More

    ನಮ್ಮ ಬೇಡಿಕೆಗೆ ಬೆಲೆ ಇಲ್ಲವಾದರೆ ನಾವು ಇಲ್ಲಿ ಇದ್ದೇನು ಪ್ರಯೋಜನ?

    ಕಡಬ: ಗ್ರಾಮ ಪಂಚಾಯಿತಿಯಿಂದ ರಸ್ತೆ ದುರಸ್ತಿಯ ಭರವಸೆ ನೀಡಿದರೂ ಸರಿಪಡಿಸಿಲ್ಲ. ನಮ್ಮ ಬೇಡಿಕೆಗೆ ಪರಿಹಾರ ಸಿಗುವುದಿಲ್ಲ ಎಂದಾದರೆ ನಾವಿಲ್ಲಿ ಇದ್ದು ಏನು ಪ್ರಯೋಜನ? ಎಂದು ಪ್ರಶ್ನಿಸಿ ಬಹುತೇಕ ಗ್ರಾಮಸ್ಥರು ಮಂಗಳವಾರ ಐತ್ತೂರು ಗ್ರಾಮಸಭೆ ಬಹಿಷ್ಕರಿಸಿ ಹೊರನಡೆದರು.
    ಅಧ್ಯಕ್ಷೆ ಶ್ಯಾಮಲಾ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಆಯೋಜಿಸಲಾಗಿತ್ತು. ಗ್ರಾಮಸ್ಥರಾದ ಸುರೇಶ್, ಗಣೇಶ್ ಮತ್ತಿತರರು ಮಾತನಾಡಿ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಜನ ಕಡಿಮೆ ಇರುವಾಗ ಸಭೆ ಯಾಕೆ ಎಂದು ಪ್ರಶ್ನಿಸಿದರು. ಪಿಡಿಒ ಸುಜಾತಾ ಪ್ರತಿಕ್ರಿಯಿಸಿ ಸಭೆ ಬಗ್ಗೆ ಮೊದಲೇ ಪ್ರಚಾರ ಮಾಡಲಾಗಿದೆ ಎಂದರು.
    ನೆಲ್ಲಿಕಟ್ಟೆ-ಓಟೆಕಜೆ ರಸ್ತೆ ದುರಸ್ತಿ ಭರವಸೆ ನೀಡಿದ್ದರೂ ಸರಿಪಡಿಸಿಲ್ಲ ಎಂದು ಗ್ರಾಮಸ್ಥ ಸುರೇಶ್ ಗಮನ ಸೆಳೆದಾಗ ಗಣೇಶ್ ಧ್ವನಿಗೂಡಿಸಿದರು. ಪಿಡಿಒ ಸುಜಾತಾ ಪ್ರತಿಕ್ರಿಯಿಸಿ, ವಾರ್ಡ್ ಸಭೆ ಬಳಿಕ ಮೂರು ದಿನ ಮಳೆ ಇದ್ದ ಕಾರಣ ರಸ್ತೆ ದುರಸ್ತಿ ಆಗಿಲ್ಲ, ಮಳೆ ಕಡಿಮೆ ಆದ ಮೇಲೆ ಕೆಲಸ ಮಾಡಬೇಕಷ್ಟೇ ಎಂದರು. ಇದರಿಂದ ತೃಪ್ತರಾಗದ 20ಕ್ಕೂ ಹೆಚ್ಚು ಗ್ರಾಮಸ್ಥರು ಸಭೆಯಿಂದ ಹೊರ ನಡೆದರು. ಆಗ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರೋಹಿತ್ ಎಸ್, ಗ್ರಾಮಸ್ಥರಿಗೆ ಸಮಯ ಕೊಡಿ, ಅವರ ಸಮಸ್ಯೆ ಸರಿಪಡಿಸದೆ ನಾವು ಸಭೆ ಮಾಡಿ ಏನು ಪ್ರಯೋಜನ ಎಂದರು.
    ಚರ್ಚಾ ನಿಯಂತ್ರಣಾಧಿಕಾರಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೃಷ್ಣ ಬಿ ಮಾತನಾಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಲಿದ್ದು ಹೊರಗಿರುವ ಎಲ್ಲ ಗ್ರಾಮಸ್ಥರು ಸಭೆಗೆ ಬರುವಂತೆ ವಿನಂತಿಸಿದರೂ, ಗ್ರಾಮಸ್ಥರು ಬರಲು ನಿರಾಕರಿಸಿದರು. ಜತೆಗೆ ಗ್ರಾಪಂ ಉಪಾಧ್ಯಕ್ಷ ರೋಹಿತ್ ಎಸ್ ಸಹಿತ ನಾಲ್ವರು ಗ್ರಾಪಂ ಸದಸ್ಯರೂ ಸಭೆಯಿಂದ ಹೊರನಡೆದರು. ಇದಕ್ಕೂ ಮೊದಲು ಐತ್ತೂರು ಗ್ರಾಪಂನಿಂದ ವರ್ಗಾವಣೆಗೊಂಡಿರುವ ಗ್ರಾಪಂ ಕಾರ್ಯದರ್ಶಿ ರಮೇಶ್ ಆಚಾರ್ಯ ಅವರನ್ನು ಬೀಳ್ಕೊಡಲಾಯಿತು.

    ಗದ್ದಲ…ಗೊಂದಲ...: ಸಭೆಯುದ್ದಕ್ಕೂ ಸಾರ್ವಜನಿಕರು ರಸ್ತೆ ವಿಚಾರ ಪ್ರಸ್ತಾಪಿಸಿ ಗ್ರಾಮ ಪಂಚಾಯಿತಿ ಆಡಳಿತ, ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಕಡಬ ಎಸೈ ಆಂಜನೇಯ ರೆಡ್ಡಿ ಮಧ್ಯ ಪ್ರವೇಶಿಸಿ ಗ್ರಾಮಸ್ಥರ ಮನವೊಲಿಕೆ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts