More

    ಬೆಳೆ ಹಾನಿ ಪರಿಹಾರ ಶೀಘ್ರ ಪಾವತಿಸಿ

    ಶಿರಹಟ್ಟಿ: ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತಿವೃಷ್ಟಿ ಸಂಭವಿಸಿ ಫಸಲು ಹಾಳಾಯಿತು. ರೈತರ ನಷ್ಟ ತುಂಬಿಕೊಡಲು ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದರೂ ಯಾವೊಬ್ಬ ರೈತರ ಖಾತೆಗೂ ಹಣ ಜಮೆ ಮಾಡಿಲ್ಲ. ಈ ಬಗ್ಗೆ ಮಾಹಿತಿ ಕೇಳಿದ ರೈತರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಕುರಿತಂತೆ ಮಾಹಿತಿ ಕೊಡಬೇಕು ಎಂದು ಪಟ್ಟಣದ ರೈತ ಮುಖಂಡರು ಶುಕ್ರವಾರ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರನ್ನು ಆಗ್ರಹಿಸಿದರು.

    ವಿ.ವಿ. ಕಪ್ಪತ್ತನವರ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ನಾಗರಾಜ ಲಕ್ಕುಂಡಿ ಮಾತನಾಡಿ, ಅತಿವೃಷ್ಟಿಯಿಂದ ರೈತರ ಮುಂಗಾರು ಹಂಗಾಮಿನ ಬೆಳೆಗಳು ಹಾನಿಯಾಗಿ ರೈತರು ಕೈಸುಟ್ಟುಕೊಂಡು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಸರ್ಕಾರದ ಪುಡಿಗಾಸಿಗೆ ಚಾತಕಪಕ್ಷಿಯಂತೆ ಕಾಯುವಂತಾಗಿದೆ ಎಂದು ಆರೋಪಿಸಿದರು.

    ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿ ಡಾಟಾ ಎಂಟ್ರಿ ಮೂಲಕ ತಾಲೂಕಿನ 20,500 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಮಾಹಿತಿ ಕಳುಹಿಸಿದೆ. ಈ ಕುರಿತಂತೆ ಗದಗ ಜಿಲ್ಲೆಗೆ 84 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಹಸೀಲ್ದಾರ್ ಗೋಣೆಣ್ಣವರ ಪ್ರತಿಕ್ರಿಯಿಸಿದರು.

    ಶಿರಹಟ್ಟಿ ತಾಲೂಕಿನ ಎಷ್ಟು ರೈತರಿಗೆ ಪರಿಹಾರ ಸಿಗಲಿದೆ ಹಾಗೂ ಪರಿಹಾರ ಹಣವೆಷ್ಟು ಎಂದು ರೈತರು ಪ್ರಶ್ನಿಸಿದರು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ತಹಸೀಲ್ದಾರ್ 4,250 ರೈತರ ಡಾಟಾ ಎಂಟ್ರಿಯಂತೆ ಅಂದಾಜು 3.70 ಕೋಟಿ ರೂ. ಸಿಗಬಹುದು ಎಂದು ತಿಳಿಸಿದರು.

    ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಹಿಡಿಯೋದು ಕಷ್ಟವಾಗಿದೆ. ಫೋನ್ ಮಾಡಿದರೆ ಯಾವಾಗಲೂ ನಾಟ್ ರಿಚೇಬಲ್ ಇರುತ್ತಾರೆ ಎಂದು ಮುಖಂಡರು ದೂರಿದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಪಾಪಣ್ಣವರ ಅವರನ್ನು ಕರೆಯಿಸಿದ ತಹಸೀಲ್ದಾರ್, ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.

    ಪರಿಹಾರ ಹಣ ಹಂತ ಹಂತವಾಗಿ ರೈತರ ಕೈಸೇರಬೇಕಾದರೆ ಮುಂದಿನ ವರ್ಷದ ಮುಂಗಾರು ಹಂಗಾಮು ಶುರುವಾಗುತ್ತದೆ. ರೈತರು ಸಹನೆ ಕಳೆದುಕೊಳ್ಳುವ ಮೊದಲೇ ರೈತರಿಗೆ ಪರಿಹಾರದ ಹಣ ಸಿಗುವಂತೆ ಮಾಡಿ ಎಂದು ಮುಖಂಡರು ಆಗ್ರಹಿಸಿದರು.

    ವೈ.ಎಸ್. ಪಾಟೀಲ, ರಾಮಣ್ಣ ಡಂಬಳ, ವೀರಣ್ಣ ಮಜ್ಜಗಿ, ಸಿ.ಸಿ. ನೂರಶೆಟ್ಟರ್, ಪಪಂ ಅಧ್ಯಕ್ಷ ಪರಮೇಶ ಪರಬ, ಫಕೀರೇಶ ರಟ್ಟಿಹಳ್ಳಿ, ಎಸ್.ಬಿ. ಕಪ್ಪತ್ತನವರ, ಯಲ್ಲಪ್ಪ ಇಂಗಳಗಿ, ಸುರೇಶ ಅಕ್ಕಿ, ಮುತ್ತು ಮಜ್ಜಗಿ, ಬಸವರಾಜ ಚಿಕ್ಕತೋಟದ, ಸಂತೋಷ ಕುಬೇರ, ಆನಂದ ಸೊರಟೂರ, ಪುಲಕೇಶಿ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts