More

    ಧರ್ಮ ರಾಜಕಾರಣಕ್ಕೆ ಜೋತುಬಿದ್ದ ಪಕ್ಷಗಳು

    | ಗಂಗಾಧರ್ ಬೈರಾಪಟ್ಟಣ ರಾಮನಗರ
    ಚುನಾವಣೆ ಸಂದರ್ಭದಲ್ಲಿ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿ ಮತ ಹಾಕಿಸಿಕೊಳ್ಳುವುದು ಹಳೇ ತಂತ್ರಗಾರಿಕೆ. ಆದರೆ, ಈ ಬಾರಿ ಚುನಾವಣೆಗೆ
    ಈಗಾಗಲೇ ತಂತ್ರ – ಪ್ರತಿತಂತ್ರ ಹೆಣೆಯುತ್ತಿರುವ ಪಕ್ಷಗಳು ಧರ್ಮ ರಾಜಕೀಯಕ್ಕೆ ಜೋತು ಬಿದ್ದಿವೆ. ಇದರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಮತದಾರರು ತೀರ್ಥ ಕ್ಷೇತ್ರದ ದರ್ಶನವನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಧರ್ಮಸ್ಥಳ ಪ್ರವಾಸ, ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಗಳು ಒಂದೆಡೆಯಾದರೆ, ಮತ್ತೊಂದೆಡೆ ರಾಮದೇವರ ಮಂದಿರ ನಿರ್ಮಾಣದ ಚರ್ಚೆ ಮುನ್ನೆಲೆಗೆ ಬಂದಿದ್ದು, ಧರ್ಮ ರಾಜಕಾರಣದ ಸದ್ದು ಜೋರಾಗಿದೆ.

    ಧರ್ಮ ರಾಜಕಾರಣಕ್ಕೆ ಜೋತುಬಿದ್ದ ಪಕ್ಷಗಳು

    ರಾಮನಗರದಿಂದ ಧರ್ಮಸ್ಥಳಕ್ಕೆ ತೆರಳಲು ಸಿದ್ದಗೊಂಡಿರುವ ಬಸ್.

    ಓಂಶಕ್ತಿಯಿಂದ ಆರಂಭ: ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗುವ ಪರಿಪಾಠ ಆರಂಭವಾಗಿದೆ. ಇದೀಗ ಜೆಡಿಎಸ್ ಧರ್ಮಸ್ಥಳ ಯಾತ್ರೆ ಮಾಡಿಸುವ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದು, ಈಗಾಗಲೇ 100ಕ್ಕೂ ಹೆಚ್ಚು ಬಸ್‌ಗಳಲ್ಲಿ ಮತದಾರರನ್ನು ಧರ್ಮಸ್ಥಳಕ್ಕೆ ಕಳುಹಿಸಿ ದೇವರ ದರ್ಶನ ಮಾಡಿಸಿದೆ. ರಾಮನಗರ ಜಿಲ್ಲೆಯಿಂದಲೇ ಸುಮಾರು 20 ಸಾವಿರ ಮಂದಿ ಪ್ರತಿವರ್ಷ ಓಂ ಶಕ್ತಿ ದೇವಸ್ಥಾನಕ್ಕೆ ತೆರಳುತ್ತಾರೆ. ಈ ಬಾರಿಯೂ ಓಂ ಶಕ್ತಿ ದರ್ಶನಕ್ಕೆ ತೆರಳುವ ಮಂದಿ ಮುಖಂಡರ ಬಳಿ ಆರ್ಥಿಕ ನೆರವು ಕೋರಿದ್ದಾರೆ. ಸಣ್ಣಪುಟ್ಟ ಆರ್ಥಿಕ ನೆರವಿನೊಂದಿಗೆ ಆರಂಭಗೊಂಡ ಪ್ರವಾಸ ಪರಿಪಾಠ ಧರ್ಮಸ್ಥಳ ಯಾತ್ರೆವರೆಗೂ ಬಂದು ನಿಂತಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಪ್ರಸನ್ನ ಪಿ. ಗೌಡ ಸಹ
    ತೀರ್ಥಕ್ಷೇತ್ರ ಯಾತ್ರೆ ಮಾಡಿಸಿದ್ದರು.
    ಶ್ರೀನಿವಾಸ ಕಲ್ಯಾಣೋತ್ಸವ: ಭಾರತೀಯ ಜನತಾ ಪಕ್ಷ ಹಿಂದು ಟ್ರಂಪ್ ಕಾರ್ಡ್ ಮುಂದಿಟ್ಟು ಮತ ಕೇಳುವುದಕ್ಕೆ ಸೆಡ್ಡು ಹೊಡೆಯಲು ಜಿಲ್ಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಜಿಲ್ಲೆಯ ಮತದಾರನ್ನು ಸೆಳೆಯುವ ಕೆಲಸ ಮಾಡಿತ್ತು. ಅತ್ತ ಮಾಗಡಿಯಲ್ಲಿ ಬಿಜೆಪಿ ಮುಖಂಡರಾದ ಪ್ರಸಾದ್‌ಗೌಡ ಧರ್ಮಸ್ಥಳಕ್ಕೆ ಯಾತ್ರೆ ಕಳುಹಿಸುವ ಕೆಲಸ ಮಾಡುತ್ತಿದ್ದರೆ. ಮತ್ತೊಬ್ಬ ಆಕಾಂಕ್ಷಿ ರಂಗಧಾಮಯ್ಯ ಬಿಡದಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳುವ ಮೂಲಕ
    ಧರ್ಮ ರಾಜಕಾರಣದ ಪಾಲುದಾರರಾಗಲು ಹೊರಟಿದ್ದಾರೆ

    ಜೇಬಿಗೆ ಭಾರ: ಜಿಲ್ಲೆಯಲ್ಲಿ ತೀರ್ಥ ಕ್ಷೇತ್ರಕ್ಕೆ ಯಾತ್ರೆ ಮಾಡಿಸುವ ಹುಮ್ಮಸ್ಸು ಸದ್ಯದ ಮಟ್ಟಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರತಿಯೊಬ್ಬ ಮತದಾರನನ್ನು ಧರ್ಮ ಸ್ಥಳ ಯಾತ್ರೆಗೆ ಕಳುಹಿಸಲು ಕನಿಷ್ಠ ಒಂದು ಸಾವಿರ ರೂ. ಖರ್ಚು ತಗಲುತ್ತಿದೆ. ಕೆಲವರಿಗೆ ಎಂದು ಆರಂಭಗೊಂಡ ಯಾತ್ರೆ, ಈಗ ಪ್ರತಿ ಹಳ್ಳಿಗೂ ಹಬ್ಬುತ್ತಿದೆ. ಇದು ಇಷ್ಟಕ್ಕೆ ಸೀಮಿತವಾಗದೆ ಪಕ್ಷಕ್ಕೆ ಮತ ಹಾಕುವ ಮತದಾರರನ್ನು ಹುಡುಕಿ ಧರ್ಮಸ್ಥಳಕ್ಕೆ ಬನ್ನಿ, ಉಚಿತವಾಗಿ ಕಳಿಸುತ್ತೇವೆ ಎಂದು ಕರೆಯುವ ಪರಿಸ್ಥಿತಿಗೆ ಬಂದು ನಿಂತಿದೆ. ಇದು ಸ್ಥಳೀಯ ಅಭ್ಯರ್ಥಿ ಜೇಬಿಗೆ ಭಾರವಾಗಿ ಪರಿಣಮಿಸಿದೆ.

    ಕಾಂಗ್ರೆಸ್‌ನಲ್ಲೂ ಸಿದ್ದತೆ: ಧರ್ಮ ರಾಜಕಾರಣ ಜಿಲ್ಲೆಯ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿಯೇ ಹೆಚ್ಚಿದೆ. ಜೆಡಿಎಸ್‌ನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸ್ಥಳ ಯಾತ್ರೆ ಆರಂಭಗೊಂಡ ನಂತರ ಸ್ಥಳೀಯವಾಗಿ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆಯನ್ನು ತಂದಿದೆ. ಇದರಿಂದ ವಿಚಲಿತರಾದ ಕಾಂಗ್ರೆಸ್ ಮುಖಂಡರು ತಾವೂ ಪ್ರವಾಸಕ್ಕೆ ಕಳುಹಿಸಬೇಕು ಎನ್ನುವ ಒತ್ತಡವನ್ನು ಅಭ್ಯರ್ಥಿ ಇಕ್ಬಾಲ್ ಹುಸೇನ್ ಮೇಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಒಂದು ಸುತ್ತಿನ ಮಾತುಕತೆಯೂ ನಡೆದಿದ್ದು, ಬಹುತೇಕ ಈ ತಿಂಗಳ 25ರ ನಂತರ 10 ಬಸ್‌ಗಳಲ್ಲಿ ಮೊದಲ ತಂಡ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ತೆರಳಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ತಾವು ಕ್ಷೇತ್ರ ಪ್ರವಾಸ ಕೈಗೊಂಡ ವೇಳೆ ಮಹಿಳೆಯರು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಕಳುಹಿಸಿಕೊಡುವಂತೆ ಕೋರಿದ ಹಿನ್ನೆಲೆಯಲ್ಲಿ ಅವರನ್ನು ಕಳಿಸಲಾಗುತ್ತಿದೆ. ಇದು ರಾಜಕಾರಣವನ್ನು ಹೊರತುಪಡಿಸಿ ಪಕ್ಷಾತೀತವಾಗಿ ನಡೆಸುತ್ತಿರುವ ಸೇವೆ.
    ನಿಖಿಲ್ ಕುಮಾರಸ್ವಾಮಿ,ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts