More

    ಕತ್ತಲಲ್ಲೇ ನಡೆಯಬೇಕು ರೋಗಿಗಳು

    ಅಕ್ಕಿಆಲೂರ: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ ವೇಳೆ ಚಿಕಿತ್ಸೆಗೆ ತೆರಳುವವರು ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ಹೋಗಬೇಕಾದ ಸ್ಥಿತಿಯಿದೆ.

    ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯ 52 ಗ್ರಾಮಗಳ ಜನ ಅಕ್ಕಿಆಲೂರ ಪ್ರಾಥಮಿಕ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ಎದುರು, ಸಿಂಧೂರ ಸಿದ್ದಪ್ಪ ವೃತ್ತದಿಂದ ಆಸ್ಪತ್ರೆಗೆ ಆಗಮಿಸುವ ರಸ್ತೆಯಲ್ಲಿ ಕಳೆದ ಐದು ವರ್ಷದಿಂದ ಬೀದಿ ದೀಪದ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ರಾತ್ರಿ ವೇಳೆ ಆಸ್ಪತ್ರೆಗೆ ಸಾಗುವ ಮಾರ್ಗ ಸಂಪೂರ್ಣ ಕತ್ತಲುಮಯವಾಗುತ್ತದೆ. ಹೀಗಾಗಿ ಸಾರ್ವಜನಿಕರು ಬ್ಯಾಟರಿ ತೆಗೆದುಕೊಂಡೇ ಈ ಮಾರ್ಗದಲ್ಲಿ ಸಾಗಬೇಕು.

    ಇದೇ ಮಾರ್ಗದಲ್ಲಿ ಉರ್ದು ಮತ್ತು ಕನ್ನಡ ಶಾಲೆಗಳಿವೆ. ಆಸ್ಪತ್ರೆ ಹಿಂಭಾಗದಲ್ಲಿ ಬಾಲಕರ ವಸತಿ ನಿಲಯವಿದ್ದು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಹೆದ್ದಾರಿಯಿಂದ ಆಸ್ಪತ್ರೆ ಮುಂಭಾಗದ ಮೂಲಕ ಮೇಲಿನ ಕೆರೆಯವರೆಗೂ ಯಾವುದೇ ಬೀದಿ ದೀಪದ ವ್ಯವಸ್ಥೆ ಇಲ್ಲ. ಆಸ್ಪತ್ರೆ ಮುಂಭಾಗದಲ್ಲಿ ವಿದ್ಯುತ್ ಅಳವಡಿಸಬೇಕು ಎಂದು ಅನೇಕ ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಜನ ದೂರುತ್ತಿದ್ದಾರೆ.

    ಆಸ್ಪತ್ರೆ ಮಾರ್ಗದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಆಸ್ಪತ್ರೆ ಪಕ್ಕದಲ್ಲಿರುವ ಉರ್ದು ಮತ್ತು ಕನ್ನಡ ಶಾಲೆಯ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಮದ್ಯದ ಬಾಟಲಿಗಳು ಎಲ್ಲಿ ಬೇಕೆಂದರಲ್ಲಿ ಬಿದ್ದಿರುವುದೇ ಇದಕ್ಕೆ ನಿದರ್ಶನ. ಅಲ್ಲದೆ, ಈಗಾಗಲೆ ಅನೇಕ ಬಾರಿ ಕನ್ನಡ ಮತ್ತು ಉರ್ದು ಶಾಲೆಗಳ ಸಾಮಗ್ರಿಗಳು ಕಳವಾಗಿವೆ. ಆದರೂ, ಹೆಸ್ಕಾಂ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಬಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ನಾನೇ ನಾಲ್ಕು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಆಸ್ಪತ್ರೆ ಎದುರು ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

    | ಪ್ರವೀಣಕುಮಾರ ಬಿಜ್ಜೂರ, ಪಿಡಿಒ

    ಅಕ್ಕಿಆಲೂರ ಆಸ್ಪತ್ರೆ ಎದುರು ವಿದ್ಯುತ್ ಇಲ್ಲದೆ ಸಮಸ್ಯೆಯಾಗಿರುವುದು ನಿಜ. ಕಂಬ ಅಳವಡಿಸಲು ಯೋಜನಾ ವರದಿ ತಯಾರಿಸಿ ಹಾವೇರಿ ಹೆಸ್ಕಾಂ ಕಚೇರಿಗೆ ವರದಿ ನೀಡಲಾಗಿದೆ. ಹಾವೇರಿಯ ನಾಗರಾಜ ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ. ಮುಂದಿನ ತಿಂಗಳು ಕಾಮಗಾರಿಗೆ ಹಸಿರು ನಿಶಾನೆ ದೊರೆಯಲಿದೆ.

    | ಚಂದ್ರಶೇಖರ ಅಪ್ಪಿನಬಯಲು, ಅಕ್ಕಿಆಲೂರ ಹೆಸ್ಕಾಂ ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts