More

    ಪಿಡಿಒ ಏಕಾಏಕಿ ವರ್ಗಾವಣೆಗೆ ವಿರೋಧ

    ಹಗರಿಬೊಮ್ಮನಹಳ್ಳಿ: ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಪಂ ಪಿಡಿಒ ವರ್ಗಾವಣೆ ವಿರೋಧಿಸಿ ಗ್ರಾಪಂ ಸದಸ್ಯರು ಹಾಗೂ ಕಾಯಕಬಂಧುಗಳು ಪಟ್ಟಣದ ತಾಪಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

    ಗ್ರಾಪಂ ಸದಸ್ಯ ಎಸ್.ರವೀಂದ್ರಗೌಡ ಮಾತನಾಡಿ, ಬಾಚಿಗೊಂಡನಹಳ್ಳಿ ಗ್ರಾಪಂನಲ್ಲಿ ನಾಲ್ಕು ವರ್ಷಗಳಿಂದ ಪಿಡಿಒ ಮಾಗಳದ ನಿಂಗಪ್ಪ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ತಾಲೂಕಿನಲ್ಲಿಯೇ ಮಾದರಿ ಗ್ರಾಪಂ ಆಗಿಸಲು ಶ್ರಮಿಸಿದ್ದಾರೆ. ಇದೀಗ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಪಂಗೆ ದಿಢೀರ್ ವರ್ಗಾವಣೆ ಆದೇಶ ಹೊರಡಿಸಿರುವುದು ದುರುದ್ದೇಶಪೂರಕವಾಗಿದೆ. ಶೀಘ್ರವೇ ವರ್ಗಾವಣೆ ರದ್ದುಗೊಳಿಸಬೇಕು.

    ಇದನ್ನೂ ಓದಿ: ಪಿಡಿಒ ವರ್ಗಾವಣೆಗೆ ಸದಸ್ಯರ ಪಟ್ಟು; ಅಪ್ಪೇನಹಳ್ಳಿ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

    ಇಲ್ಲವಾದಲ್ಲಿ ಗ್ರಾಪಂ ವ್ಯಾಪ್ತಿಯ ಅಂಕಸಮುದ್ರ, ಅಡವಿ ಆನಂದದೇವನಹಳ್ಳಿ, ಬಾಚಿಗೊಂಡನಹಳ್ಳಿ ಮತ್ತು ಚಿಲುಗೋಡು ಗ್ರಾಮದ 2 ಸಾವಿರ ನರೇಗಾ ಕೂಲಿ ಕಾರ್ಮಿಕರು, ಕಾಯಕ ಬಂಧುಗಳು ಸೇರಿ ಗ್ರಾಪಂ ಸದಸ್ಯರು ಜುಲೈ 31ರಂದು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು.

    ರಾಜೀನಾಮೆಗೆ ಸಿದ್ಧ

    ಆ. 2 ರಂದು ನಡೆಯುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ(2ನೇ ಅವಧಿಯ)ಯನ್ನು ಬಹಿಷ್ಕರಿಸಲಾಗುವುದು. ಆ.3 ರಂದು ತಾಪಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದ್ಯಾವುದಕ್ಕೆ ಸ್ಪಂದಿಸದಿದ್ದಲ್ಲಿ ಆ.5ರಂದು ಸಾಮೂಹಿಕ ರಾಜೀನಾಮೆಗೆ ಎಲ್ಲ ಸದಸ್ಯರು ಸಿದ್ಧರಿದ್ದಾರೆ ಎಂದರು.


    ತಾಪಂ ನರೇಗಾ ಎಡಿ ರಮೇಶ್ ಮಹಾಲಿಂಗಪುರಗೆ ಮನವಿ ಸಲ್ಲಿಸಲಾಯಿತು. ಸದಸ್ಯರಾದ ಪ್ರವೀಣ ಕುಮಾರ, ಮೈಲಮ್ಮ, ಕಂಠೆಪ್ಪ, ಎನ್.ರಾಮಣ್ಣ, ಕೋರಿ ಶಿವಾನಂದ, ವಿ.ಮಂಜುನಾಥ ಮುಖಂಡರಾದ ರವಿಕುಮಾರ ಎಲಿಗಾರ, ಎಚ್.ಪರಮೇಶ್ವರ, ಮೈಲಪ್ಪ, ಹಾಲೇಶ, ಕಾಯಕಬಂಧು ಒಕ್ಕೂಟದ ಅಧ್ಯಕ್ಷ ಸೋಮಶೇಖರ್, ಶರಣಪ್ಪ, ಬಸವರಾಜ, ಹಾಲೇಶ್ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts