More

    ಶತಮಾನಗಳ ಕಾಲ ಉಳಿಯುವ ಮಂದಿರ ನಿರ್ಮಾಣ

    ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿರುವ 67 ಎಕರೆ ಪ್ರದೇಶವನ್ನು ಯೋಜನಾಬದ್ಧವಾಗಿ ವಿನಿಯೋಗಿಸಿ, ಶತ ಶತಮಾನಗಳು ಕಾಲ ಉಳಿಯುವ ಭವ್ಯ, ಸುಂದರ, ಬಲಿಷ್ಠವಾದ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಮಂದಿರ ನಿರ್ಮಾಣದ ಉದ್ದೇಶದಿಂದ ಕೆಲವೊಂದು ಕಲ್ಲಿನ ಕೆಲಸ ನಿರ್ವಹಿಸಲಾಗಿದೆ. ಅದನ್ನೂ ಸೇರಿದಂತೆ ನೀಲಿನಕ್ಷೆ ತಯಾರಿಸಲಾಗುವುದು. ಮಂದಿರಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಪ್ರಾಚೀನ ಸಂಸ್ಕೃತಿ ಸಾರುವ ಕಲಾಭವನ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ. ನಿರ್ಮಾಣ ಸಮಿತಿ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದೆ. ಮುಂದಿನ ಬಾರಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ಮಂದಿರ ನಿರ್ಮಾಣ ಸಮಿತಿಯ ಜಂಟಿ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಈ ವೇಳೆ ಶಂಕುಸ್ಥಾಪನೆ ದಿನಾಂಕವನ್ನು ಗೊತ್ತುಪಡಿಸಲಾಗುವುದು ಎಂದು ಸ್ವಾಮೀಜಿ ವಿವರಿಸಿದರು.

    ರಾಮ ಮಂದಿರ ನಿರ್ಮಾಣಕ್ಕೆ ಸಾತ್ವಿಕ ಬಲದ ಅಗತ್ಯವೂ ಇದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಆಸ್ತಿಕರೂ ತಮ್ಮ ಮನೆಯಲ್ಲಿ ರಾಮ ತಾರಕ ಮಂತ್ರದ ಜಪ, ಶ್ರೀರಾಮನ ಭಜನೆ ಮಾಡಬೇಕು. ನಮ್ಮಲ್ಲಿ ಕಣ್ಮರೆಯಾಗಿರುವ ಈ ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತರಲೂ ಇದೊಂದು ಶುಭ ಅವಕಾಶವಾಗಿದೆ. ದೇವಾಲಯ- ಸಂಘ ಸಂಸ್ಥೆಗಳೂ ನಿರಂತವಾಗಿ ರಾಮಾಯಣ ಪ್ರವಚನದಂತಹ ಕಾರ್ಯಕ್ರಮ ಆಯೋಜಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

    ವಿಶ್ವಹಿಂದು ಪರಿಷತ್ ಪ್ರಾಂತೀಯ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಪೇಜಾವರ ಮಠದ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ, ಕಾರ್ಪೊರೇಟರ್ ಶಕೀಲಾ ಕಾವ, ಧರ್ಮದರ್ಶಿ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.

    ಆರ್ಥಿಕ ಸಹಾಯ ಮಾಡಲು ಅವಕಾಶ
    ಮಂದಿರ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಲು ಇಚ್ಛಿಸುವವರಿಗಾಗಿ ಟ್ರಸ್ಟ್ ಹೆಸರಿನಲ್ಲಿ ಅಯೋಧ್ಯೆಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಲು ಉದ್ದೇಶಿಸಲಾಗಿದೆ. ದಾನಿಗಳು ಮೊತ್ತವನ್ನು ಖಾತೆಗೆ ಜಮಾ ಮಾಡಬಹುದು, ಯಾರು ಬೇಕಾದರೂ ತಮ್ಮ ಶಕ್ತಿ ಅನುಸಾರ ಖಾತೆಗೆ ದುಡ್ಡು ಹಾಕಬಹುದು. ಲೆಕ್ಕಪತ್ರಗಳನ್ನು ನೋಡಿಕೊಳ್ಳಲು ಆಡಿಟರ್ ನೇಮಿಸಲೂ ಉದ್ದೇಶಿಲಾಗಿದೆ. ಇದರ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು. ಮಂದಿರ ನಿರ್ಮಾಣ ಕಾರ್ಯಕ್ಕೆ ಪೇಜಾವರ ಮಠದ ವತಿಯಿಂದ ವಿಶ್ವೇಶತೀರ್ಥ ಶ್ರೀಪಾದರ ಹೆಸರಿನಲ್ಲಿ 5 ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದು ಸ್ವಾಮೀಜಿ ವಿವರಿಸಿದರು.

    ವಿಶ್ವಹಿಂದು ಪರಿಷತ್ ಈಗಾಗಲೇ 108 ರಾಮ ತಾರಕ ಮಂತ್ರ ಜಪದ ಆಭಿಯಾನ ಆರಂಭಿಸಿದೆ. ಏ.4ರಂದು ನಡೆಯಲಿರುವ ರಾಮ ನವಮಿಯನ್ನು ಎಲ್ಲ ಜಿಲ್ಲೆ, ಪ್ರಖಂಡದಲ್ಲಿ ವೈಶಿಷ್ಟೃಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
    ಪ್ರೊ.ಎಂ.ಬಿ.ಪುರಾಣಿಕ್
    ವಿಎಚ್‌ಪಿ ಪ್ರಾಂತೀಯ ಕಾರ್ಯಾಧ್ಯಕ್ಷ

    ರಾಮ ಮಂದಿರ ನಿರ್ಮಾಣ ಗುರುಗಳ ಕನಸಾಗಿತ್ತು. ಅದಕ್ಕಾಗಿ ಅವರು ಹಗಲು ರಾತ್ರಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಇಡೀ ಆಸ್ತಿಕ ಸಮುದಾಯವೇ ಬೆಂಬಲವಾಗಿತ್ತು. ಗುರುಗಳಿಗೆ ನೀಡಿದ ಸಹಕಾರವನ್ನು ನಮಗೂ ನೀಡಬೇಕು ಎಂದು ಬಯಸುತ್ತೇವೆ.
    ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
    ಪೇಜಾವರ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts