More

    ದಂಡದ ಆದಾಯಕ್ಕೆ ಕೋವಿಡ್ ಕೊಕ್ಕೆ

    ಬೆಳಗಾವಿ: ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಪ್ರಮಾಣ ಹೆಚ್ಚಳವಾದಾಗ ಭಾರಿ ಸುದ್ದಿಯಲ್ಲಿದ್ದ ‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣಗಳಿಂದ ದಂಡ ವಸೂಲಿ ಮೂಲಕ ಖಜಾನೆ ತುಂಬಿಸುತ್ತಿದ್ದ ಕೋಟ್ಯಂತರ ರೂ.ಆದಾಯಕ್ಕೆ ಕರೊನಾ ಅಡ್ಡಿಯಾಗಿದೆ.

    ಕರೊನಾ ಸೇನಾನಿಗಳಾದ ಪೊಲೀಸ್ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಸದ್ಯ ಖಾಕಿ ಪಡೆ ‘ಡ್ರಿಂಕ್ ಆ್ಯಂಡ್ ಡ್ರೈವ್’ ತಪಾಸಣೆ ಸೇರಿ ಸಂಚಾರ ನಿಯಮ ಉಲ್ಲಂಸುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವುದನ್ನೂ ಕೈ ಬಿಟ್ಟಿದೆ. ತಪಾಸಣೆ ನಡೆಸದಂತೆ ಇಲಾಖೆಯಿಂದ ಅಧಿಕೃತ ಸೂಚನೆ ಬಂದಿಲ್ಲ. ಆದರೆ. ‘ಬ್ರೀಥ್ ಅನಲೈಸರ್’ ಸಾಧನ ಬಳಕೆಯಿಂದ ವಾಹನ ಸವಾರರ ಎಂಜಲು ಹಾಗೂ ಉಸಿರಿನಿಂದ ಕರೊನಾ ಸೋಂಕು ತಗಲುವ ಆತಂಕ ಪೊಲೀಸರನ್ನು ಕಾಡುತ್ತಿದೆ.

    ಎರಡು ಪ್ರತ್ಯೇಕ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೊಳಪಡುವ ಬೆಳಗಾವಿ ಉತ್ತರ ಸಂಚಾರ ಮತ್ತು ಧಾರವಾಡ ಸಂಚಾರ ಪೊಲೀಸ್ ಠಾಣೆಗಳಲ್ಲಿ ಕೇವಲ ‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ಮತ್ತು ೆಬ್ರವರಿ ಎರಡೇ ತಿಂಗಳಲ್ಲಿ ಕ್ರಮವಾಗಿ 14,68,100 ರೂ. ಹಾಗೂ 14,19,300 ರೂ. ದಂಡ ವಸೂಲಿ ಮಾಡಲಾಗಿತ್ತು.

    ಕೋಟ್ಯಂತರ ಆದಾಯಕ್ಕೆ ಕೊಕ್ಕೆ: ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ರಾಜ್ಯದ ಎಲ್ಲ ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲೂ ಇಷ್ಟೇ ದಂಡ ವಿಧಿಸಿದ್ದರೂ ಮೂರೇ ತಿಂಗಳಲ್ಲಿ 20 ಕೋಟಿಗೂ ಅಧಿಕ ದಂಡ ವಸೂಲಿಯಾಗುತ್ತಿತ್ತು. ಆದರೆ, ಕಳೆದ ಮಾ.22ರಿಂದ ರಾಜ್ಯಾದ್ಯಂತ ಎಲ್ಲಿಯೂ ‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣ ದಾಖಲಿಸಿಲ್ಲ. ಹೀಗೆ ಆರೋಗ್ಯ ದೃಷ್ಟಿಯಿಂದ ಪೊಲೀಸ್ ಇಲಾಖೆ ತನ್ನ ಆದಾಯವನ್ನೂ ಲೆಕ್ಕಿಸದೆ ಖಾಕಿ ಪಡೆಯ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿರುವುದು ಗಮನಾರ್ಹ.

    ಆದೇಶ ಬಂದರೆ ಕ್ರಮ: ಇಲಾಖೆಯ ಮೇಲಧಿಕಾರಿಗಳ ಅನೌಪಚಾರಿಕ ಆದೇಶದಿಂದಲೇ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿತ ತಪಾಸಣೆ ನಿಲ್ಲಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆ ನಂತರ ಮತ್ತೆ ತಪಾಸಣೆ ನಡೆಸುವ ಅಗತ್ಯವಿದ್ದರೂ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಈಗಲೂ ತಪಾಸಣೆಗೆ ಆದೇಶಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇಲಾಖೆಯ ಸೂಚನೆ ಬಂದರೆ ಸ್ಪೆಷಲ್ ಡ್ರೈವ್ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಬೆಳಗಾವಿಯ ಪೊಲೀಸ್ ಅಧಿಕಾರಿಗಳು.

    ಹಗಲಿನಲ್ಲೇ ಮದ್ಯ ವ್ಯಸನಿಗಳ ಸಂಖ್ಯೆಯಲ್ಲಿ ಹೆಚ್ಚಳ: ಕರೊನಾ ಹಾವಳಿ ಆರಂಭದಲ್ಲಿ ಜನತಾ ಕರ್ಪ್ಯೂ ಜಾರಿಯಾದ ದಿನದಿಂದಲೇ ‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣಗಳ ತಪಾಸಣೆ ನಿಲ್ಲಿಸಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದರಿಂದ ತಪಾಸಣೆ ಅಗತ್ಯವಿರಲಿಲ್ಲ. ಲಾಕ್‌ಡೌನ್ ಸಡಿಲಿಕೆ ನಂತರ ಬಾರ್ ಮತ್ತು ಹೋಟೆಲ್‌ಗಳು ತೆರೆದಿದ್ದರೂ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಪಡೆಯಲು ಮಾತ್ರ ಅನುಮತಿ ನೀಡಲಾಯಿತು. ಹೀಗಾಗಿ ನಗರಗಳಲ್ಲಿ ರಾತ್ರಿ ವೇಳೆ ಮನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಗಲೇ ಬಯಲಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ, ಕುಡಿದು ವಾಹನ ಚಲಾಯಿಸುವ ಸವಾರರನ್ನು ಪರೀಕ್ಷಿಸದ ಕಾರಣಕ್ಕೆ ನಗರದಲ್ಲಿ ಹಗಲು ಕುಡುಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ.

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts