More

    ನೀರು ಪೋಲು ಮಾಡಿದರೆ 500ರಿಂದ 5000 ರೂ. ದಂಡ

    ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ನೀರು ಪೋಲು ಮಾಡಿದರೆ ದಂಡ ಹಾಕುವುದಾಗಿ ಜನರಿಗೆ ಮಾಹಿತಿ ರವಾನಿಸಿದೆ.
    ಈ ವರ್ಷ ತಾಪಮಾನ ಹೆಚ್ಚಿದ್ದು ಕೆಲವೆಡೆ ನೀರಿನ ಸಮಸ್ಯೆ ಶುರುವಾಗಿದೆ. ಮುಂದೆ ಕಠಿಣ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಯಾರಾದರೂ ನೀರು ಪೋಲು ಮಾಡುವುದು ಕಂಡುಬಂದಲ್ಲಿ ಅಂಥ ಮನೆಗಳ ಪೈಪ್ ಸಂಪರ್ಕ ಶಾಶ್ವತವಾಗಿ ಕಡಿತಗೊಳಿಸಿ, 500ರಿಂದ 5000 ರೂ. ತನಕ ದಂಡ ವಿಧಿಸುವುದಾಗಿ ಆಡಳಿತಾಧಿಕಾರಿ ಮದನ್ ಮೋಹನ್ ಮತ್ತು ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಎಚ್ಚರಿಕೆ ರವಾನಿಸಿದ್ದಾರೆ.

    ನೀರಿಗೆ ಪರದಾಟ ತಪ್ಪಿಲ್ಲ: ರಾಜ್ಯದ ಅತಿದೊಡ್ಡ ಗ್ರಾಮವಾಗಿದ್ದ ಸೋಮೇಶ್ವರ ಈಗ ಪುರಸಭೆಯಾಗಿದೆ. 25 ಸಾವಿರಕ್ಕೂ ಅಧಿಕ ಜನಸಂಖ್ಯೆ ಈ ವ್ಯಾಪ್ತಿಯಲ್ಲಿದೆ. ಕಡಲು ಹತ್ತಿರವಿದ್ದು ಎಲ್ಲ ಋತುವಿನಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದ್ದರೂ ಕುಡಿಯುವ ನೀರಿಗೆ ಪರದಾಟ ತಪ್ಪಿಲ್ಲ. ಏಳು ಸರ್ಕಾರಿ ತೆರೆದ ಬಾವಿ, 27 ಕೊಳವೆಬಾವಿ, 21 ಕಿರು ನೀರಾವರಿ ಯೋಜನೆಗಳಿದ್ದರೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. 2,500 ಕುಟುಂಬ ಪುರಸಭೆ ಪೈಪ್‌ಲೈನ್ ನಂಬಿಕೊಂಡೇ ಜೀವನ ಸಾಗಿಸುತ್ತಿದೆ.

    ಉಚ್ಚಿಲ, ಬೆಟ್ಟಂಪಾಡಿಯ ಜನ ತೆರೆದ ಬಾವಿಯ ನೀರನ್ನೇ ಉಪಯೋಗಿಸುತ್ತಿರುವುದರಿಂದ ಪೈಪ್‌ಲೈನ್ ಅಳವಡಿಸಿಕೊಂಡಿಲ್ಲ. ಆದರೆ ಇಲ್ಲಿ ಉಪ್ಪು ನೀರಿನ ಸಮಸ್ಯೆ ಆರಂಭಗೊಂಡಿದೆ. ಇದೇ ವೇಳೆ ಕಾಟುಂಗೆರೆ ಗುಡ್ಡೆಯಲ್ಲಿ ನೀರು ಬತ್ತುತ್ತಿದೆ. ಇವೆಲ್ಲವನ್ನೂ ಗಮನಿಸಿರುವ ಪುರಸಭೆ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಿದೆ. ಅದಕ್ಕಿಂತ ಮೊದಲು ನೀರು ದುರುಪಯೋಗ ತಡೆಗೂ ಕಟ್ಟಪ್ಪಣೆ ಹೊರಡಿಸಿದೆ.

    ಪೈಪ್‌ಲೈನ್ ನಂಬಿದವರಿಗೆ ಟೆನ್ಷನ್!: ನೀರಿನ ಸಮಸ್ಯೆ ಎದುರಾದಾಗ ಜನ ದಿನಬಳಕೆ ಮತ್ತು ಕುಡಿಯಲು ಸಾಕಾಗುವಷ್ಟು ನೀರು ಸಿಕ್ಕರೆ ಸಾಕೆನ್ನುತ್ತಾರೆ. ಅದರ ನಡುವೆಯೂ ಗಿಡ, ವಾಹನ ತೊಳೆಯಲು ಬಳಸುವವರೂ ಇದ್ದಾರೆ. ಇದಕ್ಕೂ ಕಡಿವಾಣ ಹಾಕಲು ಪುರಸಭೆ ಮುಂದಾಗಿದ್ದು, ಮನೆಯಂಗಳ, ಕೈತೋಟ, ಅಂಗಡಿ ಮಳಿಗೆ, ವಾಹನ ತೊಳೆಯಲು ನೀರು ಪೋಲು ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ.

    ಸದ್ಯಕ್ಕೆ ನೀರಿನ ಸಮಸ್ಯೆ ಆರಂಭವಾಗಿಲ್ಲವಾದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು. ಬೇಸಿಗೆಯಲ್ಲಿ ನೀರಿನ ಅಭಾವವಿದ್ದರೂ ಕೆಲವೊಮ್ಮೆ ಟ್ಯಾಂಕರ್ ನೀರನ್ನೂ ಪೋಲು ಮಾಡುವವರು ಇದ್ದಾರೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸುವ ತೀರ್ಮಾನ ಕೈಗೊಳ್ಳಲಾಗಿದೆ.
    ವಾಣಿ ವಿ.ಆಳ್ವ ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ

    ಕುಡಿಯುವ ನೀರಿಗೆ ಹೆಚ್ಚಿನ ಕಡೆ ಜನ ಸ್ಥಳೀಯಾಡಳಿತಗಳಿಗೆ ಮನವಿ ಮಾಡುವುದು, ಪ್ರತಿಭಟನೆ ಸಾಮಾನ್ಯ ಎನಿಸಿದೆ. ಆದರೆ ಸರ್ಕಾರದ ನಿಯಮದಂತೆ ಕುಟುಂಬವೊಂದಕ್ಕೆ ಅಗತ್ಯವಿರುವಷ್ಟು ನೀರು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರು ದುರುಪಯೋಗಪಡಿಸುತ್ತಾರೆ. ಇಂಥವರಿಗೆ ತಕ್ಷಣಕ್ಕೆ ದಂಡ ವಿಧಿಸುವ ಮೊದಲು ಎಚ್ಚರಿಕೆ ನೀಡಬೇಕು.
    ಸಲಾಂ ಉಚ್ಚಿಲ್ ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts