More

    ದಿನಸಿ ವಸ್ತು ಖರೀದಿಗೆ ಮುಗಿಬಿದ್ದ ಜನ

    ಗದಗ: ಜಿಲ್ಲೆಯಲ್ಲಿ ಮೇ 27ರ ಬೆಳಗ್ಗೆ 10 ಗಂಟೆಯಿಂದ ಜೂ.1ರವರೆಗೆ ಐದು ದಿನಗಳ ಕಾಲ ವಿಧಿಸಿರುವ ಕಠಿಣ ಲಾಕ್​ಡೌನ್ ಘೊಷಣೆ ಹಿನ್ನೆಲೆಯಲ್ಲಿ ಬುಧವಾರ ಜನರು ದಿನಸಿ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು. ಬುಧವಾರ ಮತ್ತು ಗುರುವಾರ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಜನರು ಕಿರಾಣಿ ಅಂಗಡಿಗಳು, ದಿನಸಿ ಮಾರ್ಟ್​ಗಳು, ಬೇಕರಿ ಇತ್ಯಾದಿ ಅಂಗಡಿಗಳ ಮುಂದೆ ಜನಜಾತ್ರೆಯೇ ಸೇರಿತ್ತು. ಸರದಿಯಲ್ಲಿ ನಿಂತು ಜನರು ದಿನಸಿ ವಸ್ತುಗಳನ್ನು ಖರೀದಿಸಿದರು. ಆದರೆ, ಏಕಕಾಲಕ್ಕೆ ಜನರು ಅಂಗಡಿಗಳಿಗೆ ಅಗಮಿಸಿದ್ದರಿಂದ ಅಂಗಡಿಗಳ ಮಾಲೀಕರು ಗ್ರಾಹಕರನ್ನು ನಿಭಾಯಿಸುವುದೇ ಕಷ್ಟವಾಗಿತ್ತು.

    ಐದು ದಿನಗಳ ಸಂಪೂರ್ಣ ಲಾಕ್​ಡೌನ್ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯಲ್ಲಿ ಮದ್ಯ ಖರೀದಿ ಭರಾಟೆ ಜೋರಾಗಿತ್ತು. ಸಂಪೂರ್ಣ ಲಾಕ್​ಡೌನ್ ಘೊಷಣೆ ವಿಷಯ ಗೊತ್ತಾದ ಕೂಡಲೇ ಮದ್ಯಪ್ರಿಯರು ಬೆಳಗಾಗುವುದನ್ನೇ ಕಾಯುತ್ತಿದ್ದರು. ಬೆಳಗ್ಗೆ 6 ಗಂಟೆಗೆ ಮದ್ಯಕ್ಕಾಗಿ ಬಾರ್ ಮತ್ತು ವೈನ್​ಶಾಪ್​ಗಳ ಮುಂದೆ ಜನರು ಸರದಿಯಲ್ಲಿ ನಿಂತಿದ್ದು ವಿಶೇಷವಾಗಿತ್ತು. ಕೆಲವರು ಮರ್ಯಾದೆಗೆ ಅಂಜಿ ಆತ್ಮೀಯರು, ಮಕ್ಕಳು, ಸ್ನೇಹಿತರ ಕೈಗೆ ಹಣ ಕೊಟ್ಟು ಮದ್ಯ ತರಿಸಿಕೊಂಡು ಸಂಭ್ರಮಿಸಿದರು.

    ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಈಗಾಗಲೇ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿ ಇರುವುದರಿಂದ ಅಲ್ಲಿಂದಲೂ ಜನರು ಆಗಮಿಸಿ ಮದ್ಯ ಖರೀದಿಸಿದರು.

    ಪರಸ್ಪರ ಅಂತರ ಮರೆತು ವ್ಯಾಪಾರ

    ಗದಗ ನಗರದ ಎಪಿಎಂಸಿ ಮಾರುಕಟ್ಟೆ ಬುಧವಾರ ಜನಜಾತ್ರೆಯಂತಾಗಿತ್ತು. ಗುರುವಾರದಿಂದ ಐದು ದಿನ ಕಠಿಣ ಲಾಕ್​ಡೌನ್ ಇರುವುದರಿಂದ ಜನರು ಕರೊನಾ ಲೆಕ್ಕಿಸದೆ ತರಕಾರಿ ಖರೀದಿ ಮಾಡುತ್ತಿದ್ದುದು ಕಂಡುಬಂದಿತು. ತರಕಾರಿ ವ್ಯಾಪಾರಸ್ಥರು, ಗ್ರಾಹಕರು, ದಲಾಲಿಗಳು ಪರಸ್ಪರ ಅಂತರ ಮರೆತು ವ್ಯಾಪಾರ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts