More

    ನಾಡಕಚೇರಿ ಕಂಪ್ಯೂಟರ್ ಆಪರೇಟರ್‌ಗಳ ವೇತನ ಪಾವತಿಸಿ

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳಿಗೆ ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
    ಕಚೇರಿ ಕಂಪ್ಯೂಟರ್ ಆಪರೇಟರ್‌ಗಳಿಗೆ ನಿಗದಿತ ಸಮಯಕ್ಕೆ ಸಂಬಳ ದೊರೆಯದೆ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ. ಜಿಲ್ಲೆಯ ಎಲ್ಲ ನಾಡಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 10ವರ್ಷಕ್ಕೂ ಹೆಚ್ಚು ಕಾಲ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರೂ ಹಲವಾರು ತಿಂಗಳಿಂದ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಜತೆಗೆ ಪಿಎಫ್ ಹಣ ಸಂದಾಯದ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಜಿಲ್ಲಾಧಿಕಾರಿಗಳ ಹಂತದಲ್ಲಿ ಟೆಂಡರ್ ಮಂಜೂರಾಗಿದ್ದರೂ ನಾಡಕಚೇರಿಗಳಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಬಾಕಿ ಉಳಿದ ವೇತನ ಪಾವತಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಆರೋಗ್ಯ ಅಥವಾ ಸಮಸ್ಯೆಗಳಿದ್ದರೂ ಒಂದು ದಿನದಮಟ್ಟಿಗೂ ರಜೆ ಸಿಗುತ್ತಿಲ್ಲ ಈ ಬಗ್ಗೆಯೂ ಗಮನಹರಿಸಬೇಕು ಎಂದು ಒತ್ತಾಯಿಸಿದರು.
    ವೇತನ ಸಂಬಂಧ ಕಂಪ್ಯೂಟರ್ ಆಪರೇಟರ್‌ಗಳು ಸಂಬಂಧಪಟ್ಟ ಜಿಲ್ಲಾ ಸಂಯೋಜಕರನ್ನು ವಿಚಾರಿಸಿದರೆ ಬೆಂಗಳೂರು ಆಟಲ್ ಜೀ ಜನಸ್ಮೇಹಿ ಕೇಂದ್ರ ನಿರ್ದೇಶನಾಲಯಕ್ಕೆ ತಿಳಿಸಲಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಈ ಕೆಲಸದಿಂದ ಬರುವ ಆದಾಯ ನಂಬಿಕೊಂಡು ಜೀವನ ನಡೆಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳು ಜೀವನ ನಿರ್ವಹಣೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
    ಸಂಘದ ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಡಿ.ಪ್ರತಿಭಾ, ಕಾರ್ಯದರ್ಶಿ ವೈ.ಜಿ.ಕಿರಣ್, ಸಹ ಕಾರ್ಯದರ್ಶಿ ಮುರುಗೇಶ್, ಖಜಾಂಚಿ ಅರುಣ್‌ಕುಮಾರ್, ಸದಸ್ಯರಾದ ಮುಕ್ತಿಯಾರ್ ಅಹಮದ್, ಡಿ.ಎಸ್.ದಿವ್ಯಾ, ಎಚ್.ಸಿ.ಸತೀಶ್, ಎಸ್.ರಂಜಿತಾ, ಎಂ.ಪುಷ್ಪಾವತಿ, ತಿಪ್ಪೇಶ್‌ನಾಯ್ಕ, ನಿವಾಸ್, ಎಚ್. ಜಿ.ಸಚಿನ್‌ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts