More

    ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಜೆ.ಸಿ.ಮಾಧುಸ್ವಾಮಿ

    ತುಮಕೂರು : ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಿಂದ ಬರದ ನಾಡಿಗೆ ನೀರು ಬರಲಿದೆ ಎಂಬ ಕನಸು ಇಟ್ಟುಕೊಂಡು ಪರಿಹಾರ ಬರುವ ಮೊದಲೇ ಕಾಮಗಾರಿ ನಡೆಸಲು ಭೂಮಿ ಬಿಟ್ಟುಕೊಟ್ಟಿರುವ ರೈತರಿಗೆ ಬಾಕಿ ಹಣ ಕಡೆಗೂ ಬಿಡುಗಡೆಯಾಗಿದೆ.

    ಚಿಕ್ಕನಾಯಕಹಳ್ಳಿ ತಾಲೂಕಿನಲ್ಲಿ ಹೇಮಾವತಿ ನಾಲೆಗೆ 199.37 ಎಕರೆ ಭೂಸ್ವಾಧೀನವಾಗಿದ್ದು, ಈವರೆಗೂ ಪೂರ್ಣ ಪರಿಹಾರ ನೀಡಿರಲಿಲ್ಲ. ಇದೀಗ ಭೂಮಿ ನೀಡಿದ್ದ ರೈತರ ಬಾಕಿ ಪರಿಹಾರ ಹಣ 8.63 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇತ್ತೀಚೆಗೆ ತುಮಕೂರಿನಲ್ಲಿ ನಡೆದ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪರಿಹಾರ ವಿತರಣೆಗೆ ಹಣ ಬಿಡುಗಡೆಯಾಗಬೇಕು ಎಂದು ಸೂಚಿಸಿದ್ದರು.

    ಮಾ.17, ಮಾ.26 ಎರಡು ಕಂತುಗಳಲ್ಲಿ 8.63 ಕೋಟಿ ರೂ. ಬಿಡುಗಡೆಯಾಗಿದ್ದು, ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಹಾಗಾಗಿ, ಎತ್ತಿನಹೊಳೆ ಕಾಮಗಾರಿಗೂ ಹಣ ಪಡೆಯದೆ ಮುಂಗಡವಾಗಿಯೇ ಭೂಮಿ ನೀಡಿರುವ ರೈತರಿಗೆ ಪರಿಹಾರ ಹಣ ಬರಬೇಕಿದ್ದು ರೈತರಿಗೆ ಆಶಾಭಾವನೆ ಮೂಡಿದೆ.

    ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು, ಗೋಪಾಲನಹಳ್ಳಿಯಲ್ಲಿ 22.1 ಎಕರೆ ಭೂಮಿಗೆ ಬಾಕಿ ಇದ್ದ 13.88 ಲಕ್ಷ ರೂ., ಗ್ಯಾರೆಹಳ್ಳಿ, ಅಗಸರಹಳ್ಳಿಯ 44.11 ಎಕರೆಗೆ 72.75 ಲಕ್ಷ ರೂ., ನಡುವನಹಳ್ಳಿ, ಜೆ.ಸಿ.ಪುರ, ಹಾಲುಗೋಣ, ಭೈರಗಾನಹಳ್ಳಿ, ಕೃಷ್ಣಾಪುರದ 3.31 ಎಕರೆಗೆ 19.18ಲಕ್ಷ ರೂ., ತಿಗಳನಹಳ್ಳಿ, ಪೆಮ್ಮಲದೇವರಹಳ್ಳಿ, ಸಾಸಲು 63.05 ಎಕರೆಗೆ 98.17 ಲಕ್ಷ ರೂ. ಬಾಕಿ ಪರಿಹಾರ ತಡವಾಗಿ ಬಿಡುಗಡೆಯಾಗಿದೆ.

    ಕಾಗೇಹಳ್ಳಿ ಕಾವಲ್ 3.03 ಎಕರೆಗೆ 52.17 ಲಕ್ಷ ರೂ., ದಬ್ಬೇಘಟ್ಟ, ಕಾಡೇನಹಳ್ಳಿ, ಕೊದ್ಲಾಗಾರ, ಬ್ಯಾಟರಂಗನಹಳ್ಳಿಯ 48.35 ಎಕರೆಗೆ 3.47ಕೋಟಿ ರೂ. ಹಾಗೂ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ, ಹಟ್ನಾ, ಬದನೇಕಟ್ಟೆ, ಕುಂದೂರು, ಕಟ್ಟಿಗೆಹಳ್ಳಿಯ 3.15 ಎಕರೆಗೆ 54.76 ಲಕ್ಷ ರೂ. ಮತ್ತು ತಿಗಳನಹಳ್ಳಿ, ಲಕ್ವಗೊಂಡನಹಳ್ಳಿ, ಬಿಳಿಗೆರೆಯ 11.14 ಎಕರೆಗೆ 2.05ಕೋಟಿ ರೂ. ಪರಿಹಾರದ ಹಣ ಬಿಡುಗಡೆಯಾಗಿದೆ.

    ರೈತರ ತ್ಯಾಗ ಸ್ಮರಣಾರ್ಹ : 25 ಗ್ರಾಮಗಳ 199.37 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ನೀರಾವರಿ ಯೋಜನೆಗೆ ಪರಿಹಾರ ನೀಡುವ ಮೊದಲೇ ಸರ್ಕಾರ ವಶಪಡಿಸಿಕೊಂಡಿತ್ತು. ಸ್ಥಳೀಯ ಜನಪ್ರತಿನಿಧಿಗಳ ಮಾತಿನ ಮೇಲಿನ ಭರವಸೆ ಹಾಗೂ ತಾಲೂಕಿಗೆ ನೀರು ಬರಲಿ ಎಂಬ ಸದುದ್ದೇಶದಿಂದ ಹಣಕ್ಕೆ ಕಾಯದೆ ಕಾಮಗಾರಿಗೆ ರೈತರು ಅವಕಾಶ ನೀಡಿದ್ದರು. 24.75ಕೋಟಿ ರೂ. ಪರಿಹಾರ ಮೊತ್ತ ರೈತರಿಗೆ ಸರ್ಕಾರದಿಂದ ಬರಬೇಕಿತ್ತು. ಈ ಹಿಂದೆ 16.11ಕೋಟಿ ರೂ. ಮಾತ್ರ ವಿವಿಧ ಕಂತುಗಳಲ್ಲಿ ಬಿಡುಗಡೆಯಾಗಿತ್ತು, ಈಗ ಬಾಕಿ ಇದ್ದ ಎಲ್ಲ ಹಣ ಬಂದಿರುವುದು ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೂ ಆರ್ಥಿಕವಾಗಿ ಸಹಾಯಕವಾಗಲಿದೆ.

    ನೀರಾವರಿ ಯೋಜನೆ ಅನುಷ್ಠಾನದಲ್ಲಿ ಭೂಮಿ ನೀಡಿದ ರೈತರ ತ್ಯಾಗವಿದೆ. ನನ್ನ ಮೇಲೆ ಭರವಸೆಯಿಟ್ಟು ತಾಲೂಕಿಗೆ ನೀರು ಬರಲಿ ಎಂಬ ಉದ್ದೇಶದಿಂದ ಭೂಮಿ ಬಿಟ್ಟುಕೊಟ್ಟಿದ್ದ ರೈತರಿಗೆ ನಾವು ಋಣಿಯಾಗಿರಬೇಕು. ಕರೊನಾ ಸಂಕಷ್ಟದಲ್ಲಿ ಆರ್ಥಿಕ ಸಮಸ್ಯೆಗಳ ನಡುವೆಯೂ ರೈತರಿಗೆ ಪೂರ್ಣ ಪರಿಹಾರ ಬಿಡುಗಡೆ ಮಾಡಿರುವುದು ಮಂತ್ರಿಯಾಗಿ ನನಗೂ ತೃಪ್ತಿ ನೀಡಿದೆ.
    ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts