ ತೆರಳಿದವರಿದ್ದಾರೆ.

    ಧ್ವನಿ ವರ್ಧಕದಲ್ಲಿ ಎಚ್ಚರಿಕೆ : ಪೊಲೀಸರು ಹಾಗೂ ಮನಪಾ ಕಾರ್ಯಪಡೆಯ ಅಧಿಕಾರಿಗಳು ನಗರದ ಎಲ್ಲ ಕಡೆಗಳಲ್ಲಿ ಗಸ್ತು ತಿರುಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿದರು. ಕೆಲವು ಕಡೆಗಳಲ್ಲಿ ಮುಗಿಬಿದ್ದವರನ್ನು ಎಚ್ಚರಿಕೆ ನೀಡಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು. ರಾಮಕೃಷ್ಣ ಮಿಶನ್‌ನ ಸ್ವಯಂಸೇವಕರು ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts