More

    ಮಾಸ್ಕ್ ಧರಿಸದ ಸದಸ್ಯರಿಗೆ ದಂಡ ವಿಧಿಸಿ

    ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಪ.ಪಂ.ನ ಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಜರುಗಿತು.

    ಸದಸ್ಯರು ಸಭೆಯ ಅಜೆಂಡಾದ ವಿಷಯಗಳನ್ನು ರ್ಚಚಿಸುವಾಗ ಮಧ್ಯೆ ಮಧ್ಯೆ ಸಂಬಂಧಪಡದ ವಿಷಯಗಳನ್ನೂ ರ್ಚಚಿಸಿ ತಮ್ಮ ಅನನುಭವವನ್ನು ಪ್ರದರ್ಶಿಸಿದರು.

    ಹೆಚ್ಚಿನ ಸದಸ್ಯರು ಮಾಸ್ಕ್ ಧರಿಸಿರಲಿಲ್ಲ. ಕೆಲವರು ಸರಿಯಾಗಿ ಧರಿಸದೇ, ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂತು. ಪ.ಪಂ ಅಧಿಕಾರಿಗಳು, ಸಿಬ್ಬಂದಿ ಮಾತ್ರ ಮಾಸ್ಕ್ ಧರಿಸಿದ್ದರು. ಅವರು ಸಭೆಯಲ್ಲಿ ಮಾಹಿತಿ ನೀಡುವ ಸಂದರ್ಭದಲ್ಲಿ ‘ಮಾಸ್ಕ್ ತೆಗೆದು ಮಾತನಾಡಿ’ ಎಂದು ಸದಸ್ಯರೇ ಹೇಳಿರುವುದು ವಿಚಿತ್ರವೆನಿಸಿತು. ವಿಷಯ ತಿಳಿದು ಸಭೆಗೆ ಆಗಮಿಸಿದ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ನಿಯಮ ಮೀರಿದ ಸದಸ್ಯರಿಗೆ ದಂಡ ವಿಧಿಸಬೇಕೆಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಜನರಲ್ಲಿ ಜಾಗೃತಿ ಮೂಡಿಸಬೇಕಾದ ಸದಸ್ಯರೇ ನಿಯಮ ಮೀರಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

    ವಾರದ ಸಂತೆಯಲ್ಲಿ ಗುತ್ತಿಗೆದಾರರು ಬೇಕಾಬಿಟ್ಟಿ ವಸೂಲಿ ಮಾಡುತ್ತಿದ್ದು, ವ್ಯಾಪಾರಿಗಳಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಪ.ಪಂಗೆ ಸುಮಾರು 4.20 ಲಕ್ಷ ರೂ. ಭರಣ ಮಾಡುವುದು ಬಾಕಿ ಇದೆ. ಬಾಕಿ ಉಳಿಸಿಕೊಂಡ ಹಣ ವಸೂಲಿ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಗುತ್ತಿಗೆದಾರರು ಸಭೆಗೆ ಬಂದು, ‘ಲಾಕ್​ಡೌನ್ ಸಂದರ್ಭದಲ್ಲಿ ಸಂತೆ ನಡೆಯದ ಕಾರಣ ಹಣ ಭರಣ ಮಾಡಲು ಸಾಧ್ಯವಾಗಿಲ್ಲ’ ಎಂದು ಸ್ಪಷ್ಟನೆ ನೀಡಿದರು.

    ಫುಟ್​ಪಾತ್ ಮೇಲೆ ಸಣ್ಣಪುಟ್ಟ ವ್ಯಾಪಾರಸ್ಥರು ವ್ಯಾಪಾರ ಮಾಡುವುದು, ಅಂಗಡಿಕಾರರು ಬೈಕ್ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ. ಫುಟ್​ಪಾತ್ ಖುಲ್ಲಾಪಡಿಸಬೇಕೆಂದು ಸದಸ್ಯರು ಆಗ್ರಹಿಸಿದರು.

    ಶಿವಾಜಿ ಸರ್ಕಲ್​ನಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸಬೇಕು. ಮಕ್ಕಳ ಉದ್ಯಾನಕ್ಕೆ ನೀಡಿದ 20 ಲಕ್ಷ ರೂ. ಅನುದಾನದಲ್ಲಿ ಅರ್ಧದಷ್ಟು ಹಣವನ್ನು ಪುತ್ಥಳಿ ಸ್ಥಾಪನೆಗೆ ತೆಗೆದಿರಿಸುವಂತೆ ಸೋಮೇಶ್ವರ ನಾಯ್ಕ ಆಗ್ರಹಿಸಿದರು.

    ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ, ಜೆಸಿಬಿ ದುರಸ್ತಿ, ಮೀನು ಮಾರುಕಟ್ಟೆ ಟೆಂಡರ್ ಸೇರಿ ವಿವಿಧ ವಿಷಯಗಳ ಕುರಿತು ರ್ಚಚಿಸಲಾಯಿತು. ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಮುಖ್ಯಾಧಿಕಾರಿ ಅರುಣ ನಾಯ್ಕ, ಸದಸ್ಯರಾದ ಪುಷ್ಪಾ ನಾಯ್ಕ, ಸತೀಶ ನಾಯ್ಕ, ಕಲ್ಪನಾ ನಾಯ್ಕ, ಆದಿತ್ಯ ಗುಡಿಗಾರ ಸೇರಿ ಎಲ್ಲ ಸದಸ್ಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts