More

    ಮಣಿಪುರ ಕಲಹಕ್ಕೆ ಸಂಸತ್ ಕಲಾಪ ಬಲಿ: ಉಭಯ ಸದನ ಮುಂದೂಡಿಕೆ; ಆಪ್ ಸಂಸದ ಅಮಾನತು

    ನವದೆಹಲಿ: ಮಣಿಪುರದ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯವಾಗಿ ಪ್ರತಿಪಕ್ಷಗಳು ಗದ್ದಲ ನಡೆಸಿದ ಕಾರಣ ಸೋಮವಾರ ಕೂಡ ಸಂಸತ್ ಅಧಿವೇಶನ ಕೋಲಾಹಲದಲ್ಲಿ ಕೊನೆಗೊಂಡಿತು.

    ಮಣಿಪುರದ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಮಾಡಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ (ಆಪ್) ಸದಸ್ಯ ಸಂಜಯ್ ಸಿಂಗ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸ ಲಾಯಿತು.

    ಮೇಲ್ಮನೆಯ ಕಲಾಪ ಮೂರು ಸಾರಿ ಮುಂದೂಡಲಾಯಿತು. ಸಭಾಧ್ಯಕ್ಷರ ಸೂಚನೆಯನ್ನು ಕಡೆಗಣಿಸಿ ಅವರ ಪೀಠದ ಮುಂದಿನ ಅಂಗಳದಲ್ಲಿ ಕೂಗಾಡುತ್ತಿದ್ದ ಆಪ್ ನಾಯಕ ಸಂಜಯ್ ಸಿಂಗ್​ರನ್ನು ಅಮಾನತು ಮಾಡಲಾಯಿತು. ಬಿಜೆಪಿಯ ಸಭಾನಾಯಕರಾದ ಸಚಿವ ಪಿಯೂಷ್ ಗೋಯಲ್ ಮಂಡಿಸಿದ ಸಿಂಗ್​ರನ್ನು ಅಮಾನತುಗೊಳಿಸುವ ಗೊತ್ತುವಳಿಯನ್ನು ಮಧ್ಯಾಹ್ನದ ವೇಳೆಯಲ್ಲಿ ಸದನ ಧ್ವನಿಮತದಿಂದ ಅನುಮೋದಿಸಿತು.

    ಮಧ್ಯಾಹ್ನ 3ಕ್ಕೆ ಸಮಾವೇಶಗೊಂಡಾಗಲೂ ಮಣಿಪುರದ ವಿಷಯದ ಪ್ರತಿಭಟನೆ ಮುಂದುವರಿಯಿತು ಹಾಗೂ ಸಿಂಗ್ ಅಮಾನತನ್ನು ವಿರೋಧ ಪಕ್ಷಗಳು ಖಂಡಿಸಿದವು. ಅಮಾನತುಗೊಂಡರೂ ಸದನಕ್ಕೆ ಬಂದ ಸಿಂಗ್​ರನ್ನು ಹೊರಹೋಗುವಂತೆ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೂಚಿಸಿದರು. ಮಣಿಪುರದ ವಿಷಯವಾಗಿ ಚರ್ಚೆಗೆ ನೋಟಿಸ್ ನೀಡಿದ ಪಟ್ಟಿಯಲ್ಲಿ ಟಿಎಂಸಿ ಏಕಿಲ್ಲ ಎಂದು ಈ ಪಕ್ಷದ ಸದಸ್ಯ ಡೆರೆಕ್ ಒಬ್ರಿಯಾನ್ ಪ್ರಶ್ನಿಸಿದರು. ಈ ವಿಷಯವಾಗಿ ಅವರು ಮತ್ತು ಧನ್ಕರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸದನ ಮುಂದುವರಿಯುವ ಲಕ್ಷಣ ಕಾಣದ ಕಾರಣ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು.

    ಸಂಸತ್ ಆವರಣದಲ್ಲಿ ಪ್ರತಿಭಟನೆ: ಸಂಸತ್ ಹೊರಗೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಮಹಿಳೆಯ ಲೈಂಗಿಕ ಶೋಷಣೆ ಹೆಚ್ಚಿದೆ ಎಂದು ಬಿಜೆಪಿ ಆರೋಪಿಸಿದರೆ, ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ದೂರಿದವು.

    ದಿನದ ಮಟ್ಟಿಗೆ ಮುಂದೂಡಿಕೆ: ಲೋಕಸಭೆ ಸಮಾವೇಶಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷಗಳು ಸದಸ್ಯರು ಮಣಿಪುರದ ವಿಷಯವಾಗಿ ಪ್ರತಿಭಟನೆ ಆರಂಭಿಸಿದರು. ಸ್ಪೀಕರ್ ಮುಂದಿನ ಅಂಗಳದಲ್ಲಿ ಜಮಾಯಿಸಿ ಘೋಷಣೆ ಕೂಗತೊಡಗಿದರು. ಇದರಿಂದ ಸದನವನ್ನು ಅಲ್ಪಕಾಲ ಮುಂದೂಡಲಾಗಿತ್ತು. ನಂತರವೂ ಪರಿಸ್ಥಿತಿ ಸುಧಾರಿಸದ ಕಾರಣ ದಿನ ಮಟ್ಟಿಗೆ ಮುಂದಕ್ಕೆ ಹಾಕಲಾಯಿತು.

    ಮಣಿಪುರದ ಹಿಂಸಾಚಾರ ಕುರಿತಂತೆ ಸರ್ಕಾರ ಮುಕ್ತ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದರೂ ಪ್ರತಿಪಕ್ಷಗಳು ರಚ್ಚೆ ಹಿಡಿದಿರುವುದು ಸರಿಯಲ್ಲ. ಮಣಿಪುರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ನಾನಿಲ್ಲಿದ್ದೇನೆ. ಚರ್ಚೆ ನಡೆದರಷ್ಟೆ ಸತ್ಯ ಹೊರಬರಲು ಸಾಧ್ಯ. ಆದರೆ, ಅದು ಅವರಿಗೆ ಏಕೋ ಬೇಡವಾಗಿದೆ.
    | ಅಮಿತ್ ಷಾ, ಗೃಹ ಸಚಿವ

    ಸೂಕ್ಷ್ಮ ವಿಷಯದ ಬಗ್ಗೆ ಚರ್ಚೆಯಾಗುವುದನ್ನು ಪ್ರತಿಪಕ್ಷಗಳು ಪ್ರತಿಭಟನೆ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ತಡೆಯುತ್ತಿವೆ. ಮಣಿಪುರ ಕುರಿತಂತೆ ಅಧಿವೇಶನದ ಆರಂಭದಲ್ಲೇ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
    | ಪ್ರಲ್ಹಾದ್ ಜೋಶಿ, ಸಂಸದೀಯ ವ್ಯವಹಾರಗಳ ಸಚಿವ

    ಪ್ರಧಾನಿ ಮೋದಿ ಮಣಿಪುರದ ವಿಷಯವಾಗಿ ಮಾಧ್ಯಮದ ಜತೆ ಮಾತನಾಡುತ್ತಾರೆ. ಆದರೆ, ಸದನದಲ್ಲಿ ಈ ಬಗ್ಗೆ ಚಕಾರ ಎತ್ತದೆ ಸಂಸತ್​ಗೆ ಅಪಮಾನ ಮಾಡುತ್ತಿದ್ದಾರೆ. ಅಧಿವೇಶನ ನಡೆಯುತ್ತಿರುವ ವೇಳೆ ಸರ್ಕಾರದ ಮುಖ್ಯಸ್ಥರು ಸದನದಲ್ಲೇ ಮಾತನಾಡಬೇಕು.
    | ಎಂ.ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ

    ಸಾಲಗಾರರ ವಿರುದ್ಧ ಕಠಿಣ ವರ್ತನೆ ಬೇಡ

    ಸಾಲ ಮರುಪಾವತಿ ವಿಚಾರದಲ್ಲಿ ಸಾಲಗಾರರ ವಿರುದ್ಧ ಕಠಿಣವಾಗಿ ನಡೆದುಕೊಳ್ಳಬಾರದೆಂದು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್​ಗಳಿಗೆ ಸೂಚಿಸಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಪ್ರಶ್ನೋತ್ತರ ಕಲಾಪದಲ್ಲಿ ತಿಳಿಸಿದರು. ಗದ್ದಲದ ಮಧ್ಯೆಯೇ ಸರ್ಕಾರ ಲೋಕಸಭೆಯಲ್ಲಿ ಮೂರು ಮಸೂದೆ ಮಂಡಿಸಿದ್ದು, ಒಂದನ್ನು ಹಿಂಪಡೆದಿದೆ. ಡಿಎನ್​ಎ ತಂತ್ರಜ್ಞಾನ (ಅಪ್ಲಿಕೇಷನ್ ಬಳಕೆ) ನಿಯಂತ್ರಣ ಮಸೂದೆಯನ್ನು ವಾಪಸು ಪಡೆದರೆ, ರಾಷ್ಟ್ರೀಯ ದಂತವೈದ್ಯ ಆರೋಗ, ರಾಷ್ಟ್ರೀಯ ನರ್ಸಿಂಗ್ ಮತ್ತು ಸೂಲಗಿತ್ತಿ ಆಯೋಗ ಹಾಗೂ ಪರಿಶಿಷ್ಟ ಜಾತಿ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದೆ.

    ವಿಪಕ್ಷ ನಾಯಕರ ಸಭೆ: ಸಂಸತ್ ಬಿಕ್ಕಟ್ಟನ್ನು ಹೋಗಲಾಡಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜತೆಗೆ ಮಾತುಕತೆ ನಡೆಸಿದರು. ಇನ್ನೊಂದೆಡೆ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

    ಕೆಂಪು ಡೈರಿ ಗದ್ದಲ

    ಜೈಪುರ: ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿ, ಸಂಪುಟದಿಂದ ವಜಾಗೊಂಡಿರುವ ರಾಜೇಂದ್ರ ಗುಧಾ ಅವರನ್ನು ಸೋಮವಾರ ಅಶಿಸ್ತಿನ ವರ್ತನೆ ಕಾರಣಕ್ಕಾಗಿ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಇವರ ಜತೆಗೆ ಬಿಜೆಪಿ ಶಾಸಕ ಮದನ್ ದಿಲಾವರ್ ಅವರನ್ನೂ ಅಧಿವೇಶನದ ಉಳಿದ ಅವಧಿಗೆ ಅಮಾನತು ಗೊಳಿಸಲಾಗಿದೆ. ಸದನ ದಲ್ಲಿ ಕೆಂಪು ಡೈರಿ ಪ್ರದರ್ಶಿಸಿದ ಗುಧಾ, ಸಭಾಧ್ಯಕ್ಷ ಸಿ.ಪಿ ಜೋಶಿ ಅವರ ಪೀಠದ ಬಳಿಗೆ ಬಂದು ತಮಗೆ ಹೇಳಿಕೆ ನೀಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಅವರ ವರ್ತನೆಗೆ ಸ್ಪೀಕರ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಕೊಠಡಿಯಲ್ಲಿ ಭೇಟಿಯಾಗಲು ಸಲಹೆ ಮಾಡಿದರು. ಇದಕ್ಕೆ ಒಪ್ಪದ ಗುಧಾ ಪ್ರತಿಭಟನೆ ಮುಂದುವರಿಸಿದರು. ಏತನ್ಮಧ್ಯೆ, ಬಿಜೆಪಿ ಶಾಸಕರು ಕೋಲಾಹಲ ಸೃಷ್ಟಿಸಿದರು.

    ಸಂಸದೀಯ ವ್ಯವಹಾರಗಳ ಸಚಿವ ಧಾರಿವಾಲ್ ಮಾತನಾಡಲು ನಿಂತಾಗ ಅವರತ್ತ ಧಾವಿಸಿದ ಗುಧಾ ಮೈಕ್ ಎಸೆದರು. ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಅವರು ಗುಧಾರನ್ನು ತಳ್ಳಿದರು. ಸಚಿವ ರಾಮಲಾಲ್ ಜಾಟ್ ಮತ್ತು ಇತರ ಕಾಂಗ್ರೆಸ್ ಶಾಸಕರು ಕೂಡ ಮುಂದೆ ಬಂದು ಗುಧಾರನ್ನು ಸುತ್ತುವರೆದರು. ಪರಸ್ಪರ ಕೈ-ಕೈ ಮಿಲಾಯಿಸುವ ಹಂತ ತಲುಪಿತು. ನಂತರ ಗುಧಾ ಅವರನ್ನು ಸದನದಿಂದ ಹೊರಗೆ ಕರೆದೊಯ್ಯುವಂತೆ ಮಾರ್ಷಲ್​ಗಳಿಗೆ ಸ್ಪೀಕರ್ ಆದೇಶಿಸಿದರು.

    ಅದರಲ್ಲಿ ಏನಿದೆ?

    ವಿಧಾನಸಭೆಯಲ್ಲಿ ಕೆಂಪು ಡೈರಿ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸದನ ಪ್ರಾರಂಭವಾಗುವ ಮೊದಲು ಶಾಸಕ ಗುಧಾ ಹೇಳಿದ್ದರು. ಡೈರಿಯಲ್ಲಿ ಕೆಲವು ರಹಸ್ಯಗಳಿವೆ.ಅದನ್ನು ಸದನದಲ್ಲೇ ಬಯಲು ಮಾಡುವುದಾಗಿ ತಿಳಿಸಿದರು. ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಲಿಲ್ಲ. ಗದ್ದಲ ಕಾರಣ ಕಲಾಪ ಮುಂದೂಡಲಾಯಿತು. ಆರ್​ಟಿಡಿಸಿ ಅಧ್ಯಕ್ಷ ಧಮೇಂದ್ರ ರಾಥೋಡ್ ಅವರ ನಿವಾಸದಲ್ಲಿ ಆದಾಯ ತೆರಿಗೆ ದಾಳಿ ನಡೆದ ಸಂದರ್ಭದಲ್ಲಿ ಡೈರಿಯನ್ನು ಭದ್ರವಾಗಿ ಇಟ್ಟುಕೊಳ್ಳುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮಗೆ ಸೂಚನೆ ಹೇಳಿದ್ದರು. ಈ ಡೈರಿಯಲ್ಲಿ ಶಾಸಕರಿಗೆ ನೀಡಿದ ಹಣದ ವಿವರಗಳಿವೆ. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಅವರ ಪುತ್ರ ವೈಭವ್ ಹೆಸರು ಡೈರಿಯಲ್ಲಿ ಪ್ರಸ್ತಾಪ ಆಗಿದೆ ಎಂದು ಗುಧಾ ಹೇಳಿದ್ದಾರೆ. ಇದರ ವಿವರ ಬಹಿರಂಗ ಪಡಿಸುವಂತೆ ಪ್ರತಿಪಕ್ಷ ಬಿಜೆಪಿ ಕೂಡ ಒತ್ತಾಯ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts