More

    ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ಜನ

    ಹಾನಗಲ್ಲ: ನೈರ್ಮಲ್ಯ ಕಾಪಾಡುವಲ್ಲಿ ತಮ್ಮೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಿಗೆ ಪುರಸಭೆ ಮನವಿ ಮಾಡುತ್ತದೆ. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಹಾಕುವಂತೆ ಸಲಹೆ ಮಾಡುತ್ತದೆ. ಆದರೆ, ಬಡಾವಣೆಗಳಿಗೆ ಕಸ ಸಂಗ್ರಹಣೆಗೆ ಸರಿಯಾಗಿ ವಾಹನಗಳನ್ನು ಕಳುಹಿಸುತ್ತಿಲ್ಲ ಎಂಬ ದೂರು ನಾಗರಿಕರಿಂದ ಕೇಳಿಬರುತ್ತಿದೆ.
    ಪಟ್ಟಣದಲ್ಲಿ ಹತ್ತಾರು ಹೊಸ ಬಡಾವಣೆಗಳು ನಿರ್ಮಾಣಗೊಂಡಿವೆ. ಜನವಸತಿ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ತ್ಯಾಜ್ಯವೂ ಹೆಚ್ಚೆಚ್ಚು ಹೊರ ಹೊಮ್ಮುತ್ತಿದೆ. ಇದನ್ನು ನಿರ್ವಹಿಸುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎನ್ನಲಾಗಿದೆ.
    ಪುರಸಭೆ ಪ್ರತಿ ಮನೆಗೆ ಎರಡು ಬಕೆಟ್‌ಗಳನ್ನು ನೀಡಿದ್ದು, ಇವುಗಳಲ್ಲಿ ಕಸಗಳನ್ನು ಬೇರ್ಪಡಿಸಿ ಕಸದ ವಾಹನಕ್ಕೆ ನೀಡುವಂತೆ ಕಳೆದ 2 ವರ್ಷದ ಹಿಂದಿನಿಂದಲೂ ಒತ್ತಡ ಹೇರುತ್ತಿದೆ. ಆದರೆ, ಒಂದು ವಾರವಾದರೂ ಕಸದ ವಾಹನ, ಪೌರ ಕಾರ್ಮಿಕರು ಬಂದು ಕಸ ಪಡೆದುಕೊಳ್ಳುವುದಿಲ್ಲ. ಬಕೆಟ್‌ಗಳಲ್ಲಿ ತುಂಬಿಟ್ಟ ಕಸದಿಂದ ದುರ್ವಾಸನೆ ಹರಡುತ್ತದೆ. ಹೀಗಾಗಿ, ಸಾರ್ವಜನಿಕರು ಬಡಾವಣೆಯ ಖಾಲಿ ಸ್ಥಳಗಳಲ್ಲಿ ಕಸ ಎಸೆಯುತ್ತಿದ್ದಾರೆ.
    ಚಿಕನ್ ಅಂಗಡಿಗಳವರು ಮಾಂಸದ ತ್ಯಾಜ್ಯವನ್ನು ಬಡಾವಣೆಗಳ ಹೊರಭಾಗದಲ್ಲಿ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಗಾಳಿ ಬೀಸಿದರೆ ತ್ಯಾಜ್ಯದ ದುರ್ವಾಸನೆ ಬಡಾವಣೆಗಳಿಗೆ ಹರಡುತ್ತಿದೆ. ಪುರಸಭೆಯಲ್ಲಿ ವಾಹನಗಳ ಕೊರತೆಯೋ, ಚಾಲಕರ ಸಮಸ್ಯೆಯೋ, ನಿರ್ವಹಣೆಯ ಸಮಸ್ಯೆಯೋ ಸಾರ್ವಜನಿಕರಿಗೆ ತಿಳಿಯದಂತಾಗಿದೆ.
    ಕಸದಿಂದ ಬೇಸತ್ತ ನಿವಾಸಿಗಳು ಪುರಸಭೆಗೆ ದೂರು ಸಲ್ಲಿಸಿದಾಗ ಮಾತ್ರ ಎರಡು ದಿನ ಎಲ್ಲವೂ ಸರಿಯಾಗಿರುತ್ತದೆ. ನಂತರ ಮತ್ತೆ ಅದೇ ರಾಗ-ಅದೇ ಹಾಡು ಎಂಬಂಥ ಪರಿಸ್ಥಿತಿ. ಇದಕ್ಕೆಲ್ಲ ಯಾವಾಗ ಪರಿಹಾರ ದೊರೆಯುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
    ಪಟ್ಟಣದ ಹುಬ್ಬಳ್ಳಿ-ಶಿವಮೊಗ್ಗ ರಸ್ತೆ ಹಾಗೂ ರಂಜನಿ ಚಿತ್ರಮಂದಿರದಿಂದ ತಹಸೀಲ್ದಾರ್ ಕಚೇರಿವರೆಗಿನ ಮುಖ್ಯರಸ್ತೆಯಲ್ಲಿ ಮಾತ್ರ ಪೌರ ಕಾರ್ಮಿಕರು ಕಸ ಗುಡಿಸುತ್ತಾರೆ. ಇದನ್ನು ಹೊರತುಪಡಿಸಿ ಬೇರಾವುದೇ ಬಡಾವಣೆಗಳಲ್ಲಿ ಕಸ ಗುಡಿಸುವ ವ್ಯವಸ್ಥೆಯೇ ಇಲ್ಲವಾಗಿದೆ. ಇದರ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ಪೌರ ಕಾರ್ಮಿಕರ ಕೊರತೆ ಮುಂದಿಡುತ್ತಾರೆ. ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರನ್ನು ವ್ಯವಸ್ಥೆಗೊಳಿಸಬೇಕಾದ ಪುರಸಭೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಕಸದ ಸಮಸ್ಯೆ ಪರಿಹಾರಕ್ಕೆ ಪುರಪಿತೃಗಳು ವಿಶೇಷ ಗಮನ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಪುರಸಭೆ ವ್ಯಾಪ್ತಿಯಲ್ಲಿ ಕನಿಷ್ಠ 2 ದಿನಕ್ಕೊಮ್ಮೆಯಾದರೂ ಕಸ ವಿಲೇವಾರಿ ವಾಹನದ ವ್ಯವಸ್ಥೆಯಾಗಬೇಕಿದೆ. ವಾಹನ ಬಾರದಿರುವುದರಿಂದ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಗಟಾರಕ್ಕೆ ಕಸ ಸುರಿದು ಹೋಗುತ್ತಿದ್ದಾರೆ. ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವ್ಯವಸ್ಥೆ ಸರಿಯಾಗುತ್ತಿಲ್ಲ. ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ಪುರಸಭೆ ಎದುರು ಧರಣಿ ಕೂರಬೇಕಾಗುತ್ತದೆ.
    I ನೂರಅಹ್ಮದ್ ಜಡೆ
    ವಿಜಯನಗರ ಬಡಾವಣೆ ನಿವಾಸಿ ಹಾನಗಲ್ಲ

    ಪುರಸಭೆಯಲ್ಲಿ ವಾಹನ ಹಾಗೂ ಪೌರಕಾರ್ಮಿಕರ ಕೊರತೆಯಿಲ್ಲ. ಕಸ ಸಂಗ್ರಹಣೆಗೆ ಆರು ವಾಹನಗಳಿವೆ. ಚುನಾವಣೆ ಕಾರ್ಯದ ಮಧ್ಯೆ ಕಳೆದ ಒಂದೂವರೆ ತಿಂಗಳಿನಲ್ಲಿ ಕಸ ವಿಲೇವಾರಿ, ನಿರ್ವಹಣೆ ಅಸ್ತವ್ಯಸ್ತವಾಗಿತ್ತು. ಇನ್ನು ಮುಂದೆ ಸರಿ ಹೋಗುತ್ತದೆ. ಪ್ರತಿ ವಾರ್ಡಗಳಿಗೂ ಕಸ ಸಂಗ್ರಹಣೆ ವಾಹನದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
    I ಪಿ.ಕೆ. ಗುಡದಾರಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts