More

    ಪಾಲಿಕೆಯ ಅಧಿಕೃತ ಸ್ಥಳದಲ್ಲೂ ಅಡ್ಡಾದಿಡ್ಡಿ ಪಾರ್ಕಿಂಗ್

    ಭರತ್ ಶೆಟ್ಟಿಗಾರ್ ಮಂಗಳೂರು
    ನಗರದಲ್ಲಿ ಮೊದಲೇ ವಾಹನಗಳನ್ನು ಪಾರ್ಕ್ ಮಾಡಲು ಸರಿಯಾಗಿ ಜಾಗವಿಲ್ಲ. ಈಗ ಮಹಾನಗರ ಪಾಲಿಕೆ ಗುರುತಿಸಿದ ಅಧಿಕೃತ ಜಾಗದಲ್ಲೂ ಅಡ್ಡಾದಿಡ್ಡಿ ಪಾರ್ಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ.
    ಲಾಲ್‌ಭಾಗ್‌ನಲ್ಲಿರುವ ಮಹಾನಗರ ಪಾಲಿಕೆ ಕಟ್ಟಡದಿಂದ ಕೂಗಳತೆ ದೂರದಲ್ಲಿರುವ ಪಬ್ಬಾಸ್ ಬಳಿ ವಾಹನಗಳನ್ನು ಅದರಲ್ಲೂ ಬೈಕ್‌ಗಳನ್ನು ಫುಟ್‌ಪಾತ್‌ಗೆ ಅಡ್ಡಲಾಗಿ ಪಾರ್ಕ್ ಮಾಡುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿನ ಸಮಸ್ಯೆಗೆ ಮುಖ್ಯ ಕಾರಣಕರ್ತರು ಆನ್‌ಲೈನ್ ಮೂಲಕ ಪಾರ್ಸಲ್ ಡೆಲಿವರಿಯವರು ಎಂದರೆ ತಪ್ಪಲ್ಲ. ಈ ಕುರಿತು ಯಾರಾದರೂ ಪ್ರಶ್ನಿಸಿದರೆ, ಪ್ರಶ್ನಿಸಿದವರನ್ನೇ ಬಯ್ಯುವಷ್ಟು ಮಟ್ಟಿಗೆ ಇದು ಬೆಳೆದಿದೆ.

    ಇಲ್ಲಿನ ಪಬ್ಬಾಸ್ ಕಟ್ಟಡ ಹಾಗೂ ಕರಾವಳಿ ಉತ್ಸವ ಮೈದಾನ ಮಧ್ಯೆ ರಸ್ತೆಯೊಂದು ಹಾದು ಹೋಗುತ್ತದೆ. ಲಾಲ್‌ಭಾಗ್ ಕಡೆಯಿಂದ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುವವರು, ಅಲ್ಲಿ ಫುಟ್‌ಪಾತ್‌ನಿಂದ ಇಳಿದ ರಸ್ತೆ ದಾಟಿ ಮುಂದಕ್ಕೆ ಹೋಗಬೇಕು. ಆದರೆ ಫುಟ್‌ಪಾತ್‌ಗೆ ಅಡ್ಡಲಾಗಿ ಬೈಕ್‌ಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರು ಬೈಕ್‌ಗಳೆಡೆಯಿಂದ ನುಸುಳಿಕೊಂಡು ಸಾಗಬೇಕು. ಫುಟ್‌ಪಾತ್‌ನಲ್ಲಿ ಸಾಗುವ ಹಿರಿಯರಂತೂ ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
    ಟೋಯಿಂಗ್ ಮಾಡಿ ದಂಡಕ್ಕೆ ಆಗ್ರಹ

    ಮಧ್ಯಾಹ್ನ ಸಾಯಂಕಾಲ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಬೈಕ್‌ಗಳನ್ನು ನಿಲ್ಲಿಸುವುದು ಕಂಡು ಬರುತ್ತದೆ. ಒಂದು ಬೈಕ್ ಹೋದರೆ ಅಲ್ಲಿಗೆ ಮತ್ತೊಂದು ಬೈಕ್ ಬರುತ್ತದೆ. ಇತರರು ಬೈಕ್ ನಿಲ್ಲಿಸುವಾಗ ಪಾರ್ಕಿಂಗ್ ಹಣಕ್ಕಾಗಿ ಓಡಿ ಬರುವ ವ್ಯಕ್ತಿಗಳು, ಫುಟ್‌ಪಾತ್‌ಗೆ ಅಡ್ಡಲಾಗಿ ಬೈಕ್ ನಿಲ್ಲಿಸಿದ್ದರೂ ಕೇಳುವುದಿಲ್ಲ ಎಂದು ಆರೋಪಿಸಿದ್ದಾರೆ ಸಾರ್ವಜನಿಕರು. ಪೊಲೀಸರು ಒಂದು ಬಾರಿ ಬೈಕ್‌ಗಳನ್ನು ಟೋಯಿಂಗ್ ಮಾಡಿ ದಂಡ ಹಾಕಬೇಕು ಎಂದು ಆಗ್ರಹ ಕೇಳಿ ಬಂದಿದೆ.

    ಫುಟ್‌ಪಾತ್‌ನಲ್ಲೂ ಮಾರಾಟ: ಲೇಡಿಹಿಲ್-ಲಾಲ್‌ಭಾಗ್ ರಸ್ತೆ ಫುಟ್‌ಪಾತ್ ಮಾರಾಟಗಾರರಿಗೆ ಮೀಸಲು ಎನ್ನುವಂತಾಗಿದೆ. ತರಕಾರಿ, ಬೊಂಬೆಗಳು, ಪುಸ್ತಕ, ಆಲಂಕಾರಿಕ ವಸ್ತುಗಳು, ಮಳೆ ಆರಂಭವಾಯಿತೆಂದರೆ ಛತ್ರಿ, ರೈನ್‌ಕೋಟ್ ಸೇರಿದಂತೆ ಎಲ್ಲ ವಸ್ತುಗಳನ್ನು ಇಲ್ಲಿನ ಫುಟ್‌ಪಾತ್‌ನಲ್ಲಿ ಕುಳಿತು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಫುಟ್‌ಪಾತ್‌ನಲ್ಲಿ ಸಾಗಬೇಕಾದ ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಈ ಬಗ್ಗೆಯೂ ಪೊಲೀಸರು, ಪಾಲಿಕೆ ಅಧಿಕಾರಿಗಳು ಮೌನವಾಗಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

    ಪಬ್ಬಾಸ್ ಬಳಿ ಫುಟ್‌ಪಾತ್‌ಗಳಿಗೆ ಅಡ್ಡಲಾಗಿ ಬೈಕ್‌ಗಳನ್ನು ಇಟ್ಟಿರುವ ಕುರಿತು ಸಾರ್ವಜನಿಕರಿಂದ ದೂರು ಬಂದಿಲ್ಲ. ಸ್ಥಳ ಪರಿಶೀಲನೆಗೆ ಸಿಬ್ಬಂದಿಗೆ ಸೂಚಿಸಲಾಗುವುದು. ಟೋಯಿಂಗ್ ಮಾಡಿ ಫೈನ್ ಹಾಕಲು ಸೂಚನೆ ನೀಡುತ್ತೇನೆ.
    ಮಂಜುನಾಥ ಶೆಟ್ಟಿ, ಎಸಿಪಿ ಸಂಚಾರ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts